
ಬೆಂಗಳೂರು (ಜೂ.3): ಕರುನಾಡಿನ(Karnataka) 24ನೇ ಮುಖ್ಯಮಂತ್ರಿಯಾಗಿ ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್(DK Shivakumar) ಬುಧವಾರ ಸಂಜೆ 4.05ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜತೆಗೆ, ತಮ್ಮ ನೂತನ ಸಂಪುಟಕ್ಕೆ ಬಹುತೇಕ 14 ಮಂದಿ ಹಿರಿಯ ಸಚಿವರನ್ನು ಸೇರ್ಪಡೆ ಮಾಡಿಕೊಳ್ಳಲಿದ್ದಾರೆ.
2023ರ ಮೇ 20 ರಂದು ಗಂಗಾಧರ ಅಜ್ಜಯ್ಯ(Gangadhara Ajjaiah)ನ ಹೆಸರಿನಲ್ಲಿ ಉಪಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಡಿ.ಕೆ. ಶಿವಕುಮಾರ್ ಅವರು, ಮುಖ್ಯಮಂತ್ರಿಯಾಗಿಯೂ ಅಜ್ಜಯ್ಯ ಅವರ ಹೆಸರಿನಲ್ಲೇ ಗೋಪ್ಯತಾವಿಧಿ ಸ್ವೀಕರಿಸುವ ಸಾಧ್ಯತೆಯಿದೆ ಎನ್ನುತ್ತವೆ ಅವರ ಆಪ್ತ ಮೂಲಗಳು.
ನಾಡಿನ ನೂತನ ದೊರೆಗೆ ಪಟ್ಟ ಕಟ್ಟಲು ಲೋಕಭವನ ಸಕಲ ರೀತಿಯಿಂದಲೂ ಸಜ್ಜುಗೊಂಡಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್(Governor Thaawarchand Gehlot) ಅವರಿಂದ ಮುಖ್ಯಮಂತ್ರಿ(Chief Minister) ಹಾಗೂ ಸಚಿವರು ಪ್ರತಿಜ್ಞಾ ವಿಧಿ(oath) ಸ್ವೀಕರಿಸಲಿದ್ದಾರೆ.
ತನ್ಮೂಲಕ 1980ರ ದಶಕದಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ಮೂಲಕ ರಾಜಕೀಯ ಸಂಘಟನೆ ಶುರು ಮಾಡಿದ ಡಿ.ಕೆ. ಶಿವಕುಮಾರ್ ಅವರ ನಾಲ್ಕೂವರೆ ದಶಕಗಳ ಪರಿಶ್ರಮಕ್ಕೆ ಫಲ ದೊರೆತಂತಾಗಲಿದೆ. ಸಾತನೂರಿನಿಂದ ರಾಜಕೀಯ ಶುರು ಮಾಡಿ ಎಚ್.ಡಿ.ದೇವೇಗೌಡರಂತಹ ದಿಗ್ಗಜರೊಂದಿಗೆ ಸೆಣಸಾಡಿ 8 ಬಾರಿ ಶಾಸಕರಾಗಿ, 5 ಬಾರಿ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿ ಆಗಿ ನಾಲ್ಕೂವರೆ ದಶಕದಲ್ಲಿ ಹಲವು ಮೆಟ್ಟಿಲುಗಳನ್ನು ಡಿಕೆಶಿ ಹತ್ತಿದ್ದಾರೆ. ಕಾಂಗ್ರೆಸ್ ಪಾಲಿನ ‘ಟ್ರಬಲ್ ಶೂಟರ್’ ಎಂದೇ ಹೆಸರಾಗಿರುವ ಅವರು 3 ದಶಕಗಳಿಂದ ಕನಸು ಕಂಡಿದ್ದ ಕ್ಷಣ ಇಂದು ನನಸಾಗುತ್ತಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಸೇರಿದಂತೆ ಎಐಸಿಸಿ ವರಿಷ್ಠರು, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು, 55ಕ್ಕೂ ಹೆಚ್ಚು ಸರ್ವಧರ್ಮಗುರುಗಳು, ಗಣ್ಯರು, ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಸೇರಿ 3,000ಕ್ಕೂ ಹೆಚ್ಚು ಮಂದಿ ಸಮ್ಮುಖ ಶಿವಕುಮಾರ್ ಅಧಿಕಾರದ ಶಪಥ ಸ್ವೀಕರಿಸಲಿದ್ದಾರೆ.
ದೇವರಿಗೆ ಪೂಜೆ ಸಲ್ಲಿಸುವುದು ಸೇರಿ ವಿವಿಧ ಚಟುವಟಿಕೆ ಬಳಿಕ ಲೋಕಭವನಕ್ಕೆ ಆಗಮಿಸಲಿದ್ದಾರೆ. ಪ್ರತಿಜ್ಞಾವಿಧಿ ಸ್ವೀಕರಿಸಿದ ಬಳಿಕ ಕೆಪಿಸಿಸಿಯ ಭಾರತ್ ಜೋಡೋ ಭವನಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಲೋಕಭವನದಲ್ಲಿ ಆಯೋಜಿಸಿದ್ದ ಪ್ರಮಾಣವಚನ ಕಾರ್ಯಕ್ರಮಗಳಿಗಿಂತ ದೊಡ್ಡಮಟ್ಟದಲ್ಲಿ ಸಮಾರಂಭ ಆಯೋಜನೆಗೊಳ್ಳುತ್ತಿದೆ. ಹೆಚ್ಚು ಮಂದಿಗೆ ಅವಕಾಶ ಕಲ್ಪಿಸಲು ವೇದಿಕೆಯ ದಿಕ್ಕು ಬದಲಿಸಿ ವಾಹನ ನಿಲುಗಡೆ ಜಾಗದಲ್ಲಿ ವೇದಿಕೆ ನಿರ್ಮಿಸಲಾಗಿದೆ. ತನ್ಮೂಲಕ 600-700 ಮಂದಿ ಆಸೀನರಾಗುವ ಸಾಮರ್ಥ್ಯವಿದ್ದ ಲೋಕಭವನದಲ್ಲಿ ಹೆಚ್ಚು ಮಂದಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದು, ಪಶ್ಚಿಮದಲ್ಲಿದ್ದ ಗಾಜಿನಮನೆ ವೇದಿಕೆಯಲ್ಲಿ ಧರ್ಮಗುರುಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ 500 ಎ ಕೆಟಗರಿ ಪಾಸು, 500 ಬಿ ಕೆಟಗರಿ ಪಾಸು, 660 ವಿವಿಐಪಿ ಪಾಸು, 610 ವಿಐಪಿ ಪಾಸು ವಿತರಿಸಲಾಗಿದೆ. 250 ಶಾಸಕರು ಹಾಗೂ ಮಾಜಿ ಶಾಸಕರು ಸೇರಿ 3,000 ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಮುಖ್ಯಮಂತ್ರಿಗಳಾದ ತೆಲಂಗಾಣದ ರೇವಂತ್ ರೆಡ್ಡಿ, ಹಿಮಾಚಲಪ್ರದೇಶದ ಸುಖ್‌ವಿಂದರ್ ಸಿಂಗ್ ಸುಖು, ಕೇರಳಂ ಮುಖ್ಯಮಂತ್ರಿ ವಿ.ಡಿ.ಸತೀಶನ್, ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಸೇರಿ ಹಲವು ಮಾಜಿ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ. ಜತೆಗೆ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಧರ್ಮದ 55 ಸರ್ವಧರ್ಮ ಗುರುಗಳಿಗೆ ಆಹ್ವಾನ ನೀಡಲಾಗಿದೆ.
ಆದಿ ಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ನೊಣವಿನಕೆರೆ ಕಾಡಸಿದ್ಧೇಶ್ವರ ಮಠದ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು, ಮಹಾಬೋಧಿ ಸೊಸೈಟಿಯ ಆನಂದ ಬಿಕ್ಕು, ಆರ್ಚಬಿಷಪ್ ಡಾ.ಪೀಟರ್ ಮಚಾಡೋ, ಖ್ವಾಜಾ ಬಂದೇನವಾಜ್ ದರ್ಗಾದ ಧರ್ಮಗುರು ಸೇರಿ ಹಲವರಿಗೆ ಆಹ್ವಾನ ಹೋಗಿದೆ.
ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರದ ಮೂಲಕ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರ ಕೊನೆಗೊಳ್ಳಲಿದೆ. 8 ವರ್ಷ 17 ದಿನಗಳ ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಬರೆದಿರುವ ಸಿದ್ದರಾಮಯ್ಯ ಅವರ ಪ್ರಸಕ್ತ ಅವಧಿಯ ಅಧಿಕಾರ ಬುಧವಾರಕ್ಕೆ ಅಂತ್ಯವಾಗಲಿದೆ.
ಶಾಲಾ ವಿದ್ಯಾರ್ಥಿಗಳೂ ಭಾಗಿ:
ಡಿ.ಕೆ.ಶಿವಕುಮಾರ್ ಅವರ ಕಚೇರಿ ಹೇಳಿಕೆ ಪ್ರಕಾರ, ವಿವಿಧ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರು, ಉಪಮುಖ್ಯಮಂತ್ರಿಗಳು, ರಾಜ್ಯದ ಶಾಸಕರು, ಸಂಸದರ ಜತೆಗೆ ಕನಕಪುರ ದೊಡ್ಡಾಲಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೂ ಆಹ್ವಾನಿಸಲಾಗಿದೆ.
ಜತೆಗೆ ಕೂಲಿ ಕಾರ್ಮಿಕರು, ಕನ್ನಡಪರ ಹೋರಾಟಗಾರರು, ಪೌರ ಕಾರ್ಮಿಕರು, ರೈತ ಮುಖಂಡರು, ದಲಿತ, ಹಿಂದುಳಿದ ವರ್ಗದ ಮುಖಂಡರು, ಸ್ತ್ರೀಶಕ್ತಿ ಸಂಘ, ಸಿನಿಮಾರಂಗ, ನ್ಯಾಯಾಂಗ, ಕ್ರೀಡೆ ಸಾಹಿತ್ಯ, ಮಾಧ್ಯಮ, ವಾಣಿಜ್ಯ, ಕೈಗಾರಿಕೆ, ಹೋಟೆಲ್ ಉದ್ಯಮಗಳ ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಆಹ್ವಾನಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಲೋಕಭವನದ ಸುತ್ತಮುತ್ತ ವಿಐಪಿ, ವಿವಿಐಪಿ ಸಂಚಾರ ಹೆಚ್ಚಿರುವ ಸಾಧ್ಯತೆಯಿದೆ. ಹೀಗಾಗಿ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯು ಸಚಿವಾಲಯ ಹಾಗೂ ವಿಧಾನಸೌಧ ಸುತ್ತಮುತ್ತಲ ಸರ್ಕಾರಿ ಕಚೇರಿಗಳಿಗೆ ಬುಧವಾರ ಮಧ್ಯಾಹ್ನದ ಬಳಿಕ ರಜೆ ಘೋಷಿಸಲಾಗಿದೆ.
ಯಾರ್‍ಯಾರು ಭಾಗಿ?
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿಎಂಗಳಾದ ತೆಲಂಗಾಣದ ರೇವಂತರೆಡ್ಡಿ, ಹಿಮಾಚಲದ ಸುಖ್‌ವಿಂದರ್, ಕೇರಳಂನ ಸತೀಶನ್, 55 ಸರ್ವಧರ್ಮ ಗುರುಗಳು, ದೊಡ್ಡಾಲಹಳ್ಳಿ ಶಾಲೆಯ ಮಕ್ಕಳು, ಕೂಲಿ ಕಾರ್ಮಿಕರು, ರೈತ ಮುಖಂಡರು, ಹೋರಾಟಗಾರರು ವಿವಿಧ ಕ್ಷೇತ್ರ ಗಣ್ಯರು ಸೇರಿ 3000 ಮಂದಿ.
ಅಜ್ಜಯ್ಯ ಹೆಸರಲ್ಲಿ ಪ್ರಮಾಣವಚನ?
3 ವರ್ಷಗಳ ಹಿಂದೆ ಡಿಸಿಎಂ ಆದಾಗ ಗಂಗಾಧರ ಅಜ್ಜಯ್ಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಡಿಕೆಶಿ. ಈ ಬಾರಿಯೂ ಅಜ್ಜಯ್ಯ ಹೆಸರಲ್ಲೇ ಶಪಥಗ್ರಹಣ ಸಾಧ್ಯತೆ
ಗಾಜಿನ ಮನೆಯಲ್ಲಿ ಇಲ್ಲ ಪ್ರಮಾಣವಚನ
ಈ ಹಿಂದೆ ಲೋಕಭವನದಲ್ಲಿ ಆಯೋಜಿಸಿದ್ದ ಪ್ರಮಾಣವಚನ ಕಾರ್ಯಕ್ರಮಗಳಿಗಿಂತ ದೊಡ್ಡಮಟ್ಟದಲ್ಲಿ ಸಮಾರಂಭ ಆಯೋಜನೆಗೊಳ್ಳುತ್ತಿದೆ. ಗಾಜಿನಮನೆಯ ಬದಲು ವಾಹನ ನಿಲುಗಡೆ ಜಾಗದಲ್ಲಿ ವೇದಿಕೆ ನಿರ್ಮಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.