ಡಿ.ಕೆ.ಸುರೇಶ್ ಸೋಲಿಂದ ಕ್ಷೇತ್ರದ ಜನರಿಗೆ ಪಶ್ಚಾತ್ತಾಪ: ಶಾಸಕ ಎಚ್.ಸಿ.ಬಾಲಕೃಷ್ಣ

By Kannadaprabha News  |  First Published Jul 4, 2024, 1:42 PM IST

ಡಿ.ಕೆ.ಸುರೇಶ್ ಸೋಲಿನಿಂದ ಕ್ಷೇತ್ರದ ಜನರಿಗೆ ನಷ್ಟವಾಗಿದೆಯೇ ಹೊರತು ಅವರಿಗಲ್ಲ. ಮುಂದೊಂದು ದಿನ ಡಿ.ಕೆ.ಸುರೇಶ್ ಅವರನ್ನು ತಿರಸ್ಕರಿಸಿದ್ದಕ್ಕೆ ಪಶ್ಚಾತ್ತಾಪ ಪಡುವ ಪರಿಸ್ಥಿತಿ ಬರಲಿದೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು. 


ರಾಮನಗರ (ಜು.04): ಭಾವನಾತ್ಮಕವಾದ ಮಾತುಗಳಿಗೆ ಜನರು ಮರುಳಾಗಿದ್ದರಿಂದ ಒಬ್ಬ ಕ್ರಿಯಾಶೀಲ ಸಂಸದನನ್ನು ಕಳೆದುಕೊಂಡಿದ್ದೇವೆ. ಡಿ.ಕೆ.ಸುರೇಶ್ ಸೋಲಿನಿಂದ ಕ್ಷೇತ್ರದ ಜನರಿಗೆ ನಷ್ಟವಾಗಿದೆಯೇ ಹೊರತು ಅವರಿಗಲ್ಲ. ಮುಂದೊಂದು ದಿನ ಡಿ.ಕೆ.ಸುರೇಶ್ ಅವರನ್ನು ತಿರಸ್ಕರಿಸಿದ್ದಕ್ಕೆ ಪಶ್ಚಾತ್ತಾಪ ಪಡುವ ಪರಿಸ್ಥಿತಿ ಬರಲಿದೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು. ಮಾಗಡಿಯ ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯ ಜಡೇನಹಳ್ಳಿ ಗ್ರಾಮದ ಅಂಗನವಾಡಿಗೆ ಸ್ಮಾರ್ಟ್ ಟಿವಿ ವಿತರಣೆ, ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ, ಭೈರಾಗಿ ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಜಡೇನಹಳ್ಳಿ ಗ್ರಾಮದ ಕಲ್ಯಾಣಿ ಉದ್ಘಾಟಿಸಿ ಮಾತನಾಡಿದರು.

‘ಈ ಹಿಂದೆ ಸಂಸದರಾಗಿದ್ದ ಡಿ.ಕೆ.ಸುರೇಶ್ ಕ್ಷೇತ್ರಕ್ಕೆ ಭೇಟಿ ನೀಡಿದಾಗಲೆಲ್ಲ ಅಭಿವೃದ್ಧಿ ವಿಚಾರವಾಗಿ ಮನವಿಗಳನ್ನು ಸಲ್ಲಿಸಿದ್ದೆವು. ಇದಕ್ಕೆ ಸ್ಪಂದಿಸಿ ಅವರು ಮಾಗಡಿ ಕ್ಷೇತ್ರಕ್ಕೆ 150 ಕೋಟಿ ರು. ಅನುದಾನ ಕೊಡಿಸಿದರು. ಈಗ ಪ್ರತಿ ಗ್ರಾಮದಲ್ಲಿ 50 ಲಕ್ಷದಿಂದ 1 ಕೋಟಿವರೆಗೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಜನರೇ ಸುರೇಶ್ ಅವರನ್ನು ತಿರಸ್ಕರಿಸುವ ಮೂಲಕ ನಮ್ಮ ಸ್ಪೀಡ್ ಗೆ ಬ್ರೇಕ್ ಹಾಕಿದ್ದಾರೆ. ಇದರಿಂದಾಗಿರುವ ನಷ್ಟವನ್ನು ಜನರೇ ಆಲೋಚನೆ ಮಾಡುವ ಕಾಲ ಬಂದೇ ಬರುತ್ತದೆ ಎಂದು ಹೇಳಿದರು. ನಮ್ಮ ಸರ್ಕಾರ ಇಲ್ಲದಿರುವಾಗಲೇ ಸುರೇಶ್ ಓಡಾಡಿ ಕೆಲಸ ಕಾರ್ಯ ಮಾಡುತ್ತಿದ್ದರು. 

Tap to resize

Latest Videos

ಮಂಡ್ಯ ಕ್ಯಾನ್ಸರ್ ಆಸ್ಪತ್ರೆ ಶೀಘ್ರದಲ್ಲೇ ಕಾರ್ಯಾರಂಭ: ಸಚಿವ ಶರಣಪ್ರಕಾಶ ಪಾಟೀಲ್‌

ಈಗ ನಮ್ಮದೇ ಸರ್ಕಾರ ಅಧಿಕಾರದಲ್ಲಿತ್ತು. ಇದೊಂದು ಬಾರಿ ಅವರಿಗೆ ಅವಕಾಶ ಕೊಟ್ಟಿದ್ದರೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿದ್ದವು. ವಿರೋಧ ಪಕ್ಷದವರು ಗೆದ್ದರೆ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆಯುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು. ನಾವು ಭಾವನಾತ್ಮಕವಾಗಿ ಮಾತನಾಡುವುದು ಹಾಗೂ ಸುಳ್ಳು ಹೇಳುವುದನ್ನು ಕಲಿಯದಿರುವುದೇ ನಮಗೆ ಹಿನ್ನಡೆ ಮತ್ತು ದೊಡ್ಡ ಸಮಸ್ಯೆಯಾಗಿದೆ. ಅವರಂತೆಯೇ ನಾವು ಸುಳ್ಳು ಹೇಳಬೇಕು, ಭಾವನಾತ್ಮಕವಾಗಿ ಮಾತನಾಡಬೇಕು ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದರು.

ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದೆವಾದರೂ ನಮ್ಮ ತಾಯಂದಿರು ಕೈ ಹಿಡಿಯಲಿಲ್ಲ. ಹಿಂದಿನ ಸರ್ಕಾರಗಳು ಗೃಹಲಕ್ಷ್ಮಿಯಂತಹ ಯೋಜನೆಗಳ ಮೂಲಕ ಮಹಿಳೆಯರಲ್ಲಿ ಶಕ್ತಿ ತುಂಬುವ ಕೆಲಸ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಹಿಂದಿದ್ದ ಸಂಸದರ ಮಾದರಿಯಲ್ಲಿಯೇ ಹಾಲಿ ಸಂಸದರು ಕೆಲಸ ಮಾಡಬೇಕೆಂದು ಆಶಿಸುತ್ತೇವೆ. ಅವರು ಭಾವನಾತ್ಮಕವಾಗಿ ಮಾತನಾಡುವುದನ್ನು ಬಿಟ್ಟು ಹಳ್ಳಿಗಳಲ್ಲಿಯೂ ಸುತ್ತಾಡಬೇಕು. ರಾಮನಗರ ಜಿಲ್ಲೆಗಾಗಿ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಿಸಲಿ. ಅಭಿವೃದ್ಧಿ ಕಾರ್ಯಗಳಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.

ಬಿಡದಿ ಹೋಬಳಿ ವ್ಯಾಪ್ತಿಯ ಬೈರ ಮಂಗಳ ಮತ್ತು ಮಂಚನಾಯಕನಹಳ್ಳಿಯಲ್ಲಿ ಮುಂದಿನ ವಾರ ಕಂದಾಯ ಅದಾಲತ್ ಆಯೋಜನೆ ಮಾಡಲಾಗುವುದು. ದಿನಾಂಕ ನಿಗದಿಪಡಿಸಿ ಜನರಿಂದ ಅರ್ಜಿ ಸ್ವೀಕಾರ ಮಾಡುವಂತೆ ಶಾಸಕ ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಿ.ಎನ್.ನಟರಾಜ್, ಬನ್ನಿಕುಪ್ಪೆ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ಜಯಶೀಲಮ್ಮ, ತಾಪಂ ಇಒ ಟಿ.ಪ್ರದೀಪ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ದೀಪಾ ಮುನಿರಾಜು, ವಂಡರ್ ಲಾ ಹಾಲಿಡೇಸ್ ಲಿಮಿಟೆಡ್‌ನ ರುದ್ರೇಶ್, ಕೂಡ್ಲಿ ಟ್ರಾನ್ಸ್ ಮಿಷನ್ ಲಿಮಿಟೆಡ್‌ನ ಪ್ರಾಜೆಕ್ಟ್ ಮ್ಯಾನೇಜರ್ ಓಜೇಶ್ ಮತ್ತಿತರರಿದ್ದರು.

ರಾಹುಲ್ ಗಾಂಧಿಗೆ ಹಿಂದೂಗಳ ತಾಳ್ಮೆ ಪರೀಕ್ಷೆಯ ದುಸ್ಸಾಹಸ ಬೇಡ: ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ

ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸರ್ಕಾರದಲ್ಲಿ ಉಕ್ಕು, ಭಾರಿ ಕೈಗಾರಿಕೆ ಸಚಿವರಾಗಿದ್ದಾರೆ. ಅವರು ಜಿಲ್ಲೆಯ ನಾಲ್ಕೈದು ಸಾವಿರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸಬಹುದು. ಕೇವಲ ಭಾವಾನತ್ಮಕವಾಗಿ ಮತ ಕೇಳುವುದಷ್ಟೇ ಮುಖ್ಯ ಅಲ್ಲ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಟ್ಟು ತೋರಿಸಬೇಕು.
-ಎಚ್.ಸಿ.ಬಾಲಕೃಷ್ಣ, ಶಾಸಕ, ಮಾಗಡಿ

click me!