ಮದ್ದೂರು (ಸೆ.25): ಸಂಸದೆ ಸುಮಲತಾ ಜೆಡಿಎಸ್ ಶಾಸಕರ ವಿರುದ್ಧ ಟೀಕೆ-ಟಿಪ್ಪಣಿಗಳನ್ನು ಮಾಡುವುದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಿ ಎಂದು ಶಾಸಕ ಡಿ.ಸಿ. ತಮ್ಮಣ್ಣ ಬೆಂಬಲಿಗರು ಸಲಹೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಟಿ. ರಾಮೇಗೌಡ, ಎಸ್.ಎಂ. ಗೌರ, ಹೊಸಕರೆ ಪ್ರಸನ್ನ ಸೇರಿದಂತೆ ಹಲವರು ಜೆಡಿಎಸ್ ಶಾಸಕರ ವಿರುದ್ಧ ವಿನಾಕಾರಣ ಟೀಕೆ ಮಾಡುತ್ತಿರುವ ಸಂಸದೆ ಸುಮಲತಾ ವಿರುದ್ಧ ಹರಿಹಾಯ್ದರು.
ಅಧಿವೇಶನದಲ್ಲಿ ಯಾವ ಶಾಸಕರು ಏನು ಮಾತನಾಡಿದ್ದಾರೆ?: ದಳಪತಿಗಳ ವಿರುದ್ಧ ಹರಿಹಾಯ್ದ ಸುಮಲತಾ
ಕೇವಲ ಟೀಕೆ ಮಾಡುವುದರಿಂದ ಯಾರೂ ನಾಯಕರಾಗುವುದಿಲ್ಲ. ಅಭಿವೃದ್ಧಿ ಕೆಲಸಗಳಿಂದಷ್ಟೇ ನಾಯಕರಾಗಿ ಬೆಳವಣಿಗೆ ಕಾಣಲು ಸಾಧ್ಯ. ಟೀಕೆಗಳನ್ನು ಮಾಡಿದರೂ ಅವುಗಳು ಸಕಾರಾತ್ಮಕವಾಗಿರಬೇಕು. ಸರಿಯಾದ ದಾಖಲೆಗಳನ್ನು ಇಟ್ಟುಕೊಂಡು ಟೀಕೆ ಮಾಡಲಿ, ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಸುಮಲತಾ ಅವರು ಗಾಳಿಯಲ್ಲಿ ಗುಂಡು ಹೊಡೆದಂತೆ ಮಾತನಾಡುತ್ತಿರುವುದು ಸರಿಯಲ್ಲ, ಇದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಕಿವಿಮಾತು ಹೇಳಿದರು.
ಅಂಬರೀಶ್ ಪತ್ನಿ ಎಂಬ ಒಂದೇ ಕಾರಣಕ್ಕೆ ಕ್ಷೇತ್ರದ ಜನರು ಎಲ್ಲವನ್ನೂ ಸಹಿಸಿಕೊಂಡು ಕೂರುತ್ತಾರೆ ಎಂದು ಸುಮಲತಾ ತಿಳಿಯಬಾರದು. ಅಂಬರೀಶ್ ಬಗ್ಗೆ ನಮಗೂ ಕ್ಷೇತ್ರ ಜನರಿಗೂ ಗೌರವವಿದೆ. ಮುಂದೆ ಇದೇ ರೀತಿ ಟೀಕೆ ಟಿಪ್ಪಣಿ ಮಾಡುತ್ತಿದ್ದರೆ ಅಂಬರೀಶ್ ಅವರ ಗೌರವಕ್ಕೆ ಸುಮಲತಾ ಅವರೇ ಮಸಿ ಬಳಿದಂತಾಗುತ್ತದೆ ಎಂದರು. ಈ ಹಿಂದೆ ಅಂಬರೀಶ್ ಅವರು ಎಷ್ಟುತೂಕವಾಗಿ ನಡೆದುಕೊಂಡರೋ ಅವರ ಪತ್ನಿಯಾಗಿ ನೀವೂ ಸಹ ಅದೇ ರೀತಿ ನಡೆದುಕೊಳ್ಳಬೇಕು. ಸುಖಾ ಸುಮ್ಮನೆ ಆಧಾರರಹಿತ ಆರೋಪ ಮಾಡಿಕೊಂಡು ನೀವು ಪೇಚಿಕೆ ಸಿಲುಕಬಾರದು ಎಂದು ಕಿವಿಮಾತು ಹೇಳಿದರು. ಶಾಸಕ ಪುಟ್ಟರಾಜು ಅವರು ತಮ್ಮ ಮೇಲೆ ಮಾಡಿರುವ ಆರೋಪಕ್ಕೆ ಆಣೆ ಪ್ರಮಾಣಕ್ಕೆ ಸಿದ್ಧ ಎಂದು ಹೇಳಿದ್ದಾರೆ. ತಮಗೆ ಧೈರ್ಯವಿದ್ದರೆ ಹೋಗಿ ಎಂದು ಪ್ರತಿಸವಾಲು ಹಾಕಿದರು.
ಶಾಸಕ ಡಿ.ಸಿ.ತಮ್ಮಣ್ಣ ಮದ್ದೂರು ಕ್ಷೇತ್ರದಲ್ಲಿ ರಸ್ತೆ, ನೀರಾವರಿ, ನಾಲೆಗಳ ಅಭಿವೃದ್ಧಿ, ಸೇತುವೆ, ಆಸ್ಪತ್ರೆ ಮತ್ತಿತರ ಯೋಜನೆಗಳಿಗೆ ಸರ್ಕಾರಿದಿಂದ ಕೋಟ್ಯಂತರ ರು.ಗಳ ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಅರಿತು ಸುಮಲತಾ ಮಾತನಾಡಬೇಕು ಎಂದರು.
ತಮ್ಮಣ್ಣ ಇಳಿ ವಯಸ್ಸಿನಲ್ಲೂ ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿರುವ ತಮ್ಮಣ್ಣರ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಟ್ಟು ಸಂಸದೆ ಸುಮಲತಾ ರಾಜಕೀಯ ಬದಿಗಿಟ್ಟು ತಮ್ಮಣ್ಣರೊಂದಿಗೆ ಸೇರಿ ಕ್ಷೇತ್ರ ಹಾಗೂ ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.
Mandya: ರಾಜಧನ ವಸೂಲಿ ಪರಿಣಾಮಕಾರಿಯಾಗಿಲ್ಲ: ಸಂಸದೆ ಸುಮಲತಾ
ಸುಮಲತಾ ಅವರಿಗೆ ಮಾರ್ಗದರ್ಶನ ಮಾಡುತ್ತಿರುವ ಅವರ ಹಿಂಬಾಲಕರು ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬೆಸಗರಹಳ್ಳಿ ಕುಡಿಯುವ ಘಟಕ ಸ್ಥಾಪನೆ ಹೊರತು ಪಡಿಸಿದರೆ ಬೇರೆ ಯಾವುದೇ ಅಭಿವೃದ್ಧಿ ಮಾಡಿಲ್ಲ. ಸಂಸದರು ದಿಶಾ ಸಭೆ ನಡೆಸುವಾಗ ಜಿಲ್ಲೆಯ ಎಲ್ಲಾ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಬೇಕು. ವಿನಾಃ ಕಾರಣ ಜೆಡಿಎಸ್ ಶಾಸಕರನ್ನು ಗುರಿಯಾಗಿಟ್ಟುಕೊಂಡು ಟೀಕಿಸುವುದು ಸರಿಯಲ್ಲ ಎಂದು ಮುಖಂಡರು ತಿಳಿಸಿದರು. ಸುದ್ಧಿಗೋಷ್ಠಿಯಲ್ಲಿ ಚಾಮನಹಳ್ಳಿಯ ಜೆಡಿಎಸ್ ಮುಖಂಡ ವಿಜೇತ್‌ಗೌಡ ಅಲಿಯಾಸ್ ರಾಖಿ, ಎಂ.ಎನ್. ರವಿ ಮತ್ತಿತರರಿದ್ದರು.