ಯಾವುದೇ ಸರ್ಕಾರಿ ಕಚೇರಿಯಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ಯಾರೊಬ್ಬರೂ ಒಂದು ರುಪಾಯಿ ಸಹ ಲಂಚ ಕೊಡಬೇಡಿ. ಯಾರಾದರು ಲಂಚ ಕೇಳಿದರೆ ಜಿಲ್ಲಾಧಿಕಾರಿಗಳು ಹಾಗೂ ನನ್ನ ಕಚೇರಿ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕನಕಪುರ (ಡಿ.03): ಯಾವುದೇ ಸರ್ಕಾರಿ ಕಚೇರಿಯಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ಯಾರೊಬ್ಬರೂ ಒಂದು ರುಪಾಯಿ ಸಹ ಲಂಚ ಕೊಡಬೇಡಿ. ಯಾರಾದರು ಲಂಚ ಕೇಳಿದರೆ ಜಿಲ್ಲಾಧಿಕಾರಿಗಳು ಹಾಗೂ ನನ್ನ ಕಚೇರಿ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಂಚ ಕೇಳುವವರ ವಿರುದ್ಧ ದೂರು ನೀಡಲು ಎಲ್ಲಾ ಸರ್ಕಾರಿ ಕಚೇರಿಗಳ ಮುಂದೆ ದೂರವಾಣಿ ಸಂಖ್ಯೆಯನ್ನು ಶೀಘ್ರದಲ್ಲೇ ಹಾಕಲಿದ್ದೇವೆ.
ಕಂದಾಯ, ಸಮಾಜ ಕಲ್ಯಾಣ ಇಲಾಖೆ, ಪಂಚಾಯಿತಿ ಅಧಿಕಾರಿ ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳು ಲಂಚ ಕೇಳಿದರೆ ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸಿ ದೂರು ನೀಡಬಹುದು. ಈ ಹಿಂದಿನ ತಹಸೀಲ್ದಾರ್ ಇದ್ದಾಗ ಒಂದಷ್ಟು ತೊಂದರೆಗಳು ಇದ್ದವು. ಈಗ ಆ ಸಮಸ್ಯೆ ಇಲ್ಲವೆಂದು ತಿಳಿದುಕೊಂಡಿದ್ದೇನೆ. ಜನರ ಅಹವಾಲುಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ನಮ್ಮ ತಾಲೂಕಿನಲ್ಲಿ ಉತ್ತಮವಾದ ಆಡಳಿತ ನಡೆಯಬೇಕು ಎಂದು ಹೇಳಿದರು.
ಬಂಗಾರಪ್ಪರನ್ನ ನೆನೆಸಿಕೊಳ್ಳಿ: ರೈತರ ಪ್ರಶ್ನೆಗೆ ಗರಂ ಆದ ಸಂಸದ ಡಿ.ಕೆ.ಸುರೇಶ್
ಕೇಂದ್ರ ಸ್ಥಾನದಲ್ಲೇ ಅಧಿಕಾರಿಗಳ ವಾಸ್ತವ್ಯ ಕಡ್ಡಾಯ: ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ನೆಲೆಸಿರಬೇಕೆಂದು ಆದೇಶಿಸಿದ್ದೆ. ಪಂಚಾಯಿತಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಆಗಬಹುದು ಆ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮಾಡಿಕೊಂಡು ಜನರ ಮಧ್ಯೆ ಇರಬೇಕೆಂದು ತಿಳಿಸಿದ್ದೇನೆ. ಯಾರು ಕೇಂದ್ರ ಸ್ಥಾನದಲ್ಲಿ ನೆಲೆಸುವುದಿಲ್ಲವೊ ಅಂತಹವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಈ ಮೊದಲು ಗ್ರಾಮಸಭೆಗಳನ್ನು ನಡೆಸಿ ಜನರ ಕಷ್ಟಕ್ಕೆ ದನಿಯಾಗುತ್ತಿದ್ದೆ. ಎರಡು ಅವಧಿಯಿಂದ ರಾಜ್ಯ ರಾಜಕಾರಣ ಹಾಗೂ ಸರ್ಕಾರದ ಒತ್ತಡದಿಂದ ನಾನು ಜನಸಂಪರ್ಕ ಸಭೆಗಳನ್ನು ಮಾಡಲಾಗುತ್ತಿಲ್ಲ. ಆದರೂ ತಾಲೂಕಿನ ಜನರು ಸೇವೆ ಮಾಡಲು ಶಕ್ತಿ ತುಂಬಿ ಗೌರವ ನೀಡಿದ್ದೀರಿ. ಈಗ ಸರ್ಕಾರದಲ್ಲಿಯೂ ಜನಸಂಪರ್ಕ ಸಭೆಗಳನ್ನು ಹಮ್ಮಿಕೊಂಡಿದ್ದೇವೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತಾಲೂಕು ಮಟ್ಟದಲ್ಲಿ ಶಾಸಕರು ಅಧಿಕಾರಿಗಳೊಂದಿಗೆ ಜನಸಂಪರ್ಕ ಸಭೆ ನಡೆಸಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ರಚನೆಯಾಗಿ 6 ತಿಂಗಳು ಕಳೆದಿದೆ. ಬಳಹಷ್ಟು ಜನರು ನನ್ನನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದರು. ಆದರೆ, ಪಕ್ಷದ ಜವಾಬ್ದಾರಿ, ಬೆಂಗಳೂರು ಉಸ್ತುವಾರಿ, ನೀರಾವರಿ ಇಲಾಖೆ ಜವಾಬ್ದಾರಿಯಿಂದಾಗಿ ಕಾರ್ಯ ಒತ್ತಡ ಹೆಚ್ಚಾಗಿದೆ. ಹೀಗಾಗಿ ಯಾರನ್ನೂ ಭೇಟಿಯಾಗಿ ಮಾತನಾಡಲು ಸಾಧ್ಯವಾಗದಂತಾಗಿದೆ. ಇನ್ನು ಮುಂದೆ 2 ತಿಂಗಳಲ್ಲಿ ಒಂದು ದಿನ ಕ್ಷೇತ್ರದಲ್ಲಿ ಉಳಿದ ಜನರ ಸಮಸ್ಯೆ ಆಲಿಸುವ ಕೆಲಸ ಮಾಡುತ್ತೇನೆ. ಬರುವ ಜನವರಿ ತಿಂಗಳಿನಲ್ಲಿ ಮತ್ತೊಮ್ಮೆ ಜನತಾದರ್ಶನ ಮಾಡಲಿದ್ದು, ಇಂದೇ ಜಿಲ್ಲಾಧಿಕಾರಿಗಳಿಗೆ ಮುಂದಿನ ಭೇಟಿಯ ದಿನಾಂಕ ತಿಳಿಸುತ್ತೇನೆ. ಅಲ್ಲದೆ, ವಾರದಲ್ಲಿ ಎರಡು ದಿನ ಕ್ಷೇತ್ರದ ಜನರು ಬೆಂಗಳೂರಿನಲ್ಲಿ ತಮ್ಮನ್ನು ಬಂದು ಭೇಟಿಯಾಗಲು ಸಮಯ ನಿಗದಿ ಮಾಡುತ್ತೇನೆ ಎಂದು ತಿಳಿಸಿದರು.
ಜನಸ್ಪಂದನ ಸಭೆಯಲ್ಲಿ ಅರ್ಜಿಗಳನ್ನು ನೀಡಿ ಸ್ವೀಕೃತಿ ದಾಖಲೆಗಳನ್ನು ಜನರು ಪಡೆಯಬೇಕು. ಇಲ್ಲಿ ಸಲ್ಲಿಸಿದ ಅಹವಾಲುಗಳನ್ನು ಪರಿಶೀಲನೆ ನಡೆಸಿ ಕಾನೂನಿನ ಚೌಕಟ್ಟಿನಲ್ಲಿ ಇತ್ಯರ್ಥ ಮಾಡಲಾಗುವುದು. ನಾನು ಸಹ ಕಾಲ, ಕಾಲಕ್ಕೆ ಅರ್ಜಿಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ತಾಲೂಕು ಆಸ್ಪತ್ರೆ, ಆಶ್ರಯ, ಆರಾಧನಾ ಸಮಿತಿಗಳಿಗೆ ಸದಸ್ಯರ ನೇಮಕಾತಿಯನ್ನು ಶೀಘ್ರ ಮಾಡಲಾಗುವುದು. ಆಸಕ್ತ ಕಾಲೇಜು ಯುವಕರನ್ನು ಕಾಲೇಜು ಸಮಿತಿಗಳಲ್ಲಿ ನೇಮಕ ಮಾಡಬೇಕು ಎಂದು ಸಂಸದರಾದ ಸುರೇಶ್ ಮತ್ತು ಬ್ಲಾಕ್ ಅಧ್ಯಕ್ಷರಿಗೆ ಸೂಚನೆ ನೀಡಿದ್ದೇನೆ. ಯಾರು ಕಾನುನೂ ಬದ್ಧವಾಗಿ ಭೂಮಿ ಉಳುಮೆ ಮಾಡುತ್ತಿದ್ದಾರೆ ಅವರಿಗೆ ಭೂಮಿ ಹಂಚಿಕೆ ಮಾಡುವಂತೆ ಹೇಳಿದ್ದೇನೆ ಎಂದು ತಿಳಿಸಿದರು.
ಹೈಕೋರ್ಟ್ ರಿಲೀಫ್ ಕೊಟ್ಟಿಲ್ಲ, ಇವರೇ ತೆಗೆದುಕೊಂಡಿದ್ದಾರೆ: ಎಚ್‌ಡಿಕೆ ಟಾಂಗ್
ನಿಮ್ಮ ಕಷ್ಟಕ್ಕೆ ಯಾರೂ ಬರುವುದಿಲ್ಲ. ಚುನಾವಣೆ ಹೊತ್ತಿನಲ್ಲಿ ಯಾವ ಅಧಿಕಾರಿಯೂ ಊರಿಗೆ ಬರಲಿಲ್ಲ. ಈ ಅಧಿಕಾರಿಗಳು ಸಾಕಷ್ಟು ಒತ್ತಡವನ್ನು ನಮಗೂ- ನಿಮಗೂ ಕೊಡುತ್ತಿರುತ್ತಾರೆ. ನೆಂಟಸ್ತನ ಹೇಳಿಕೊಂಡು ನನ್ನ ಬಳಿ ಬರುತ್ತಿರುತ್ತಾರೆ ನಿಮ್ಮಗಳ ಕೆಲಸ ಮಾಡಿಕೊಡುತ್ತೇವೆ ಎಂದು ಹೋಟೆಲ್ ರೂಮ್ ಗಳನ್ನು ಮಾಡಿಸಿಕೊಂಡು, ಕೆಲಸ ಮಾಡಿಕೊಡುತ್ತೇವೆ ಎಂದು ನಮ್ಮ ಮುಂದೆ ತಂದು ನಿಲ್ಲಿಸುವ ಕೆಲಸಗಳನ್ನು ಸಾಕಷ್ಟು ಅಧಿಕಾರಿಗಳು ಮಾಡುತ್ತಾರೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಯಾಮಾರಬಾರದು. ಯಾವುದೇ ತೊಂದರೆಗಳು ಇದ್ದರೂ ನೇರವಾಗಿ ನನ್ನನ್ನೇ ಸಂಪರ್ಕಿಸಿ.
- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿಗಳು