ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ರಾಜ್ಯ ರಾಜಕಾರಣದ ಕುರಿತು ಚರ್ಚಿಸಲಾಗಿದ್ದು, ಚುನಾವಣಾ ಪ್ರಚಾರ ಕಾರ್ಯದ ತಂತ್ರಗಾರಿಕೆ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರು (ಏ.23): ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ರಾಜ್ಯ ರಾಜಕಾರಣದ ಕುರಿತು ಚರ್ಚಿಸಲಾಗಿದ್ದು, ಚುನಾವಣಾ ಪ್ರಚಾರ ಕಾರ್ಯದ ತಂತ್ರಗಾರಿಕೆ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಶಿಕಾರಿಪುರಕ್ಕೆ ತೆರಳುವ ಮುನ್ನ ಶನಿವಾರ ಕಾವೇರಿ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ರಾಜ್ಯದತ್ತ ಹೆಚ್ಚಿನ ಗಮನ ಹರಿಸುವುದಾಗಿ ಹೇಳಿದ್ದಾರೆ. ಪ್ರಚಾರ ಕಾರ್ಯಕ್ಕೆ ಹೆಚ್ಚಿನ ಸಮಯ ನೀಡುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪರ ಉತ್ತಮ ವಾತಾವರಣ ಇದ್ದು, ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ.
ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ರಾಜ್ಯ ರಾಜಕಾರಣದ ಕುರಿತು ಮಾತುಕತೆ ನಡೆಸಲಾಗಿದೆ. ಈ ವೇಳೆ ಹಲವು ಸಲಹೆಗಳನ್ನು ನೀಡಿದ್ದಾರೆ ಎಂದರು. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹೆಚ್ಚು ಬಾರಿ ಬರಲಿದ್ದಾರೆ. ಪ್ರಚಾರದಲ್ಲಿ ಭಾಗಿಯಾಗಲು ಹೆಚ್ಚಿನ ಸಮಯ ಮೀಸಲಿಟ್ಟಿದ್ದಾರೆ. ರಾಜ್ಯದ ಜನತೆ ನಮ್ಮ ಜತೆ ಇದ್ದಾರೆ. ನೂರಕ್ಕೆ ನೂರರಷ್ಟು ಬಿಜೆಪಿ ಅಧಿಕಾರಕ್ಕೆ ಬರಲಿದೆ. ಶಿವಮೊಗ್ಗ ಪ್ರವಾಸದ ಬಳಿಕ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ರಾಜ್ಯದ ಪ್ರತಿ ವಿಧಾನಸಭೆ ಕ್ಷೇತ್ರಗಳಿಗೂ ಹೋಗಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳುತ್ತೇನೆ ಎಂದರು.
ಏ.30ಕ್ಕೆ ಕೋಲಾರ, ಚನ್ನಪಟ್ಟಣ, ಮೈಸೂರಲ್ಲಿ ಪ್ರಧಾನಿ ಮೋದಿ ಸಮಾವೇಶ: ಬೃಹತ್ ರೋಡ್ ಶೋ
ಶೆಟ್ಟರ್ ರಾಜೀನಾಮೆ ಪಕ್ಷಕ್ಕೆ ದ್ರೋಹ: ‘ಜಗದೀಶ್ ಶೆಟ್ಟರ್ ಅವರಿಗೆ ಎಲ್ಲ ಸ್ಥಾನಮಾನ ಕೊಟ್ಟಿದ್ದೇವೆ. ಆದರೂ ಅವರು ಈ ರೀತಿಯ ದುಡುಕಿನ ನಿರ್ಧಾರ ತೆಗೆದುಕೊಂಡಿರುವುದು ಪಕ್ಷಕ್ಕೆ ಮಾಡಿದ ದ್ರೋಹ. ಅಕ್ಷಮ್ಯ ಅಪರಾಧ. ನಾಡಿನ ಜನತೆ ಯಾವತ್ತೂ ಅವರನ್ನು ಕ್ಷಮಿಸುವುದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀಕ್ಷ್ಣವಾಗಿ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಇತರ ನಾಯಕರ ಜತೆಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಸ್ಥಾನಮಾನ ಸಿಗಲಿ ಅಥವಾ ಸಿಗದಿರಲಿ. ದೇಶಕ್ಕಾಗಿ ಕೆಲಸ ಮಾಡಬೇಕು. ರಾಜ್ಯದ ಜನತೆ ಜಗದೀಶ್ ಶೆಟ್ಟರ್ ಅವರನ್ನು ಗುರುತಿಸಲು ಬಿಜೆಪಿ ಪಕ್ಷ ಕಾರಣ. ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ ಪಕ್ಷದ ಬೆಂಬಲ ಇಲ್ಲದೆ ದೊಡ್ಡವನಾಗಲು ಸಾಧ್ಯವಿಲ್ಲ. ಮುಖ್ಯಮಂತ್ರಿಯಾಗಿ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಎಲ್ಲ ಸ್ಥಾನಮಾನ ನೀಡಿದ್ದೆವು: ಬಿಜೆಪಿ ನನಗೆ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಈಶ್ವರಪ್ಪ ಎಲ್ಲರಿಗೂ ಸರಿಯಾದ ಸ್ಥಾನಮಾನ ಕೊಟ್ಟು ಅನೇಕ ಅವಕಾಶಗಳನ್ನೂ ಕೊಟ್ಟಿದೆ. ಶೆಟ್ಟರ್ ಜನಸಂಘದ ಕಾಲದಿಂದ ಬಿಜೆಪಿ ಕುಟುಂಬದಲ್ಲಿ ಇದ್ದವರು. ಇವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ್ದೆ. ವಿರೋಧ ಪಕ್ಷದ ನಾಯಕ, ಮಂತ್ರಿ, ಮುಖ್ಯಮಂತ್ರಿ ಮಾಡಿದ್ದೆವು. ಬಿ.ಬಿ.ಶಿವಪ್ಪ ಅವರನ್ನು ಎದುರು ಹಾಕಿಕೊಂಡು ಯುವಕ ಬೆಳೆಯಬೇಕು ಎಂಬ ಕಾರಣಕ್ಕೆ ವಿರೋಧ ಪಕ್ಷದ ನಾಯಕನಾಗಿ ಮಾಡಿದ್ದೆವು. ನಾನು ಮತ್ತು ದಿವಂಗತ ಅನಂತಕುಮಾರ್ ಜಗದೀಶ್ ಶೆಟ್ಟರ್ ಬೆನ್ನಿಗೆ ಕಾವಲಾಗಿ ನಿಂತಿದ್ದೆವು. ನಾನೇ ಮುಂದೆ ನಿಂತು ಅವರನ್ನು ಮುಖ್ಯಮಂತ್ರಿ ಮಾಡಿದ್ದೆ ಎಂದು ಹೇಳಿದರು.
ರಮ್ಯಾರನ್ನು ಬಿಜೆಪಿಗೆ ಆಹ್ವಾನಿಸುವಷ್ಟು ನಮ್ಮ ಪಾರ್ಟಿ ಬರಗೆಟ್ಟಿಲ್ಲ: ಸಚಿವ ಅಶೋಕ್
ಕೇಂದ್ರ ಮಂತ್ರಿ ಸ್ಥಾನದ ಆಫರ್: ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೆಂದ್ರ ಪ್ರಧಾನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಶನಿವಾರ ಖುದ್ದು ಶೆಟ್ಟರ್ ಮನೆಗೆ ತೆರಳಿ ಚರ್ಚಿಸಿದ್ದರು. ಶೆಟ್ಟರ್ ಅವರಿಗೆ ಚುನಾವಣಾ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುವಂತೆ ಹೇಳಿಲ್ಲ. ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಬಳಿಕ ಕೇಂದ್ರದಲ್ಲಿ ಮಂತ್ರಿ ಮಾಡುತ್ತೇವೆ. ಇಂತಹ ಸಂದರ್ಭದಲ್ಲಿ ಬೇರೆ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಮಾತನಾಡಿ ಬಂದಿದ್ದರು. ಆದರೂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಜತೆಗೆ ಕೈಜೋಡಿಸಿ ಹೊರಟ್ಟಿರುವುದು ಅಕ್ಷಮ್ಯ ಎಂದು ಹರಿಹಾಯ್ದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.