Davangere Bypoll: ಕಾಂಗ್ರೆಸ್‌ಗೆ ಮುಸ್ಲಿಂ ನಾಯಕರ ತಲಾಖ್‌ ಎಚ್ಚರಿಕೆ, ನಮಗೆ ಕಾಂಗ್ರೆಸ್‌ ಅಲ್ಲ, ಕಾಂಗ್ರೆಸ್‌ಗೆ ನಾವು ಬೇಕು

Kannadaprabha News   | Kannada Prabha
Published : Apr 23, 2026, 05:32 AM IST
Davangere Bypoll Crisis Muslim Leaders Threaten to Quit Congress Over Jabbar Naseer Suspension rav

ಸಾರಾಂಶ

ದಾವಣಗೆರೆ ಉಪ ಚುನಾವಣೆ ಬಳಿಕ ಮುಸ್ಲಿಂ ನಾಯಕರನ್ನು ವಜಾಗೊಳಿಸಿದ್ದಕ್ಕೆ ರಾಜ್ಯ ಉಲಮಾ ಮಂಡಳಿ ಕಾಂಗ್ರೆಸ್‌ಗೆ ತೀವ್ರ ಎಚ್ಚರಿಕೆ. ಈ ನಿರ್ಧಾರ ಹಿಂಪಡೆಯದಿದ್ದರೆ ಪಕ್ಷಕ್ಕೆ 'ತ್ರಿವಳಿ ತಲಾಖ್' ನೀಡುತ್ತೇವೆಂದು ಗುಡುಗಿದೆ. ಮುಂದಿನ ನಿರ್ಧಾರಕ್ಕಾಗಿ ರಾಜ್ಯಮಟ್ಟದ ಉಲಮಾ ಸಮಾವೇಶ ಕರೆಯುವುದಾಗಿ ತಿಳಿಸಿದೆ..

ಬೆಂಗಳೂರು (ಏ.23): ‘ದಾವಣಗೆರೆ ಉಪ ಚುನಾವಣೆ ನಂತರ ಅನಗತ್ಯವಾಗಿ ಮುಸ್ಲಿಂ ನಾಯಕರ ಮೇಲೆ ಕೈಗೊಂಡಿರುವ ಕಠಿಣ ನಿರ್ಧಾರಗಳನ್ನು ಹಿಂಪಡೆಯದಿದ್ದರೆ ಕಾಂಗ್ರೆಸ್‌ ಪಕ್ಷಕ್ಕೇ ತ್ರಿವಳಿ ತಲಾಕ್‌ ನೀಡಲಾಗುವುದು. ಅಷ್ಟೇ ಅಲ್ಲ, ಪಕ್ಷದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು.

ಹೀಗಂತ ರಾಜ್ಯ ಉಲಮಾ ಮಂಡಳಿ ಕಾಂಗ್ರೆಸ್‌ ಪಕ್ಷಕ್ಕೆ ಎಚ್ಚರಿಕೆ ನೀಡಿದೆ.

ಬುಧವಾರ ಪಕ್ಷದಿಂದ ಮುಸ್ಲಿಂ ಮುಖಂಡರನ್ನು ವಜಾಗೊಳಿಸಿದ ಕಾಂಗ್ರೆಸ್ ಹೈಕಮಾಂಡ್‌ ವಿರುದ್ಧ ಮುಸ್ಲಿಂ ಧಾರ್ಮಿಕ ನಾಯಕರು, ವಿವಿಧ ಸಂಘಟನೆಗಳು ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್‌ ಪಕ್ಷಕ್ಕೆ ಮುಸ್ಲಿಮರ ಅಗತ್ಯವಿದೆಯೇ ಹೊರತು ಮುಸ್ಲಿಮರಿಗೆ ಕಾಂಗ್ರೆಸ್ ಪಕ್ಷದ ಅಗತ್ಯವಿಲ್ಲ. ಸಮುದಾಯದ ನಾಯಕರ ಮೇಲೆ ಕೈಗೊಂಡಿರುವ ಕ್ರಮಗಳನ್ನು ಹಿಂಪಡೆಯದಿದ್ದರೆ ಕಾಂಗ್ರೆಸ್‌ಗೆ ತಲಾಖ್ ನೀಡಲಾಗುವುದು. ಅಷ್ಟೇ ಅಲ್ಲದೆ, ಮುಂದೇನು ಮಾಡಬೇಕು ಎಂದು ಶೀಘ್ರದಲ್ಲೇ ನಡೆಯಲಿರುವ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಜಮೀಯತ್‌ ಉಲಮಾ ನಾರ್ತ್‌ ಬೆಂಗಳೂರು ಅಧ್ಯಕ್ಷ ಮಹಮ್ಮದ್‌ ಸಲಾವುದ್ದೀನ್‌ ಅಯ್ಯುಬಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಹಲವು ದಶಕಗಳ ಹಿಂದೆ ಮುಸ್ಲಿಂ ಸಮುದಾಯದ ಹಿರಿಯರು ಆದೇಶ ಕೊಟ್ಟಂತೆ ಅಂದಿನಿಂದಲೂ ಕಾಂಗ್ರೆಸ್‌ನೊಂದಿಗೆ ಇದ್ದೇವೆ. ಈಗ ನಮ್ಮ ಸಮುದಾಯದ ಮುಖಂಡರಿಗೆ ಅನ್ಯಾಯ ಮಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ. 2028ರಲ್ಲಿ ಮತ್ತೆ ಚುನಾವಣೆ ನಡೆಯಲಿದೆ. ಸಮುದಾಯದ ಉಲಮಾಗಳು, ಹಿರಿಯರು ಮುಂದೇನು ಮಾಡಬೇಕೆಂದು ನಿರ್ಧಾರಿಸುತ್ತಾರೆ ಎಂದರು.

ಕಾಂಗ್ರೆಸ್‌ ನಂಬಿಕೊಂಡಿಲ್ಲ:

ಕಾಂಗ್ರೆಸ್‌ ನಂಬಿಕೊಂಡು ಮುಸ್ಲಿಂ ಸಮುದಾಯ ಅನ್ನ ತಿನ್ನುತ್ತಿದೆ ಎಂದು ಭಾವಿಸಿದರೆ ಅದು ತಪ್ಪು. ನಮ್ಮನ್ನು ಅಲ್ಲಾ (ಭಗವಂತ) ಕಾಪಾಡುತ್ತಾನೆ. ಆತನ ಮೇಲೆ ನಮಗೆ ಭರವಸೆ ಇದೆಯೇ ಹೊರತು ಯಾವ ಮನುಷ್ಯರ ಮೇಲೂ ಅಲ್ಲ. ಯಾವುದೇ ನೋಟಿಸ್‌ ನೀಡದೆ ಸುಳ್ಳು ಆರೋಪಗಳ ಹೇಳಿಕೆಗಳನ್ನು ಆಧರಿಸಿ ಪಕ್ಷದ ಹೈಕಮಾಂಡ್‌ ನಸೀರ್‌ ಅಹ್ಮದ್‌, ಅಬ್ದುಲ್‌ ಜಬ್ಬಾರ್‌ ಅವರ ವಿರುದ್ಧ ಕ್ರಮಕೈಗೊಂಡಿರುವುದು ಅನ್ಯಾಯ. ಅವರನ್ನು ಮೊಸರಿನಲ್ಲಿ ಬಿದ್ದ ನೊಣವನ್ನು ಹೊರಗೆ ಹಾಕಿದಂತೆ ಪಕ್ಷದಿಂದ ವಜಾ ಮಾಡಿದ್ದು, ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಇಬ್ಬರು ನಾಯಕರನ್ನು ಹೊರ ಹಾಕಿದ ಕೂಡಲೇ ಕಾಂಗ್ರೆಸ್‌ ಪಕ್ಷಕ್ಕೆ ಒಳಿತಾಗಲಿದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಇಡೀ ಸಮುದಾಯ ಇವರ ಹಿಂದಿದೆ ಎಂಬುದು ಸುರ್ಜೇವಾಲಾ, ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಿದೆಯೇ? ಎಲ್ಲ ಉಲಮಾಗಳು ಒಗ್ಗೂಡಿ ಸಮುದಾಯದ ಹಿರಿಯರೊಂದಿಗೆ ಕಾಂಗ್ರೆಸ್‌ ವಿರುದ್ಧ ನಿಲ್ಲುವಂತೆ ಆದೇಶಿಸಿದರೆ ಯಾವ ಮುಸ್ಲಿಂ ನಿಮಗೆ ಓಟು ಕೊಡುತ್ತಾನೆ? ಆಗ ನಿಮ್ಮ ಸ್ಥಿತಿ ಏನು ಎಂಬುದನ್ನು ಮೊದಲು ಅರಿತುಕೊಳ್ಳಿ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಸಮುದಾಯದ ಮುಖಂಡ ಅಬ್ದುಲ್‌ ರಝಾಕ್‌, ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ಸಚಿವ ಜಮೀರ್‌ ಅಹ್ಮದ್‌ ಖಾನ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ಮತ್ತು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಅಬ್ದುಲ್‌ ಜಬ್ಬಾರ್‌ ಏನೆಲ್ಲಾ ಕೆಲಸ ಮಾಡಿದ್ದಾರೆ ಎಂಬುದು ಪಕ್ಷದ ನಾಯಕರಿಗೆ ಗೊತ್ತಿಲ್ಲವೇ? ಎಸ್.ಎಸ್.ಮಲ್ಲಿಕಾರ್ಜುನ, ಒಂದು ಚಹಾ ಕುಡಿದ್ರೂ ಅವರ ಋಣ ಇಟ್ಟುಕೊಳ್ಳಬಾರದು ಅಂದಿದ್ದಾರೆ. ಹಾಗಿದ್ದರೆ ಅವರಿಗೆ ಸತತ 40 ವರ್ಷಗಳ ಕಾಲ ಶಾಮನೂರು ಶಿವಶಂಕರಪ್ಪ ಅವರ ಗೆಲುವಿಗೆ ಮುಸ್ಲಿಂ ಸಮುದಾಯ ಸಹಕರಿಸಿದ್ದು ಗೊತ್ತಿಲ್ಲವೇ? ಯಾಕೆ ಅವರಿಗೆ ಮುಸ್ಲಿಮರ ಸಹಾಯದ ಋಣ ಇಲ್ವಾ ಎಂದು ಪ್ರಶ್ನಿಸಿದರು.

ಎಸ್‌ಎಸ್‌ಎಂ ವಿರುದ್ಧ ಯಾಕೆ ಕ್ರಮ ಇಲ್ಲ?:

ಟಿಕೆಟ್‌ ಘೋಷಣೆ ಆಗುವುದಕ್ಕೂ ಮೊದಲೇ ಹೋಗಿ ನಾಮಪತ್ರ ಸಲ್ಲಿಕೆ ಮಾಡಿದ್ದ ಮಲ್ಲಿಕಾರ್ಜುನ್‌ ಮತ್ತವರ ಕುಟುಂಬದ ವಿರುದ್ಧ ಏಕೆ ಹೈಕಮಾಂಡ್‌ ಕ್ರಮಕೈಗೊಂಡಿಲ್ಲ? 2023ರಲ್ಲಿ ಶಿವಮೊಗ್ಗದಲ್ಲಿ ಕುಳಿತು ಯಡಿಯೂರಪ್ಪ ಅವರ ಮಗ ರಾಘವೇಂದ್ರ ಪರ ಮತ ಹಾಕುವಂತೆ ಹೇಳಿದ್ದ ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿರಲಿಲ್ಲ. ಈಗ ಚುನಾವಣೆ ಫಲಿತಾಂಶ ಬರುವುದಕ್ಕೂ ಮೊದಲೇ ಮುಸ್ಲಿಂ ನಾಯಕರನ್ನು ವಜಾ ಮಾಡಿದ್ದು ಸರಿಯೇ? ಇದು ಮುಸ್ಲಿಂ ಸಮುದಾಯದ ವಿರುದ್ಧದ ಷಡ್ಯಂತ್ರ ಅಲ್ಲದೇ ಮತ್ತೇನು? ನಮ್ಮ‌ ನಾಯಕರ ವಿರುದ್ದ ತೆಗೆದುಕೊಂಡ ಕ್ರಮ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ತಿಂಗಳು ಅರಮನೆ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಉಲಮಾ ಸಮಾವೇಶದಲ್ಲಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಬನ್ನೇರುಘಟ್ಟ ಬಿಲ್ಲಾಲ್‌ ಮಸೀದಿಯ ಮೌಲಾನ ಮಹಮ್ಮದ್‌ ಶಾಕೀರ್ ಉಲ್ಲಾ, ಮೌಲಾನಾ ಮಫ್ತಿ ಸೈಯದ್ ಇಬ್ರಾಹಿಂ ಸೇರಿ ಇತರರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೃಹ ಸಚಿವ ಜಿ. ಪರಮೇಶ್ವರ್ ಮೇಲೆ ಆರೋಪ; FIR ದಾಖಲಿಸಲು ಕೋರ್ಟ್ ಆದೇಶ, ಪೊಲೀಸ್ ಠಾಣೆಯಲ್ಲಿ ಮೀನಾಮೇಷ!
ಮೋದಿಯನ್ನು 'ಟೆರರಿಸ್ಟ್'​ ಎಂದ ಖರ್ಗೆಗೆ ಬೀದರ್​ನಲ್ಲಿ ಕಪ್ಪು ಬಿಳುಪಿನ ವ್ಯತ್ಯಾಸ ತಿಳಿಸಿದ ಉಪ ರಾಷ್ಟ್ರಪತಿ