ಕರೆಂಟ್‌ ಬಿಲ್‌ ಕಟ್ಬೇಡಿ, ಮಹಿಳೆಯರು ಬಸ್‌ ಟಿಕೆಟ್‌ ತಗೋಬೇಡಿ: ಬಿಜೆಪಿ, ಜೆಡಿಎಸ್‌ ಕರೆ!

Published : May 27, 2023, 05:24 AM IST
ಕರೆಂಟ್‌ ಬಿಲ್‌ ಕಟ್ಬೇಡಿ, ಮಹಿಳೆಯರು ಬಸ್‌ ಟಿಕೆಟ್‌ ತಗೋಬೇಡಿ: ಬಿಜೆಪಿ, ಜೆಡಿಎಸ್‌ ಕರೆ!

ಸಾರಾಂಶ

ಕಾಂಗ್ರೆಸ್‌ ಸರ್ಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳ ಜಾರಿ ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿ, ಜೆಡಿಎಸ್‌ ಟೀಕಾಪ್ರಕಾರ ಮುಂದುವರೆಸಿದ್ದು, ಷರತ್ತುಗಳನ್ನು ವಿಧಿಸಲು ಮುಂದಾಗಿರುವುದು ಜನತೆಯನ್ನು ಯಾಮಾರಿಸುವ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿವೆ.   

ಬೆಂಗಳೂರು/ ಮಂಗಳೂರು (ಮೇ.27): ಕಾಂಗ್ರೆಸ್‌ ಸರ್ಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳ ಜಾರಿ ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿ, ಜೆಡಿಎಸ್‌ ಟೀಕಾಪ್ರಕಾರ ಮುಂದುವರೆಸಿದ್ದು, ಷರತ್ತುಗಳನ್ನು ವಿಧಿಸಲು ಮುಂದಾಗಿರುವುದು ಜನತೆಯನ್ನು ಯಾಮಾರಿಸುವ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿವೆ. ಇದೇ ವೇಳೆ ವಿದ್ಯುತ್‌ ಬಿಲ್‌ ಕಟ್ಟಬಾರದು ಮತ್ತು ಮಹಿಳೆಯರು ಬಸ್‌ ಟಿಕೆಟ್‌ ಖರೀದಿಸಬಾರದು ಎಂದು ಕರೆ ನೀಡಿವೆ.

ಶುಕ್ರವಾರ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಮಾಜಿ ಸಚಿವ ಆರ್‌.ಅಶೋಕ್‌ ಪ್ರತ್ಯೇಕವಾಗಿ ಮಾತನಾಡಿ ಗ್ಯಾರಂಟಿಗಳಿಗೆ ಷರತ್ತು ವಿಧಿಸಲು ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಶೋಕ್‌ ಮತ್ತು ನಳಿನ್‌ ಕುಮಾರ್‌ ಕಟೀಲ್‌, ಕಾಂಗ್ರೆಸ್‌ನ ಗ್ಯಾರಂಟಿಗಳ ಜಾರಿಗೆ ನೀಡಿದ್ದ ಕಾಲಾವಕಾಶವು ಮುಗಿದಿದ್ದು, ಇನ್ನು ಮುಂದೆ ಯಾರೂ ರಾಜ್ಯದಲ್ಲಿ ವಿದ್ಯುತ್‌ ಬಿಲ್‌ ಕಟ್ಟಬಾರದು ಮತ್ತು ಮಹಿಳೆಯರು ಬಸ್‌ ಟಿಕೆಟ್‌ ಪಡೆಯಬಾರದು ಎಂದು ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

ಲೋಕಸಭೆ ರಿಸಲ್ಟ್‌ ಮೇಲೆ ಕಾಂಗ್ರೆಸ್‌ ಸರ್ಕಾರದ ಭವಿಷ್ಯ: ಎಚ್‌ಡಿಕೆ

ಬಸವರಾಜ ಬೊಮ್ಮಾಯಿ ಅವರು ಗ್ಯಾರಂಟಿಗಳಿಗೆ ಷರತ್ತುಗಳನ್ನು ವಿಧಿಸುವುದು ಜನರನ್ನು ಯಾಮಾರಿಸುವ ಕೆಲಸ ಎಂದು ಕಿಡಿಕಾರಿದರೆ, ಎಚ್‌.ಡಿ.ಕುಮಾರಸ್ವಾಮಿ ಅವರು, ಐದು ಗ್ಯಾರಂಟಿಗಳನ್ನು ಕಾಂಗ್ರೆಸ್‌ ಜಾರಿಗೆ ತರುವುದು ಕಷ್ಟ. ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬಂದ ಅವರಿಂದ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾಮಾರಿಸುವ ಕೆಲಸ-ಬೊಮ್ಮಾಯಿ: ಗ್ಯಾರಂಟಿಗಳಿಗೆ ಕಾಂಗ್ರೆಸ್‌ ಷರತ್ತುಗಳನ್ನು ವಿಧಿಸಲು ಮುಂದಾಗುವ ಮೂಲಕ ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದೆ. ಜನ ಸ್ವಯಂಪ್ರೇರಿತವಾಗಿ ತೀರ್ಮಾನ ಮಾಡುತ್ತಿದ್ದಾರೆ. ಅವರ ಪರವಾಗಿ ನಾವು ನಿಲ್ಲಬೇಕಾಗುತ್ತದೆ. ಎರಡನೇ ಸಚಿವ ಸಂಪುಟ ಸಭೆಯವರೆಗೆ ಕಾಯಬೇಕಾಗುತ್ತದೆ. ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಿಂದ ಬಂದವರನ್ನು ಹೇಗೆ ಗುರುತಿಸುತ್ತಾರೆ? ಒಲ್ಲದ ಗಂಡನಿಗೆ ನೂರಾರು ಕುಂಟುನೆಪ ಎನ್ನುವಂತೆ ಕಾಂಗ್ರೆಸ್‌ ಕಥೆಯಾಗಿದೆ ಎಂದು ಟೀಕಿಸಿದರು.

ಮಾತಿಗೆ ತಪ್ಪಿದ್ದಾರೆ- ಎಚ್‌ಡಿಕೆ: ಕಾಂಗ್ರೆಸ್‌ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದು ಕಷ್ಟವಾಗಿದ್ದು, ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಿಲ್ಲ. ಭಾಷಣಗಳಲ್ಲಿ ಉಚಿತ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದರು. ಮೊದಲ ಸಂಪುಟ ಸಭೆಯಲ್ಲಿಯೇ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದಿದ್ದರು. ಆದರೆ, ಮಾತಿಗೆ ತಪ್ಪಿದ್ದಾರೆ. ನಾವು ಈ ವಿಚಾರದಲ್ಲಿ ಹೋರಾಟ ಮಾಡಲು ಸಿದ್ಧವಾಗಿದ್ದು, ಜನರಿಗೆ ತಮಗೆ ಅನ್ಯಾಯವಾಗಿದೆ ಅನ್ನಿಸಿದರೆ ನಮ್ಮ ಜತೆ ಕೈ ಜೋಡಿಸಲಿ ಎಂದರು.

ಷರತ್ತು ಇಲ್ಲದೆ ಗ್ಯಾರಂಟಿ ಜಾರಿ ಮಾಡಬೇಕು: ಆರ್‌.ಅಶೋಕ್‌ ಮಾತನಾಡಿ, ಯಾವುದೇ ಷರತ್ತುಗಳಿಲ್ಲದೆ ಗ್ಯಾರಂಟಿ ಜಾರಿ ಮಾಡಬೇಕು. ಭಾಷಣ ಮಾಡುತ್ತಿದ್ದ ವೇಳೆ ಭರವಸೆಗಳನ್ನು ನೀಡುವಾಗ ಯಾವುದೇ ಷರತ್ತುಗಳು ಇರಲಿಲ್ಲ. ಈಗ ಷರತ್ತುಗಳನ್ನು ಹಾಕುವುದಾಗಿ ಕಾಂಗ್ರೆಸ್‌ ಸರ್ಕಾರ ಹೇಳುತ್ತಿದೆ. ಈಗಲೂ ಷರತ್ತುಗಳು ಬೇಡ. ರಾಜ್ಯ ಪ್ರವಾಸ ಕೈಗೊಂಡು ಸರ್ಕಾರವು ಗ್ಯಾರಂಟಿಗಳಿಗೆ ಷರತ್ತು ವಿಧಿಸಿರುವುದಕ್ಕೆ ಹೋರಾಟ ನಡೆಸುತ್ತೇವೆ. ಬಿಜೆಪಿ ವಿರೋಧ ಪಕ್ಷವಾಗಿ ಜನರ ಭಾವನೆಯನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡಲಿದೆ ಎಂದು ಹೇಳಿದರು.

ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಎಲ್ಲರಿಗೂ ಉಚಿತ ವಿದ್ಯುತ್‌, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರು ಯಾರೂ ಟಿಕೆಟ್‌ ತೆಗೆದುಕೊಳ್ಳುವುದು ಬೇಕಿಲ್ಲ ಎಂದಿದ್ದರು. ಪದವಿ ಪಡೆದ ನಿರುದ್ಯೋಗಿಗಳಿಗೆ 3000 ರು., ಡಿಪ್ಲೊಮಾ ಆದವರಿಗೆ 1,500 ರು. ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದು ಹೇಳಿದ್ದರು. ಈಗ ಅವರ ದ್ವಿಮುಖ ನೀತಿ ಅನಾವರಣವಾಗುತ್ತಿದೆ. ಕಾಂಗ್ರೆಸ್‌ನ ವರಿಷ್ಠರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್‌ ಗಾಂಧಿ ಬಂದು ಒಂದೊಂದು ಗ್ಯಾರಂಟಿ ಕಾರ್ಡ್‌ ಹಿಡಿದರು. ಸರ್ಕಾರ ಬಂದ ಮೊದಲ ಸಂಪುಟ ಸಭೆಯಲ್ಲಿಯೇ ಗ್ಯಾರಂಟಿ ಜಾರಿ ಎಂದಿದ್ದರು. ಆದರೆ, ಈಗ ದೆಹಲಿಗೆ ಹೋಗಿ ಖಾತೆ ಗ್ಯಾರಂಟಿ ಚರ್ಚೆಯಾಗುತ್ತಿದೆ ಎಂದು ಕಾಂಗ್ರೆಸ್‌ ನಡೆಯನ್ನು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಗ್ಯಾರಂಟಿ ಫೈಟ್‌: ಸರ್ಕಾರ-ಪ್ರತಿಪಕ್ಷಗಳ ನಡುವೆ ಕದನ ಆರಂಭ

ಜನ ಸರಿ ಇದ್ದಾರೆ-ಕಟೀಲ್‌: ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ಜನರಿಗೆ ತೊಂದರೆಯಾಗಿರುವುದರಿಂದ ವಿದ್ಯುತ್‌ ಬಿಲ್‌ ವಸೂಲಿಗೆ ಬಂದ ಸಿಬ್ಬಂದಿ ಮೇಲೆ ಹಲ್ಲೆಗಳು ನಡೆಯುತ್ತಿವೆ. ಜನ ಸರಿ ಇದ್ದು, ಬಿಲ್‌ ಕಟ್ಟಬಾರದು ಎಂದು ಕರೆ ನೀಡುತ್ತೇನೆ. ವಿದ್ಯುತ್‌ ಇಲಾಖೆ ನೌಕರರ ಮೇಲೆ ಹಲ್ಲೆಯಾದರೆ ಅದಕ್ಕೆ ಸರ್ಕಾರವೇ ಹೊಣೆ. ಗ್ಯಾರಂಟಿ ಯೋಜನೆಗಳ ಕುರಿತು ಜನರಲ್ಲಿ ಆಕ್ರೋಶ ಸಹಜ. ಯಾರೂ ಬಿಲ್‌ ಕಟ್ಟಲೇಬಾರದು. ಈ ವೇಳೆ ಜನರಿಗೆ ತೊಂದರೆಯಾದರೆ ನಾವು ಜನರ ಪರ ನಿಲ್ಲುತ್ತೇವೆ ಎಂದು ತಿಳಿಸಿದರು. ಸರ್ಕಾರ ಬಂದ 24 ಗಂಟೆಯಲ್ಲಿ ಗ್ಯಾರಂಟಿ ಜಾರಿ ಮಾಡುವುದಾಗಿ ಕಾಂಗ್ರೆಸ್‌ ಹೇಳಿದ್ದು, 20 ದಿನ ಕಳೆದರೂ ಜಾರಿಯಾಗಿಲ್ಲ. ಸುಳ್ಳು ಆಶ್ವಾಸನೆ ನೀಡಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಜನರು ಆಕ್ರೋಶದಲ್ಲಿದ್ದು, ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ