DK Shivakumar: ಡಿಕೆ ಶಿವಕುಮಾರ್ ಪ್ರಮಾಣವಚನಕ್ಕೆ ಭರ್ಜರಿ ಸಿದ್ಧತೆ, ಎಲ್‌ಸಿಡಿ ಸ್ಕ್ರೀನ್, ಸಿಎಂ ಕೊಠಡಿಗೆ ವಾಸ್ತು ಪ್ರಕಾರ ಅಜ್ಜಯ್ಯನ ಫೋಟೋ!

Kannadaprabha News   | Kannada Prabha
Published : Jun 03, 2026, 05:21 AM IST
DK Shivakumar

ಸಾರಾಂಶ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಲೋಕಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಭರ್ಜರಿ ಸಿದ್ಧತೆ ನಡೆದಿದೆ. ನಗರದಾದ್ಯಂತ ಎಲ್‌ಇಡಿ ಪರದೆಗಳು, ಬಿಗಿ ಭದ್ರತೆ, ಹಾಗೂ ಗಣ್ಯರ ಆಗಮನಕ್ಕೆ ವ್ಯವಸ್ಥೆ ಮಾಡಲಾಗಿದೆ. 

ಬೆಂಗಳೂರು (ಜೂ.3): ವಿಧಾನಸೌಧ(Vidhan soudha), ಕೆಪಿಸಿಸಿ ಕಚೇರಿ(KPCC office) ಸೇರಿ ಹಲವೆಡೆ ಎಲ್‌ಇಡಿ ಪರದೆಗಳು(LED screen), ಜನರನ್ನು ಕರೆತರುವ 100ಕ್ಕೂ ಹೆಚ್ಚಿನ ಬಸ್‌ಗಳ ನಿಯೋಜನೆ, ನಗರದ ತುಂಬೆಲ್ಲ ಬಂಟಿಂಗ್‌ ಬ್ಯಾನರ್‌, ಗಣ್ಯಾತಿಗಣ್ಯರಿಗೆ ಅತಿಥಿ ಸತ್ಕಾರಕ್ಕೆ ಭರದ ಸಿದ್ಧತೆ, ಲೋಕಭವನದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌, ಕೆಪಿಸಿಸಿ ಹಾಗೂ ಶಾಂಗ್ರಿಲಾ ಹೋಟೆಲ್‌ ಸುತ್ತಾ ನೋ ಫ್ಲೈ ಜೋನ್‌ ನಿರ್ಮಾಣ...

ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌(DK Shivakumar) ಅವರು ಪ್ರಮಾಣವಚನ ಸ್ವೀಕಾರಕ್ಕೆ ನಡೆಸಲಾಗಿರುವ ಭರ್ಜರಿ ಸಿದ್ಧತೆಯ ಪರಿಯಿದು.

ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಅವರು ಬುಧವಾರ ಸಂಜೆ 4.05ಕ್ಕೆ ಲೋಕಭವನದ ಗಾಜಿನಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ 500ಕ್ಕೂ ಹೆಚ್ಚಿನ ಅತೀಗಣ್ಯರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗಾಗಿ ಲೋಕಭವನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರ ಜತೆಗೆ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗದವರಿಗಾಗಿ ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಭವನ, ರೇಸ್‌ಕೋರ್ಸ್‌ ರಸ್ತೆಯ ಕಾಂಗ್ರೆಸ್‌ ಕಚೇರಿ ಹಾಗೂ ವಿಧಾನಸೌಧ ಮುಂಭಾಗ ಎಲ್‌ಇಡಿ ಅಳವಡಿಸಿ ನೇರ ಪ್ರಸಾರ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಇನ್ನು, ಪ್ರಮಾಣವಚನ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಪಾಲ್ಗೊಳ್ಳುತ್ತಿರುವ ಕಾರಣ ಲೋಕಭವನ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಜತೆಗೆ ಲೋಕಸಭವನ ಸುತ್ತಲೂ ಪಾದಚಾರಿ ಮಾರ್ಗಕ್ಕೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಯಾರೂ ಬ್ಯಾರಿಕೇಡ್‌ ದಾಟಿ ರಸ್ತೆಗಿಳಿಯದಂತೆ ಮಾಡಲಾಗಿದೆ. ಹಾಗೆಯೇ, ಈಗಾಗಲೇ ಪೊಲೀಸ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಜನರಿಗಾಗಿ ಎಲ್‌ಇಡಿ ಅಳವಡಿಕೆ:

ಬೆಂಗಳೂರು ದಕ್ಷಿಣ (ರಾಮನಗರ), ಮಂಡ್ಯ, ಮೈಸೂರು ಸೇರಿ ಇನ್ನಿತರ ಕಡೆಗಳಿಂದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ವೀಕ್ಷಣೆಗೆಂದು ನೂರಾರು ಜನ ಬೆಂಗಳೂರಿನತ್ತ ಬುಧವಾರ ಬರಲಿದ್ದಾರೆ. ಅದಕ್ಕಾಗಿ ಶಾಸಕರು ಅವರಿಗೆ ಬಸ್‌ ವ್ಯವಸ್ಥೆ ಮಾಡಿದ್ದು, ಸುಮಾರು 100ಕ್ಕೂ ಹೆಚ್ಚಿನ ಬಸ್‌ಗಳ ಮೂಲಕ ಜನರನ್ನು ಕರೆತರಲಾಗುತ್ತಿದೆ. ಅದರಲ್ಲೂ ಕನಕಪುರ, ರಾಮನಗರ, ಮಾಗಡಿ, ಮಂಡ್ಯ ಭಾಗದಿಂದ ಅತಿಹೆಚ್ಚಿನ ಜನ ಬರಲಿದ್ದಾರೆ. ಅವರೆಲ್ಲರಿಗೂ ಭಾರತ್‌ ಜೋಡೋ ಭವನ, ವಿಧಾನಸೌಧ ಮುಂಭಾಗ, ರೇಸ್‌ಕೋರ್ಸ್‌ ರಸ್ತೆಯ ಕಾಂಗ್ರೆಸ್‌ ಕಚೇರಿಯಲ್ಲಿ ಅಳವಡಿಸಲಾಗಿರುವ ಎಲ್‌ಇಡಿ ಮೂಲಕ ಪ್ರಮಾಣ ವಚನ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ.

ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ನಗರ ಪ್ರಮುಖ ರಸ್ತೆಗಳಲ್ಲಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಸಿ ಶುಭ ಕೋರಿದ್ದಾರೆ. ಬುಧವಾರ ಬೆಳಗ್ಗೆಯಿಂದಲೇ ರೇಸ್‌ಕೋರ್ಸ್‌ ರಸ್ತೆ, ವಿಧಾನಸೌಧ ಸುತ್ತಮುತ್ತ, ಲೋಕಭವನ ಸುತ್ತಮುತ್ತಲಿನ ರಸ್ತೆಗಳು ಸೇರಿ ಹಲವೆಡೆಗೆ ನೂರಾರು ಫ್ಲೆಕ್ಸ್‌ಗಳನ್ನು ಅಳವಡಿಸಿ ನೆಚ್ಚಿನ ನಾಯಕನಿಗೆ ಶುಭ ಕೋರಿದ್ದಾರೆ.

ಇನ್ನು, ಹೈಕೋರ್ಟ್‌ ಮುಂಭಾಗ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿ ಕಾಂಗ್ರೆಸ್‌ ಹಿರಿಯ ನಾಯಕರ ಬೃಹತ್‌ ಕಟೌಟ್‌ ಅಳವಡಿಕೆಗೆ ಕಾಂಗ್ರೆಸ್‌ ಕಾರ್ಯಕರ್ತರು ಮುಂದಾಗಿದ್ದರು. ಆದರೆ, ಅದಕ್ಕೆ ಹೈಕೋರ್ಟ್‌ ಅನುಮತಿಸದ ಕಾರಣ, ಮಂಗಳವಾರ ಅದನ್ನು ತೆರವು ಮಾಡಲಾಯಿತು.

ಸಿಎಂ ಕಚೇರಿಗೆ ವಾಸ್ತು ಪ್ರಕಾರ ಅಜ್ಜಯ್ಯ ಚಿತ್ರ:

ವಿಧಾನಸೌಧದ ಮೂರನೇ ಮಹಡಿಯಲ್ಲಿನ ಮುಖ್ಯಮಂತ್ರಿ ಅವರ ಕೊಠಡಿಯ ವಾಸ್ತುವನ್ನು ಡಿ.ಕೆ.ಶಿವಕುಮಾರ್‌ ಅವರ ಆಪ್ತ ಜ್ಯೋತಿಷಿ, ವಾಸ್ತು ತಜ್ಞ ಆರಾಧ್ಯ ಅವರು ಮಂಗಳವಾರ ಪರಿಶೀಲನೆ ನಡೆಸಿದರು. ವಾಸ್ತು ಪರಿಶೀಲನೆ ವೇಳೆ ಮುಖ್ಯಮಂತ್ರಿ ಅವರ ಕೊಠಡಿಯಲ್ಲಿದ್ದವರೆಲ್ಲರನ್ನೂ ಹೊರಗೆ ಕಳುಹಿಸಿ ಬಾಗಿಲು ಹಾಕಲಾಗಿತ್ತು. ಆರಾಧ್ಯ ಅವರು ಕೊಠಡಿಯ ಪ್ರತಿಯೊಂದು ಅಂಶವನ್ನೂ ಪರಿಶೀಲಿಸಿದರು. ಈ ವೇಳೆ ಕೆಲ ಬದಲಾವಣೆಗೆ ಸೂಚಿಸಿದ್ದಾರೆ. ಅದರಂತೆ ಕೊಠಡಿಯಲ್ಲಿನ ಪೀಠೋಪಕರಣಗಳನ್ನು ಇಡುವ ಸ್ಥಳ ಸೇರಿ ಮತ್ತಿತರ ಅಂಶಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ.

ಸಿಎಂ ಕೊಠಡಿಯಲ್ಲಿ ಅಜ್ಜಯ್ಯ:

ಲೋಕಸಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನದ ನಂತರ ವಿಧಾನಸೌಧಕ್ಕೆ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ. ಹೀಗಾಗಿ ವಿಧಾನಸೌಧ ಪ್ರವೇಶ ದ್ವಾರ ಹಾಗೂ ವಿಧಾನಸೌಧದ ಮೂರನೇ ಮಹಡಿಯ ಮುಖ್ಯಮಂತ್ರಿ ಅವರ ಕೊಠಡಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಜತೆಗೆ, ಡಿ.ಕೆ.ಶಿವಕುಮಾರ್‌ ಅವರ ಆರಾಧ್ಯ ದೈವ ನೊಣವಿನಕೆರೆ ಅಜ್ಜಯ್ಯ ಅವರ ಭಾವಚಿತ್ರ ಸೇರಿ ದೇವರ ಫೋಟೋಗಳನ್ನಿಟ್ಟು, ವಿಶೇಷ ಪೂಜೆ ನೆರವೇರಿಸಲಾಗಿದೆ.

ರಾಗಾ, ಸಿಬಲ್‌ ಸೇರಿ 50ಕ್ಕೂ ಹೆಚ್ಚು ಗಣ್ಯರಿಗೆ ಡಿಕೆ ಆಹ್ವಾನ:

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬುಧವಾರದಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಲೋಕಭವನದ ಆವರಣದಲ್ಲಿರುವ ಸುಂದರ ಗಾಜಿನ ಮನೆಯಲ್ಲಿ ಈ ಐತಿಹಾಸಿಕ ಹಾಗೂ ಅದ್ಧೂರಿ ಪದಗ್ರಹಣ ಸಮಾರಂಭ ಜರುಗಲಿದೆ. ಪ್ರಮಾಣ ವಚನ ಸಮಾರಂಭಕ್ಕೆ ಗಣ್ಯರ ದಂಡೇ ಆಗಮಿಸುತ್ತಿದ್ದು, 50ಕ್ಕೂ ಹೆಚ್ಚು ದೆಹಲಿಗರಿಗೆ ಡಿಕೆಶಿ ಆಹ್ವಾನ ನೀಡಿದ್ದಾರೆ.

ಬುಧವಾರ ಸಂಜೆ 4:10 ಗಂಟೆಗೆ ಸರಿಯಾಗಿ ಆರಂಭವಾಗಲಿರುವ ನಿಗದಿತ ಶುಭ ಮುಹೂರ್ತದಲ್ಲಿ ಡಿಕೆಶಿಯವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸಮಾರಂಭಕ್ಕೆ ಗಣ್ಯರ ದಂಡೇ ಆಗಮಿಸುತ್ತಿದೆ. ಈ ಪ್ರತಿಷ್ಠಿತ ಸಮಾರಂಭಕ್ಕೆ ಅಧಿಕೃತ ಆಹ್ವಾನ ಪತ್ರಿಕೆಗಳನ್ನು ವಿತರಿಸಲಾಗುತ್ತಿದ್ದು, ಭದ್ರತಾ ದೃಷ್ಟಿಯಿಂದ ಕೇವಲ ಆಯ್ದ ವಿವಿಐಪಿ ಮತ್ತು ಗಣ್ಯ ಅತಿಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಸಮಾರಂಭಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಈ ಮಧ್ಯೆ, ಪಕ್ಷದ ದೆಹಲಿ ವಲಯದಲ್ಲಿ ಉತ್ತಮ ಸಂಪರ್ಕ ಬೆಳೆಸಿಕೊಂಡಿರುವ ಡಿಕೆಶಿ, ಪ್ರಮಾಣ ವಚನ ಸಮಾರಂಭಕ್ಕೆ ದೆಹಲಿಯಲ್ಲಿನ ಗಣ್ಯರನ್ನೂ ಆಹ್ವಾನಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್‌ ಹಿರಿಯ ನಾಯಕ ಕಪಿಲ್ ಸಿಬಲ್ ಸೇರಿ ಸುಮಾರು 50ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ ನೀಡಿದ್ದಾರೆ. ಎಐಸಿಸಿ ಪದಾಧಿಕಾರಿಗಳು, ವಕೀಲರು, ಮಾಜಿ ಸಿಎಂ ಸೇರಿ ತಮ್ಮ ಆಪ್ತೆಷ್ಟರನ್ನು ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

DK Shivakumar: ಇಂದಿನಿಂದ ಡಿಕೆ ಸರ್ಕಾರ: ಕರುನಾಡಿನ 24ನೇ ಮುಖ್ಯಮಂತ್ರಿಯಾಗಿ ಇಂದು ಸಂಜೆ 4.05ಕ್ಕೆ ಪ್ರಮಾಣ
B Nagendra: ವಾಲ್ಮೀಕಿ ನಿಗಮದ ದುಡ್ಡಲ್ಲಿ ಬೇನಾಮಿ ಕಾರು ಖರೀದಿ; ನಾಗೇಂದ್ರ ಮತ್ತಷ್ಟು ಅಕ್ರಮ ಸಿಬಿಐನಿಂದ ಪತ್ತೆ!