
ರಾಮನಗರ (ಏ.23): ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡಿದ್ದರೆ ದಕ್ಷಿಣ ರಾಜ್ಯಗಳ ಸಂಸತ್ ಸ್ಥಾನಗಳ ಸಂಖ್ಯೆ 129 ರಿಂದ 195ಕ್ಕೆ ಹೆಚ್ಚಳವಾಗುತ್ತಿತ್ತು. ಆದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟದ ನಡೆ ಈ ಸುವರ್ಣಾವಕಾಶ ಕೈಚೆಲ್ಲುವಂತೆ ಮಾಡಿವೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹರಿಹಾಯ್ದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮಸೂದೆಯಲ್ಲಿ ಶೇಕಡ 50ರಷ್ಟು ಸಂಸತ್ ಸದಸ್ಯರ ಸ್ಥಾನಗಳು ಹೆಚ್ಚಳವಾಗುತ್ತಿತ್ತು. ಇದರಿಂದ ಕರ್ನಾಟಕಕ್ಕೆ 28 ರಿಂದ 42, ತಮಿಳುನಾಡಿಗೆ 39 ರಿಂದ 59 ಸ್ಥಾನ ಸಿಗುತ್ತಿತ್ತು. ಆದರೀಗ 2027ರ ಜನಗಣತಿ ಆಧರಿಸಿದರೆ ಕರ್ನಾಟಕಕ್ಕೆ 3, ತಮಿಳುನಾಡಿಗೆ 10 ಸ್ಥಾನ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದರು.
ದೇಶದಲ್ಲಿ 1952ರಲ್ಲಿ 36 ಕೋಟಿ ಜನಸಂಖ್ಯೆ ಇದ್ದಾಗ ಮೊದಲ ಕ್ಷೇತ್ರ ಪುನರ್ ವಿಂಗಡಣೆ ನಡೆದಿತ್ತು. 1962ರಲ್ಲಿ 43 ಕೋಟಿ ಜನಸಂಖ್ಯೆ ಇದ್ದಾಗ 494 ಸಂಸತ್ ಸ್ಥಾನ, 1971ರಲ್ಲಿ 54 ಕೋಟಿ ಜನಸಂಖ್ಯೆಗೆ 543 ಸಂಸದರ ಸ್ಥಾನಗಳಿತ್ತು. ಈಗ 140 ಕೋಟಿ ಜನಸಂಖ್ಯೆ ಇದೆ. ಆದರೂ ಕಳೆದ 55 ವರ್ಷಗಳಿಂದ ಕ್ಷೇತ್ರ ಪುನರ್ ವಿಂಗಡಣೆಯೇ ಆಗಿಲ್ಲ ಎಂದು ಹೇಳಿದರು.
ಜನಸಂಖ್ಯೆ ಆಧಾರದ ಮೇಲೆ ಶಾಸನಸಭೆ ಮತ್ತು ಲೋಕಸಭೆ ಸದಸ್ಯ ಸ್ಥಾನಗಳು ಹೆಚ್ಚಳವಾಗಬೇಕು ಎಂಬುದು ಸಾಮಾನ್ಯ ಜ್ಞಾನ. ಆದರೆ, ಕಾಂಗ್ರೆಸ್ ಮಿತ್ರ ಪಕ್ಷಗಳು ಯಾವ ಉದ್ದೇಶದಿಂದ ವಿರೋಧಿಸಿದರೋ ಗೊತ್ತಿಲ್ಲ. ಈಗ 2011ರ ಗಣತಿ ಆಧರಿಸಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ದಕ್ಷಿಣ ಭಾರತದ ಸಂಸತ್ ಸ್ಥಾನಗಳ ಸಂಖ್ಯೆ ಕಡಿಮೆಯಾಗಿ ಅನ್ಯಾಯವಾಗುತ್ತದೆ ಎಂದು ಅಪಪ್ರಚಾರ ನಡೆಸಲಾಗಿದೆ ಎಂದು ದೂರಿದರು.
ಇಂಗ್ಲೆಂಡ್ ಗಿಂತ ಭಾರತ 13 ಪಟ್ಟು ದೊಡ್ಡ ದೇಶವಾಗಿದೆ. ಆ ದೇಶದಲ್ಲಿ 650 ಸಂಸದ ಸ್ಥಾನಗಳಿವೆ. ಆದರೆ, ಭಾರತದಲ್ಲಿ ಕೇವಲ 543 ಸ್ಥಾನಗಳಷ್ಟೇ ಇವೆ. ದಕ್ಷಿಣ ಭಾರತದಲ್ಲಿ 5 ರಾಜ್ಯಗಳಿಂದ ಸೇರಿ 27 ಕೋಟಿ ಜನಸಂಖ್ಯೆಗೆ 129 ಸಂಸತ್ ಸದಸ್ಯ ಸ್ಥಾನಗಳಿದ್ದರೆ, ಉತ್ತರ , ಪೂರ್ವ, ಪಶ್ಚಿಮ ಭಾರತದಲ್ಲಿ ಶೇಕಡ 80ರಷ್ಟು ಜನಸಂಖ್ಯೆಗೆ 416 ಸಂಸದರ ಸ್ಥಾನಗಳಿವೆ. 2027ರ ಜನಗಣತಿ ಆಧರಿಸಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಂಸತ್ ಸದಸ್ಯ ಸ್ಥಾನಗಳ ಸಂಖ್ಯೆ ತೀರಾ ಕಡಿಮೆಯಾಗಲಿವೆ ಎಂದು ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಓಬಿಸಿ ಉಪಾಧ್ಯಕ್ಷೆ ಆದ ರಾಜ್ಯ ವಕ್ತಾರೆ ಅಶ್ವಿನಿ ಶಂಕರ್ , ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವನಪುರ ಪ್ರಕಾಶ್, ಚಂದ್ರಶೇಖರ್, ಶಿವಮುತ್ತು, ಗ್ರಾಮಾಂತರ ಅಧ್ಯಕ್ಷ ಜಗದೀಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಮಾಧ್ಯಮ ಸಂಚಾಲಕ ಚೇತನ್, ಮುಖಂಡರಾದ ಕಾಳಯ್ಯ, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಜಯಕುಮಾರ್, ಎಸ್. ಆರ್. ನಾಗರಾಜ್, ಪದ್ಮನಾಭ, ಸುನೀಲ್, ಪವಿತ್ರ, ವೀಣಾ, ದೇವಿಕಾ ಮತ್ತಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.