ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ ನಲ್ಲಿ ನಿರ್ಮಾಣ ಆಗಬೇಕಿರುವ ಮೆಡಿಕಲ್ ಕಾಲೇಜನ್ನು ಡಿಕೆ ಸಹೋದರರು ಕಳ್ಳತನದ ಮಾರ್ಗದಲ್ಲಿ ಕನಕಪುರಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಟೀಕಿಸಿದರು.
ರಾಮನಗರ (ಸೆ.07): ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ ನಲ್ಲಿ ನಿರ್ಮಾಣ ಆಗಬೇಕಿರುವ ಮೆಡಿಕಲ್ ಕಾಲೇಜನ್ನು ಡಿಕೆ ಸಹೋದರರು ಕಳ್ಳತನದ ಮಾರ್ಗದಲ್ಲಿ ಕನಕಪುರಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೆಡಿಕಲ್ ಕಾಲೇಜು ಸರ್ಕಾರದ ಹಣದಲ್ಲಿ ನಿರ್ಮಾಣ ಆಗುತ್ತಿಲ್ಲ. ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ಅಂದಾಜು 700 ಕೋಟಿ ರುಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣ ಆಗಬೇಕಿರುವ ಮೆಡಿಕಲ್ ಕಾಲೇಜು ಸ್ಥಳಾಂತರವನ್ನು ಕನಕಪುರ ಜನರೂ ಒಪ್ಪುವುದಿಲ್ಲ ಎಂದರು.
ಪ್ರಬಲವಾಗಿರುವ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಇದ್ದರೂ ಕನಕಪುರಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ನೀಡುವಷ್ಟು ಶಕ್ತಿ ಇಲ್ಲವೆ. ಎಲ್ಲ ಜಿಲ್ಲೆಗಳಿಗೂ ಮೆಡಿಕಲ್ ಕಾಲೇಜು ನೀಡಿರುವಾಗ ರಾಮನಗರ ಜಿಲ್ಲೆ ಬಗ್ಗೆ ತಾರತಮ್ಯ ಏಕೆ. ಮೆಡಿಕಲ್ ಕಾಲೇಜು ನೀಡುವಷ್ಟು ಶಕ್ತಿ ಇಲ್ಲವೆಂದರೆ ಯಾವ ರೀತಿ ಸರ್ಕಾರವಿದು ಎಂದು ಲೇವಡಿ ಮಾಡಿದರು. ರಾಮನಗರ ಕ್ಷೇತ್ರಕ್ಕೆ ಒಂದು ಅಭಿವೃದ್ಧಿ ಕೆಲಸ ನೀಡದ ಕಾಂಗ್ರೆಸ್ ಸರ್ಕಾರ ಮೆಡಿಕಲ್ ಕಾಲೇಜು ಸ್ಥಳಾಂತರಕ್ಕೆ ಮುಂದಾಗಿರುವುದು ಸರಿಯಲ್ಲ. ಜಿಲ್ಲೆಯ ಜನರು ಅಕಾರ ದುರ್ಬಳಕೆ ಮಾಡಲು ಅವಕಾಶ ನೀಡಲ್ಲ. ಇದರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.
ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ವಿಚಾರದಲ್ಲಿ ಸಿಎಂ ಗಟ್ಟಿ ತೀರ್ಮಾನ ತೆಗೆದುಕೊಳ್ಳಲಿ: ಸಿ.ಪಿ.ಯೋಗೇಶ್ವರ್
ಮೆಡಿಕಲ್ ಕಾಲೇಜು ಸ್ಥಳಾಂತರ ವಿರುದ್ಧ ಸದನದಲ್ಲಿಯೂ ಮಾತನಾಡಿದ್ದೇನೆ. ಅದಕ್ಕೆ ಅವರು ಉತ್ತರ ನೀಡಿಲ್ಲ. ಡಿಕೆ ಸಹೋದರರು ಬಂಡತನ ಮಾಡಿ ರಾಮನಗರ ಜನರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು. ವಿವಿ ಕಾರ್ಯಾರಂಭಕ್ಕೆ ಅಶ್ವತ್ಥ ನಾರಾಯಣ ಅಡ್ಡಗಾಲು ಹಾಕಿದ್ದರೆಂದು ಡಿಕೆ ಸಹೋದರರು ಆರೋಪ ಮಾಡಿದ್ದರಲ್ಲ ಎಂಬ ಪ್ರಶ್ನೆಗೆ ಅವರ ಆರೋಪ ಸಂಪೂರ್ಣವಾಗಿ ನಿರಾಧಾರವಾದದ್ದು. ಅವರು ಏನು ಹೇಳಿದರು ಸುಳ್ಳು. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ವಿವಿ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಮುಗಿಸಿ, ವರ್ಕ್ ಆರ್ಡರ್ ನೀಡಿ ಭೂಮಿ ಪೂಜೆ ಮುಗಿಸಿದೇವು ಎಂದು ಹೇಳಿದರು.
ನ್ಯಾಯಾಲಯದ ಚೌಕಟ್ಟಿನಲ್ಲಿ ಜಮೀನಿನ ವ್ಯಾಜ್ಯಕ್ಕೆ ಪರಿಹಾರ ಕಂಡುಕೊಂಡು 270 ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ನಾಲ್ಕು ದಿಕ್ಕಿನಿಂದಲೂ ರಸ್ತೆ ಮಾರ್ಗ ಕಲ್ಪಿಸಲಾಗಿದೆ. ಬಿಜೆಪಿ ಸರ್ಕಾರದ ಆಯವ್ಯಯಲ್ಲಿಯೇ 700 ಕೋಟಿ ಅನುದಾನವೂ ಬಿಡುಗಡೆಯಾಗಿದೆ. ಈಗ ಕಾಮಗಾರಿ ಆರಂಭವಾಗಿರುವ ಕೆಲಸಕ್ಕೆ ಡಿಕೆ ಸಹೋದರರು ಏಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಪ್ರಶ್ನಿಸಿದರು. ನಾವು ಕನಕಪುರದಲ್ಲಿ ಮೆಡಿಕಲ್ ಕಾಲೇಜು ಮಾಡಬೇಡಿ ಅನ್ನುತ್ತಿಲ್ಲ. ಆದರೆ, ವಿವಿ ಕ್ಯಾಂಪಸ್ ನಲ್ಲಿ ಇರಬೇಕಾದ ಮೆಡಿಕಲ್ ಕಾಲೇಜು ಸ್ಥಳಾಂತರಕ್ಕೆ ನಮ್ಮ ವಿರೋಧವೂ ಇದೆ. ಸೆ. 8ರಂದು ಹೋರಾಟ ಸಮಿತಿ ಕರೆ ನೀಡಿರುವ ರಾಮನಗರ ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲ ಇರಲಿದೆ. ಈ ಹೋರಾಟ ಪಕ್ಷಾತೀತವಾಗಿ ನಡೆಯಬೇಕು. ನಾವು ಎಲ್ಲ ರೀತಿಯ ಹೋರಾಟಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿತು. ಆದರೀಗ ಮೆಡಿಕಲ್ ಕಾಲೇಜು ಮಾತ್ರವಲ್ಲ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ, ಅಭಿವೃದ್ಧಿ ಕಾರ್ಯಗಳಿಗೂ ಅಡೆತಡೆ ಮಾಡುತ್ತಿದೆ. ಅದಕ್ಕೆಲ್ಲ ಉತ್ತರ ನೀಡುವ ಕೆಲಸ ಮಾಡುತ್ತೇವೆ ಎಂದು ಅಶ್ವತ್ಥ ನಾರಾಯಣ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಪಿ. ಯೋಗೇಶ್ವರ್, ಅ. ದೇವೇಗೌಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಗೌಡ, ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ಮುರಳೀಧರ್ , ಲಿಂಗೇಶ್ ಕುಮಾರ್ ಇದ್ದರು.
ನಡುಕ ಏನಿದ್ದರು ಡಿಕೆಶಿ ಮತ್ತವರ ಪಕ್ಷಕ್ಕೆ: ನೀವೇ ನೋಡಿದ್ದೀರಾ ನಡುಕ ಯಾರಿಗೆ ಆಗುತ್ತಿತ್ತು ಅಂತ. ಅವರೇ ತೂರಾಡಿಕೊಂಡು ನಡೆಯುತ್ತಿದ್ದರು. ನಡುಕ ಏನಿದ್ದರು ಅವರಿಗೆ ಮತ್ತು ಅವರ ಪಕ್ಕಕ್ಕೆ ನಮಗಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಚಿವ ಅಶ್ವತ್ಥ ನಾರಾಯಣ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಬಿಜೆಪಿಯವರಿಗೆ ಇಂಡಿಯಾ ಅಂತ ಮಾಡಿದ್ದರಿಂದ ನಡುಕು ಶುರುವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನೀವೇ ನೋಡಿದ್ದೀರಾ ನಡುಕ ಯಾರಿಗೆ ಆಗುತ್ತಿತ್ತು ಅಂತ. ನೀವೇ ನೋಡಿದ್ದೀರಲ್ಲ ತೂರಾಡಿಕೊಂಡು ನಡಿತಿದ್ದರು.
ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಇಲ್ಲೇ ಇರಲಿದೆ: ಶಾಸಕ ಇಕ್ಬಾಲ್ ಹುಸೇನ್
ಎಲ್ಲರ ಮನೆ ಬಾಗಿಲಿಗಿ ಹೋಗಿ ನಮ್ಮ ಜೊತೆಗೆ ಬನ್ನಿ ಅನ್ನೋಹಾಗಿದೆ. ಅವರ ಹೇಳಿಕೆ ಕಾಮಿಡಿ ಆಗಿದೆ. ನಡುಕ ಎಲ್ಲಾ ಅವರಿಗೆ, ಅವರ ಪಕ್ಷಕ್ಕಿದೆ ನಮಗಲ್ಲ ಎಂದು ತಿರುಗೇಟು ನೀಡಿದರು. ಹಿಂದೂ ಧರ್ಮ ಯಾವಾಗ ಹುಟ್ಟಿತು ಎಂಬ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಡೀ ವಿಶ್ವದಲ್ಲಿ ತಾಯಿ ಸ್ಥಾನದಲ್ಲಿರುವುದು ನಮ್ಮ ಸನಾತನ ಧರ್ಮ. ಸನಾತನ ವೇದ ಉಪನಿಷತ್ತುಗಳಲ್ಲಿ ಯಾವರೀತಿ ಹುಟ್ಟಿತು ಅನ್ನೋ ಇತಿಹಾಸ ಇದೆ. ಅವರ ಹೆಸರು ಪರಮೇಶ್ವರ್, ಹೆಸರು ಎಲ್ಲಿಂದ ಬಂತು ಅನ್ನೋದನ್ನ ಅವರನ್ನೇ ಕೇಳಬೇಕು. ಅದೇನಾದರು ಇದ್ದರೆ ಬಾದಲಾಯಿಸಿಕೊಳ್ಳಲಿ ಎಂದು ಹೇಳಿದರು.