ತುಂಗಭದ್ರಾ ಜಲಾಶಯದ ಅಣೆಕಟ್ಟೆಯ ಕ್ರಸ್ಟ್‌ಗೇಟ್ ತುಂಡಾದ ಪ್ರಕರಣದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ (ಆ.14): ತುಂಗಭದ್ರಾ ಜಲಾಶಯದ ಅಣೆಕಟ್ಟೆಯ ಕ್ರಸ್ಟ್‌ಗೇಟ್ ತುಂಡಾದ ಪ್ರಕರಣದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲ ಹಳದಿ ಅಂತಾರಲ್ಲ ಹಾಗೆ ಬಿಜೆಪಿಯವರಿಗೆ ದೇಶವೆಲ್ಲ ಹಳದಿಯಾಗಿ ಕಾಣುತ್ತಿದೆ. ಇದು ರಾಜಕೀಯ ಮಾಡುವ ಸಂದರ್ಭವಲ್ಲ. ಕೆಆರ್‌ಎಸ್ ಅಣೆಕಟ್ಟು ಸುಭದ್ರವಾಗಿದೆ, ಆತಂಕಪಡುವ ಅವಶ್ಯಕತೆ ಇಲ್ಲ. ಮೊನ್ನೆಯಷ್ಟೇ ರಿಪೋರ್ಟ್ ಬಂದಿದೆ. 92 ವರ್ಷ ಹಳೆಯದಾಗಿರುವ ಅಣೆಕಟ್ಟೆಯಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕೆಆರ್‌ಎಸ್ ಜಲಾಶಯದಲ್ಲಿ ಭದ್ರತಾ ಲೋಪ: ಕೆಆರ್‌ಎಸ್ ಅಣೆಕಟ್ಟು ಮೇಲ್ಭಾಗದಲ್ಲಿ ನಿಯಮ ಉಲ್ಲಂಘಿಸಿ ಕೈಗಾರಿಕಾ ಭದ್ರತಾ ಪಡೆಯವರು ಪ್ರವಾಸಿಗರಿಗೆ ಅವಕಾಶ ಮಾಡಿಕೊಟ್ಟು ಭದ್ರತಾ ಲೋಪವೆಸಗಿರುವುದು ಕಂಡುಬಂದಿದೆ. ಏಕಕಾಲಕ್ಕೆ 30ರಿಂದ 40 ಪ್ರವಾಸಿಗರಿಗೆ ಅವಕಾಶ ಕಲ್ಪಿಸಿ ಭದ್ರತಾ ಪಡೆ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ. ಅಣೆಕಟ್ಟೆಯ ಮೇಲ್ಭಾಗದಲ್ಲಿ ಪ್ರವಾಸಿಗರು ಅಡ್ಡಾದಿಡ್ಡಿ ಓಡಾಡುತ್ತಾ ಅಣೆಕಟ್ಟೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಾ, ರೀಲ್ಸ್ ಮಾಡುತ್ತಾ ಮೋಜು ಮಸ್ತಿ ನಡೆಸಿದ್ದಾರೆ. ಪತ್ರಿಕಾ ಮಾಧ್ಯಮಗಳಿಗೆ ಮಾತ್ರ ನಿರ್ಬಂಧ ಹೇರುವ ಕೈಗಾರಿಕಾ ಭದ್ರತಾ ಪಡೆ ಅಧಿಕಾರಿಗಳು ಈಗ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಪ್ರಭಾವಿಗಳು, ಖಾಸಗಿ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಿ ಕರ್ತವ್ಯ ಲೋಪವೆಸಗಿದ್ದಾರೆ. ಕೈಗಾರಿಕಾ ಭದ್ರತಾ ಪಡೆ ಅಧಿಕಾರಿಗಳ ನಡೆಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜೈಲಿಗೆ ಕಳುಹಿದ ಎಚ್‌ಡಿಕೆ ಜೊತೆ ಬಿಎಸ್‌ವೈ ಪಾದಯಾತ್ರೆ: ಸಚಿವ ಚಲುವರಾಯಸ್ವಾಮಿ
ಕತ್ತರಘಟ್ಟ ಗ್ರಾಮಕ್ಕೆ ಭೇಟಿ: ಕೇರಳದ ವಯನಾಡು ಗುಡ್ಡ ಕುಸಿತದಲ್ಲಿ ಮೃತಪಟ್ಟ ತಾಲೂಕಿನ ಕತ್ತರಘಟ್ಟ ಗ್ರಾಮದ ಪುಟ್ಟ ಬಾಲಕ ನಿಹಾಲ್ ಮತ್ತು ಆತನ ಅಜ್ಜಿ ಲೀಲಾವತಿ ಅವರ ನಿವಾಸಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ ನೀಡಿ ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಜಿಲ್ಲಾಡಳಿತದ ಜೊತೆಗೂಡಿ ಮೃತರ ನಿವಾಸಕ್ಕೆ ಆಗಮಿಸಿದ ಸಚಿವ ಎನ್.ಚಲುವರಾಯಸ್ವಾಮಿ ಘಟನೆ ಬಗ್ಗೆ ಕುಟುಂಬದ ಸದಸ್ಯರು ಮೂಲಕ ಮಾಹಿತಿ ಪಡೆದರು. ಪ್ರಾಕೃತಿಕ ವಿಕೋಪಕ್ಕೆ ಬಲಿಯಾದವರ ಬಗ್ಗೆ ಸಂತಾಪ ಸೂಚಿಸಿದರು.
ಮೃತರ ಮನೆಯಿಂದಲೇ ಕೇರಳದಲ್ಲಿರುವ ಸಚಿವ ಸಂತೋಷ್ ಲಾಡ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಘಟನೆಯಲ್ಲಿ ಬಲಿಯಾದ ಕುಟುಂಬದ ಸದಸ್ಯರ ನೋವಿಗೆ ನಮ್ಮ ಸರ್ಕಾರ ಸ್ಪಂದಿಸುತ್ತಿದೆ ಎಂದರು. ಸಚಿವ ಸಂತೋಷ್ ಲಾಡ್ ಮತ್ತು ಉನ್ನತ ದರ್ಜೆ ಅಧಿಕಾರಿ ಪಿ.ಸಿ.ಜಾಫರ್ ಅವರನ್ನು ಕೇರಳದ ದುರಂತದಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆ ನೇಮಿಸಲಾಗಿದೆ. ದುರಂತದಲ್ಲಿ ಮಡಿದ ಲೀಲಾವತಿ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರು. ಪರಿಹಾರ ನೀಡಲಾಗುವುದು. ಪರಿಹಾರ ಸಂಬಂಧ ಈ ಕೂಡಲೇ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಅಗತ್ಯ ವರದಿ ನೀಡಲಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ಶಾಸಕರಾಗಿದ್ದಾಗ ಮಳೆಯಾಗಿತ್ತಾ?: ಸಚಿವ ಚಲುವರಾಯಸ್ವಾಮಿ
ಘಟನೆಯಲ್ಲಿ ಬಲಿಯಾದ ನಿಹಾಲ್ ಪುಟ್ಟ ಬಾಲಕ. ಈತನ ಸಾವಿಗೆ 5 ಲಕ್ಷ ಪರಿಹಾರ ನೀಡಲು ನಿಯಮಾವಳಿಗಳಲ್ಲಿ ಅವಕಾಶವಿಲ್ಲ. ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡಲಾಗದಿದ್ದರೂ ಕನಿಷ್ಠ 2-3 ಲಕ್ಷ ರು. ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು. ನಂತರ ತಾತ್ಕಾಲಿಕ ವೈಯಕ್ತಿಕವಾಗಿ ಹಣಕಾಸಿನ ನೆರವು ನೀಡಿದರು. ಘಟನೆಯಲ್ಲಿ ಗಾಯಗೊಂಡಿರುವ ಇದೇ ಕುಟುಂಬದ ಮೂವರು ಸದಸ್ಯರಾದ ಝಾನ್ಸಿರಾಣಿ, ಈಕೆಯ ಪತಿ ಅನಿಲ್ ಕುಮಾರ್ ಹಾಗೂ ಮಾವ ದೇವರಾಜು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಇವರು ಗಂಭೀರವಾಗಿ ಗಾಯಗೊಂಡಿದ್ದು ಕೇರಳದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದರು.