
ಚುನಾವಣೆಯ ಕಾವು ಏರುತ್ತಿದ್ದಂತೆಯೇ ಆರೋಪ, ಪ್ರತ್ಯಾರೋಪಗಳು ಸರ್ವೇ ಸಾಮಾನ್ಯ. ಆದರೆ ಇದರ ನಡುವೆ ಕೆಲವು ರಾಜಕೀಯ ಮುಖಂಡರು, ಯಾರನ್ನೋ ಓಲೈಸುವುದಕ್ಕಾಗಿ ಅಥವಾ ತಮಗೆ ಆಗದವರನ್ನು ಹೀಯಾಳಿಸುವ ಭರದಲ್ಲಿ ನಾಲಿಗೆ ಹರಿಬಿಡುವುದು ಮಾಮೂಲು. ತಮ್ಮ ಸ್ಥಾನ ಏನು, ತಮ್ಮ ಅಧಿಕಾರ ಏನು ಎನ್ನುವುದನ್ನೂ ಮರೆತು ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡುವುದು ನಡೆದೇ ಇರುತ್ತದೆ. ಈ ಮೂಲಕ ತಮ್ಮತನವನ್ನು ತೋರಿಸಿಕೊಳ್ಳುತ್ತಾರೆ ಎಂಬ ಭಾರಿ ಆರೋಪ ಅವರ ಮೇಲೆ ಕೇಳಿಬರುತ್ತಿದ್ದರೂ ಮಾತಿನ ಮೇಲೆ ನಿಗಾ ಇಡದೇ ಅಸಭ್ಯವಾಗಿ ಮಾತನಾಡುವುದು ನಡೆದಿರುತ್ತದೆ.
ಮೊನ್ನೆಯಷ್ಟೇ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನೀಡಿದ ಹೇಳಿಕೆಯೊಂದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಅವರನ್ನು 'ಭಯೋತ್ಪಾದಕ' ಎಂದು ಕರೆದಿದ್ದಾರೆ. ಈ ಹಿಂದೆ ಆರ್ಎಸ್ಎಸ್ ಮತ್ತು ಬಿಜೆಪಿ ವಿಷಸರ್ಪ, ಅವರನ್ನು ಸಾಯಿಸಿ ಎಂಬ ಅರ್ಥದಲ್ಲಿ ಮುಸ್ಲಿಂ ಸಮುದಾಯಕ್ಕೆ ಕರೆ ಕೊಟ್ಟಿದ್ದ ಖರ್ಗೆ ಈಗ ಈ ಹೇಳಿಕೆ ನೀಡಿದರು. ಐಎಡಿಎಂಕೆ ಹೇಗೆ ಮೋದಿಯವರ ಜೊತೆ ಕೈಜೋಡಿಸಲು ಸಾಧ್ಯ? ಅವರು ಒಬ್ಬ ಟೆರರಿಸ್ಟ್. ಅವರು ಸಮಾನತೆಯಲ್ಲಿ ನಂಬಿಕೆ ಇಟ್ಟಿಲ್ಲ. ಅವರ ಪಕ್ಷಕ್ಕೆ ಸಮಾನತೆ ಮತ್ತು ನ್ಯಾಯದಲ್ಲಿ ನಂಬಿಕೆಯಿಲ್ಲ. ಇಂತಹವರ ಜೊತೆ ಕೈಜೋಡಿಸುವುದೆಂದರೆ ಅದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದು ಎಂದೇ ಅರ್ಥ ಎಂದು ಹೇಳುವುದನ್ನೆಲ್ಲಾ ಹೇಳಿ, ಬಳಿಕ "ನಾನು ಭಯೋತ್ಪಾದಕ ಎಂದರೆ ಅವರು ಎಲ್ಲರನ್ನೂ ಬೆದರಿಸುತ್ತಾರೆ (Terrorises) ಎಂಬ ಅರ್ಥದಲ್ಲಿ ಹೇಳಿದ್ದೇನೆ" ಎಂದು ಸ್ಪಷ್ಟನೆ ಬೇರೆ ನೀಡಿದರು.
ಆದರೆ, ಅವರ ಈ ಮಾತು ಬಿಜೆಪಿಯನ್ನು ಕೆರಳಿಸಿದೆ. ಕೆಪಿಸಿಸಿ ಅಧ್ಯಕ್ಷನ ಸ್ಥಾನದಲ್ಲಿ ಇರುವಂಥವರು ಇಂಥ ಮಾತುಗಳನ್ನಾಡುವ ಬಗ್ಗೆ ಎಲ್ಲೆಡೆ ಭಾರಿ ಟೀಕೆಗಳೂ ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ ಇದೀಗ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ. ಖರ್ಗೆ ಅವರು ಕೆಲವು ಬಾರಿ ಕಪ್ಪು ಮತ್ತು ಬಿಳುಪಿನ ಅಂದರೆ "ಟೆರರಿಸ್ಟ್ ಮತ್ತು ಟೆರರಿಸ್ಟ್ಗಳಿಗೇ ಟೆರರ್ ಆಗಿರುವವರ ನಡುವೆ ವ್ಯತ್ಯಾಸವನ್ನು ಗುರುತಿಸಲು ವಿಫಲರಾಗುತ್ತಾರೆ ಎಂದು ರಾಧಾಕೃಷ್ಣನ್ ಹೇಳಿದ್ದಾರೆ. ಬೀದರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಖರ್ಗೆ ಅವರೂ ಉಪಸ್ಥಿತರಿದ್ದು, ಅವರ ಎದುರೇ ಉಪರಾಷ್ಟ್ರಪತಿ ಈ ಮಾತು ಹೇಳಿದರು.
ಇದಾಗಲೇ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಕ್ರಮಕ್ಕೆ ಕೋರಿ ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.