
ಬೆಂಗಳೂರು(ಮಾ.09): ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ಅವರ ಅಳಿಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಬರುವ ಸೋಮವಾರ ಅಥವಾ ಮಂಗಳವಾರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಆಗಲಿದ್ದು, ಅದರಲ್ಲಿ ಡಾ.ಮಂಜುನಾಥ್ ಅವರ ಹೆಸರೂ ಪ್ರಕಟಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಜೆಡಿಎಸ್ ಪಕ್ಷದಿಂದಲೇ ಸ್ಪರ್ಧಿಸಿದರೆ ಕುಟುಂಬ ರಾಜಕಾರಣದ ಆರೋಪ ಕೇಳಿಬರಬಹುದು ಎನ್ನುವ ಕಾರಣಕ್ಕಾಗಿ ಡಾ.ಮಂಜುನಾಥ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸುವ ಲೆಕ್ಕಾಚಾರವನ್ನು ಉಭಯ ಪಕ್ಷಗಳ ನಾಯಕರು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
4 ಕ್ಷೇತ್ರ... 4 ತಂತ್ರ.. ಶಿಕಾರಿವೀರನ 4 ಟಿಕೆಟ್ ಮಂತ್ರ: ಆ 4 ಲೋಕಸಭಾ ಕ್ಷೇತ್ರಗಳಿಗೆ ಯಡಿಯೂರಪ್ಪ ಆಯ್ಕೆ ಯಾರು?
ಮಂಜುನಾಥ್ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಇದಕ್ಕೆ ಬಹುತೇಕ ಬಿಜೆಪಿ ವರಿಷ್ಠರೂ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಶುಕ್ರವಾರ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಡಾ.ಮಂಜುನಾಥ್ ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ವೇದಿಕೆ ಹಂಚಿಕೊಂಡರು. ವೇದಿಕೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕ ಹಾಗೂ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮತ್ತಿತರರು ಭಾಗವಹಿಸಿದ್ದರು.
ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಶಾಸಕರು ಬಿಜೆಪಿಗೆ: ಸಂಸದ ರಾಘವೇಂದ್ರ ಭವಿಷ್ಯ
ಕಾರ್ಯಕ್ರಮದಲ್ಲಿ ಮಾತನಾಡಿದ ಆರ್.ಅಶೋಕ್ ಅವರು, ಡಾ.ಮಂಜುನಾಥ್ ರಾಜಕೀಯಕ್ಕೆ ಬರಬೇಕೆ ಬೇಡವೇ ಎಂದು ಬಹಿರಂಗವಾಗಿಯೇ ಜನರಿಗೆ ಪ್ರಶ್ನೆ ಕೇಳಿದರು. ಅಲ್ಲದೆ, ಈ ಕ್ಷೇತ್ರಕ್ಕೆ ಡಾ.ಮಂಜುನಾಥ್
ಅಂಥವರು ಬರಬೇಕು ಎಂದೂ ಹೇಳಿದರು. ಈ ಮೂಲಕ ಪರೋಕ್ಷವಾಗಿ ಡಾ.ಮಂಜುನಾಥ್ ಅವರು ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡುವ ಸ್ಪಷ್ಟ ಸುಳಿವು ನೀಡಿದರು.
ಡಾ.ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಬಿಜೆಪಿ ಪಕ್ಷದಿಂದ ಕಣಕ್ಕಿಳಿಸುವ ಬಗ್ಗೆ ಮೊದಲಿಗೆ ತಂತ್ರ ರೂಪಿಸಿದ್ದು ಪಕ್ಷದ ನಾಯಕ ಸಿ.ಪಿ. ಯೋಗೇಶ್ವರ್, ಆರಂಭದಲ್ಲಿ ಯೋಗೇಶ್ವರ್ ಹೆಸರೇ ಈ ಈ ಕ್ಷೇತ್ರಕ್ಕೆ ಅಭ್ಯರ್ಥಿ ಎಂದು ಕೇಳಿ ಬಂದಿತ್ತು. ಆದರೆ, ತಮಗಿಂತ ಡಾ.ಮಂಜುನಾಥ್ ಅವರು ಅಭ್ಯರ್ಥಿಯಾದರೆ ಕಾಂಗ್ರೆಸ್ಸಿನ ಹಾಲಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಬಹುದು ಎಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ಮನವರಿಕೆ ಮಾಡಿಕೊಟ್ಟರು. ಅದು ಬಹುತೇಕ ಯಶಸ್ವಿಯಾದಂತೆ ಕಾಣುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೂರ್ನಾಲ್ಕು ದಿನಗಳಲ್ಲಿ ಇದು ಅಧಿಕೃತವಾಗಿ ಘೋಷಣೆ ಆಗುವ ನಿರೀಕ್ಷೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.