ದೇಶದ ವಿಚಾರವಾಗಿ ನೂರು ನೋಟಿಸ್ ಬಂದರೂ ತಲೆಕೆಡಿಸಿಕೊಳ್ಳಲ್ಲ: ಕೆ.ಎಸ್.ಈಶ್ವರಪ್ಪ ಕಿಡಿ

By Govindaraj S  |  First Published Feb 11, 2024, 6:23 AM IST

ದೇಶದ ವಿಭಜನೆ ಮಾಡಿ ಎಂಬುದಾಗಿ ದ್ರೇಶದ್ರೋಹದ ಹೇಳಿಕೆ ಕೊಡುವವರ ವಿರುದ್ಧ ಕಾಂಗ್ರೆಸ್‌ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ರಾಷ್ಟ್ರದ್ರೋಹಿ ಹೇಳಿಕೆ ನೀಡುವವರಿಗೆ ಗುಂಡಿಟ್ಟು ಕೊಲ್ಲುವ ಕಾನೂನು ತರಬೇಕು ಎಂದು ಹೇಳಿದ ನನಗೆ ನೋಟಿಸ್ ಬಂದಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ. 


ಶಿವಮೊಗ್ಗ (ಫೆ.11): ದೇಶದ ವಿಭಜನೆ ಮಾಡಿ ಎಂಬುದಾಗಿ ದ್ರೇಶದ್ರೋಹದ ಹೇಳಿಕೆ ಕೊಡುವವರ ವಿರುದ್ಧ ಕಾಂಗ್ರೆಸ್‌ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ರಾಷ್ಟ್ರದ್ರೋಹಿ ಹೇಳಿಕೆ ನೀಡುವವರಿಗೆ ಗುಂಡಿಟ್ಟು ಕೊಲ್ಲುವ ಕಾನೂನು ತರಬೇಕು ಎಂದು ಹೇಳಿದ ನನಗೆ ನೋಟಿಸ್ ಬಂದಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅನುದಾನ ಕೊಡಲಿಲ್ಲ ಎಂಬ ಕಾರಣಕ್ಕೆ ದೇಶ ವಿಭಜನೆ ಬಗ್ಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್‌ಗೆ ಈವರೆಗೆ ಯಾವುದೇ ನೋಟಿಸ್ ನೀಡಲಾಗಿಲ್ಲ. ಅವರ ವಿರುದ್ಧ ಯಾವುದೇ ಕೇಸ್ ದಾಖಲಾಗಿಲ್ಲ. 

ಸುರೇಶ್ ಅವರಿಗೆ ಗುಂಡಿಕ್ಕಿ ಕೊಲ್ಲಿ ಎಂದು ನಾನೆಲ್ಲೂ ಹೇಳಿಲ್ಲ. ದೇಶದ್ರೋಹಿಗಳನ್ನು ಮಾತ್ರ ಗುಂಡಿಕ್ಕಿ ಕೊಲ್ಲಿ ಎಂದು ಹೇಳಿದ್ದೇನೆ. ದೇಶದ್ರೋಹದ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದು ಪ್ರಧಾನಿ ಮೋದಿಗೆ ನಾನು ಒತ್ತಾಯಿಸಿದ್ದೆ. ಅದಕ್ಕಾಗಿ ಈಗ ನೋಟಿಸ್‌ ಬಂದಿದೆ. ದೇಶದ ವಿಚಾರವಾಗಿ, ದೇಶಭಕ್ತಿಗಾಗಿ ಇಂತಹ ನೂರು ನೋಟಿಸ್ ಬಂದರೂ ನಾನೂ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಎಲ್ಲ ಕೇಸ್‌ಗಳಲ್ಲೂ ಕ್ಲೀನ್ ಚಿಟ್‌ ಸಿಕ್ಕಿದೆ. ಇದರಲ್ಲಿಯೂ ಸಿಗುವ ವಿಶ್ವಾಸವಿದೆ ಎಂದರು.

Latest Videos

undefined

ಸಂಸದ ಡಿ.ಕೆ.ಸುರೇಶ್ ಹೇಳಿಕೆಯಲ್ಲಿ ರಾಜಕೀಯ ಮಾಡಲ್ಲ: ಕೆ.ಎಸ್‌.ಈಶ್ವರಪ್ಪ

ಡಿ.ಕೆ.ಸುರೇಶ್ ಹೇಳಿರುವುದು ಸರಿನಾ ಎಂಬುದನ್ನು ಈಗಲೂ ನಾನು ಸಿಎಂ ಬಳಿ ಕೇಳುವುದಕ್ಕೆ ಇಷ್ಟಪಡುತ್ತೇನೆ. ಅವರ ಮೇಲೆ ಕೇಸ್ ಹಾಕಲು ಶಕ್ತಿ ಇಲ್ಲದೆ, ಅದನ್ನು ಮುಚ್ಚಿಹಾಕಲು ಆರ್ ಎಸ್ ಎಸ್ ಬಗ್ಗೆ ಸಿಎಂ ಮಾತನಾಡಿರುವುದನ್ನು ನಾನು ಖಂಡಿಸುತ್ತೇನೆ. ಈಗಲೂ ಕಾಲ ಮಿಂಚಿಲ್ಲ, ದೇಶದ್ರೋಹಿ ಹೇಳಿಕೆ ನೀಡಿದ ಡಿ.ಕೆ.ಸುರೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿಎಂ, ಡಿಸಿಎಂಗೆ ಒತ್ತಾಯ ಮಾಡುತ್ತೇನೆ. ನಾಳೆಯೇ ಈ ಸಂಬಂಧ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಗೂ ಪತ್ರ ಬರೆಯುತ್ತೇನೆ ಎಂದರು.

ಹಾಸನದಲ್ಲಿ ಕಾಂಗ್ರೆಸ್ ಪ್ರತಿಭಟನೆ: ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಸಂಸದ ಡಿ.ಕೆ.ಸುರೇಶ್ ಬಗ್ಗೆ ಹಗುರವಾಗಿ ಮಾತನಾಡಿರುವ ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟಿಸಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಿ.ಎಂ.ರಸ್ತೆ, ಜಿಲ್ಲಾಧಿಕಾರಿ ಕಚೇರಿ ಎದುರು ವೃತ್ತದಲ್ಲಿ ರಸ್ತೆ ತಡೆ ಮಾಡಿ ಮೆರವಣಿಗೆಯಲ್ಲಿ ತರಲಾಗಿದ್ದ ಕೆ.ಎಸ್‌.ಈಶ್ವರಪ್ಪ ಅವರ ಪ್ರತಿಕೃತಿಯನ್ನು ರಸ್ತೆ ಮಧ್ಯೆ ಇಟ್ಟು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅವರ ವಿರುದ್ಧ ಘೋಷಣೆ ಕೂಗಿ ಕೆಲ ಸಮಯ ಪ್ರತಿಭಟನೆ ನಡೆಸಿದರು.

ಈಶ್ವರಾನಂದಪುರಿ ಶ್ರೀಗೆ ಅವಮಾನ ಕುರಿತು ಸಿಎಂ ತನಿಖೆಗೆ ಸೂಚಿಸಲಿ: ಈಶ್ವರಪ್ಪ ಆಗ್ರಹ

ನಂತರ ಯುವ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಗೊರೂರು ಮಾಧ್ಯಮದೊಂದಿಗೆ ಮಾತನಾಡಿ, ‘ಮಾನಸಿಕ ಅಸ್ವಸ್ಥನಾಗಿ ಇಡೀ ಕರ್ನಾಟಕದಲ್ಲಿ ಹುಚ್ಚನಂತೆ ವರ್ತಿಸುವ ಏಕೈಕ ರಾಜಕಾರಣಿ ಎಂದರೆ ಈಶ್ವರಪ್ಪ. ಹರಕು ಬಾಯಿ ಈಶ್ವರಪ್ಪ ಅವರು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದು, ಅವರನ್ನು ಗುಂಡಿಕ್ಕಿ ಕೊಲ್ಲುವಂತೆ ಪ್ರೇರೇಪಣೆಯನ್ನು ಬಿಜೆಪಿ ಕಾರ್ಯಕರ್ತರಿಗೆ ಮತ್ತು ಅವರ ನಾಯಕರಿಗೆ ಸಂದೇಶವನ್ನು ಕೊಟ್ಟಿದ್ದಾರೆ’ ಎಂದು ಸಿಟ್ಟನ್ನು ಹೊರ ಹಾಕಿದರು. ಇಂತಹ ಹೇಳಿಕೆಯನ್ನು ಹಾಸನ ಯುವ ಕಾಂಗ್ರೆಸ್ ನಿಂದ ಖಂಡಿಸಿ ಹುಚ್ಚ ಈಶ್ವರಪ್ಪರವರ ಪ್ರತಿಕೃತಿಯನ್ನು ದಹಿಸಿ ಅವರ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದೇವೆ ಎಂದರು.

click me!