
ಬೆಂಗಳೂರು (ನ.25): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಆಸ್ತಿ. ಅವರು ಏನು ಹೇಳಿದರೂ ಅದಕ್ಕೆ ನಮ್ಮ ತಕರಾರಿಲ್ಲ. ಅದು ನಮಗೆ ವೇದವಾಕ್ಯ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರದ ಬಗ್ಗೆ ನಾನು ಯಾವತ್ತು ಏನೂ ಹೇಳಿಲ್ಲ. ಅವರು ಹೇಳಿದ್ದಕ್ಕೆ ನಾನು ಗೌರವ ನೀಡುತ್ತೇನೆ, ನನ್ನದೇನೂ ತಕರಾರಿಲ್ಲ. ಅವರು ನಮ್ಮ ಪಕ್ಷದ ಆಸ್ತಿ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ. ಇನ್ನು, ಮಾಧ್ಯಮಗಳು ಸುಮ್ಮನೆ ಗೊಂದಲ ಸೃಷ್ಟಿಸುತ್ತಿವೆ. ಏನಾದರೂ ಇದ್ದರೆ ನನ್ನ ಮತ್ತು ಪಕ್ಷದ ಹೈಕಮಾಂಡ್ ನಡುವೆ ಇರುತ್ತದೆ. ಅದನ್ನು ಮಾತನಾಡಿ ಸರಿಪಡಿಸಿಕೊಳ್ಳುತ್ತೇನೆ ಎಂದರು.
ದೆಹಲಿಗೆ ಭೇಟಿ ಶಿಸ್ತು ಉಲ್ಲಂಘನೆಯಲ್ಲ: ಶಾಸಕರ ದೆಹಲಿ ಭೇಟಿ ಪಕ್ಷದ ಶಿಸ್ತು ಉಲ್ಲಂಘನೆಯಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ಶಾಸಕರು ದೆಹಲಿಗೆ ಹೋಗುವುದು ಸಹಜ. ಸಚಿವ ಸಂಪುಟ ಪುನಾರಚನೆ ಪ್ರಸ್ತಾಪವಾಗಿರುವ ಕಾರಣ ಸಚಿವ ಸ್ಥಾನ ಆಕಾಂಕ್ಷಿಗಳು ದೆಹಲಿಗೆ ಹೋಗಿದ್ದಾರೆ. ದೆಹಲಿಯಲ್ಲಿ ನಮ್ಮ ಪಕ್ಷದ ನಾಯಕರಿದ್ದಾರೆ, ಅವರ ಮನೆ ನಮಗೆ ದೇವಸ್ಥಾನವಿದ್ದಂತೆ. ಅಲ್ಲಿಗೆ ಭೇಟಿ ನೀಡಬಹುದು. ಶಾಸಕರು ಪಕ್ಷ ವಿರೋಧಿ ಹೇಳಿಕೆ ನೀಡಿರುವುದು, ಚಟುವಟಿಕೆ ಮಾಡಿರುವುದು, ಡಿನ್ನರ್ ಸಭೆ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ತಮ್ಮ ಭವಿಷ್ಯ ರೂಪಿಸಿಕೊಳ್ಳಲು ದೆಹಲಿಗೆ ಹೋಗಿರಬಹುದು ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಹೈಕಮಾಂಡ್ ತೀರ್ಮಾನ ಎಂದು ಹೇಳಿರುವುದಕ್ಕೆ ಉತ್ತರಿಸಿ, ಹೈಕಮಾಂಡ್ ಎಂದರೆ ಒಂದು ಸಮಿತಿಯಿದೆ. ಏಕಾಏಕಿ ಒಬ್ಬರು ನಿರ್ಧರಿಸಲಾಗದು. ಕೆಪಿಸಿಸಿಗೆ ನಾನು ಅಧ್ಯಕ್ಷನಾಗಿದ್ದರೂ ನಾನೊಬ್ಬನೇ ತೀರ್ಮಾನ ಮಾಡಲು ಆಗುವುದಿಲ್ಲ. ವಿಧಾನಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡುವುದಕ್ಕೆ ಮುಖ್ಯಮಂತ್ರಿ ಅವರನ್ನು ಕೇಳಿದ್ದೇನೆ. ಜಿಲ್ಲಾಧ್ಯಕ್ಷರು, ವಿವಿಧ ನಾಯಕರೊಂದಿಗೆ ಮಾತನಾಡಿದ್ದೇನೆ. ಅದೇ ದಾಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ ಎಂದರು.
ಕಾಂಗ್ರೆಸ್ ಶಾಸಕರನ್ನು ಕಾಂಗ್ರೆಸ್ ನಾಯಕರೇ ಖರೀದಿ ಮಾಡುವ ಪರಿಸ್ಥಿತಿಯಿದೆ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಶಾಸಕರ ಖರೀದಿ, ಕುದುರೆ ವ್ಯಾಪಾರ ಬಿಜೆಪಿ ಸಂಸ್ಕೃತಿ. ಕುದುರೆ ವ್ಯಾಪಾರದ ಪಿತಾಮಹರೇ ಬಿಜೆಪಿ ನಾಯಕರು. ಅದು ಅವರ ರೂಢಿ. ಜೆಡಿಎಸ್ ಅದಕ್ಕೆ ಬಲಿಯಾಯಿತು. ಈಗ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ರಚನೆಯಾದಾಗ ಎಷ್ಟು ಸಾವಿರ ಕೋಟಿ ರು.ಅನ್ನು ಖರ್ಚು ಮಾಡಿದ್ದರು. ಹೋಟೆಲ್‌ನಲ್ಲಿ ಸಿಗುವ ತಿಂಡಿ ರೀತಿ ಪ್ರತಿ ಹುದ್ದೆಗಳಿಗೆ ಇಂತಿಷ್ಟು ಎಂದು ನಿಗದಿ ಮಾಡಿದ್ದರು ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಹುದ್ದೆಗೆ ಎಷ್ಟು ಹಣ ನೀಡಬೇಕಾಗಿತ್ತು. ಸಚಿವ ಸ್ಥಾನಕ್ಕೆ ಎಷ್ಟು ಹಣ ನೀಡಲಾಗಿದೆ ಎಂದು ಅವರದೇ ಪಕ್ಷದ ನಾಯಕರು ಬಹಿರಂಗವಾಗಿ ಹೇಳಿದ್ದರು. ಅವರು ಎಷ್ಟು ಹಣ ಆಮಿಷವೊಡ್ಡಿದ್ದರು ಎಂದು ವಿಧಾನಸಭೆಯಲ್ಲೂ ಪ್ರಸ್ತಾಪವಾಗಿತ್ತು. ಅದು ದಾಖಲೆಗಳಲ್ಲಿದೆ. ಈಗ ಬಿಜೆಪಿ ಅವರು ತಮ್ಮ ಪ್ರವೃತ್ತಿಯನ್ನು ನೆನಪು ಮಾಡಿಕೊಳ್ಳುತ್ತಿರಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.