
ಬೆಂಗಳೂರು (ನ.13): ಬಿಜೆಪಿ ಕರ್ನಾಟಕ ಅಭಿವೃದ್ಧಿಗೆ ವಿರೋಧಿ ಪಕ್ಷವಾಗಿದ್ದು, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡರೂ ಅದನ್ನು ವಿರೋಧಿಸುತ್ತಾರೆ. ನಮ್ಮ ಕೆಲಸಕ್ಕೆ ವಿರೋಧ ಇದ್ದಕ್ಕೂ ನಾವು ಎಚ್ಚರಿಕೆಯಿಂದ ಕೆಲಸ ಮಾಡಬಹುದು. ಬಿಜೆಪಿ ವಿರೋಧ ಮಾಡಿದಷ್ಟೂ, ನಾವು ಉತ್ತಮ ಕೆಲಸ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನಮ್ಮ ಟನಲ್ ರಸ್ತೆಯ ಸ್ವರೂಪ, ಗಾತ್ರದ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಪುಣೆ, ಮುಂಬೈ, ದೆಹಲಿ ಆಡಳಿತದಲ್ಲಿರುವವರು ಸಂತೋಷ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಶೇ. 50ರಷ್ಟು ಭಾಗ ಕಲ್ಲಿದೆ. ಅದನ್ನು ಗಮನದಲ್ಲಿಟ್ಟುಕೊಂಡೇ ನಾವು ಮೆಟ್ರೋ ಯೋಜನೆ ಅನುಷ್ಠಾನಗೊಳಿಸಿದ್ದೇವೆ. ಮೆಟ್ರೋದ ಶೇ. 50ರಷ್ಟು ಮಾರ್ಗ ಟನಲ್ ರೂಪದಲ್ಲಿದೆ. ಆಗ ಯಾರೂ ಮಾತನಾಡಲಿಲ್ಲ. ನಾವು ನಮ್ಮ ಕರ್ತವ್ಯ ಮಾಡುತ್ತೇವೆ. ಇದು ನನಗಾಗಿ ಮಾಡುತ್ತಿರುವ ಯೋಜನೆಯಲ್ಲ. ಮುಂದಿನ ಪೀಳಿಗೆಯ ಭವಿಷ್ಯಕ್ಕೆ, ಬೆಂಗಳೂರಿಗಾಗಿ ಮಾಡುತ್ತಿರುವುದು ಎಂದು ತಿರುಗೇಟು ನೀಡಿದರು.
ಟನಲ್ ರಸ್ತೆ ನಿಮ್ಮ ಕನಸಿನ ಯೋಜನೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಟನಲ್ ರಸ್ತೆ ನನ್ನ ಕನಸಿಗಿಂತ ಯುವ ಪೀಳಿಗೆಯ ಕನಸು. ಪುಣೆ, ಮುಂಬೈ ಸೇರಿದಂತೆ ಇನ್ನಿತರ ಕಡೆ ಟನಲ್ ರಸ್ತೆ ಮಾಡಲಾಗಿದೆ. ಅಲ್ಲಿ ಎಲ್ಲವೂ ಸರಿಯಾಗಿದೆ. ಕರ್ನಾಟಕದಲ್ಲಿ ಏನೇ ಮಾಡಲು ಹೋದರೂ ವಿರೋಧ ಮಾಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಶಾಸಕರೊಂದಿಗೂ ಸಭೆ ಮಾಡಿ ವಿವರಿಸಿದ್ದೇನೆ. ಆಗ ಎಲ್ಲರೂ ಒಪ್ಪಿದ್ದರು. ಈಗ ಅವರು ವಿರೋಧ ಮಾಡುತ್ತಿದ್ದು, ನಾವು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ಬಿಜೆಪಿಯವರು ಟೀಕೆ ಮಾಡುತ್ತಲೇ ಪ್ರಚಾರ ನೀಡುತ್ತಿದ್ದಾರೆ. ಬಿಜೆಪಿ ಕರ್ನಾಟಕ ಅಭಿವೃದ್ಧಿಗೆ ವಿರೋಧಿ ಪಕ್ಷವಾಗಿದೆ ಎಂದು ಹೇಳಿದರು.
ಸಿಂಗಾಪುರ ದೇಶವು ಬೆಂಗಳೂರಿನಲ್ಲಿ ವ್ಯಾಪಾರ ವಹಿವಾಟು ನಡೆಸಲು ಹೆಚ್ಚು ಉತ್ಸುಕವಾಗಿದ್ದು, ತಂತ್ರಜ್ಞಾನ ಹಂಚಿಕೊಳ್ಳುವಿಕೆ ಸೇರಿ ಕೈಗಾರಿಕಾ ಪಾರ್ಕ್ ಆರಂಭಿಸುವ ಬಗ್ಗೆ ಸಿಂಗಾಪುರ ವಿದೇಶಾಂಗ ಸಚಿವರು ಚರ್ಚೆ ನಡೆಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿ ಸಿಂಗಾಪುರ ವಿದೇಶಾಂಗ, ವಾಣಿಜ್ಯ ಮತ್ತು ಕೈಗಾರಿಕೆ ಸಚಿವೆ ಗಾನ್ ಶಿಯೋ ಹುಯಂಗ್ ಅವರ ನೇತೃತ್ವದ ನಿಯೋಗ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಡಿ.ಕೆ.ಶಿವಕುಮಾರ್ ಭೇಟಿ ನಂತರ ಖನಿಜ ಭವನದಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಭೇಟಿಯಾದ ಸಿಂಗಾಪುರ ಸಚಿವರ ನೇತೃತ್ವದ ನಿಯೋಗ, ಬಂಡವಾಳ ಹೂಡಿಕೆ ಮತ್ತು ಸಹಭಾಗಿತ್ವ ಕುರಿತು ಮಾತುಕತೆ ನಡೆಸಿತು. ಈ ವೇಳೆ ಎಂ.ಬಿ.ಪಾಟೀಲ್ ಅವರು, ಸಿಂಗಾಪುರ ಜತೆ ಕೈಗಾರಿಕೆ ಮತ್ತು ವಾಣಿಜ್ಯ ಸಹಭಾಗಿತ್ವ ಬೆಳೆಸಿಕೊಳ್ಳಲು ರಾಜ್ಯದ ಪಾಲಿಗೆ ಉತ್ತಮ ಅವಕಾಶಗಳಿವೆ. ಅದನ್ನು ಸದ್ಭಳಕೆ ಮಾಡಿಕೊಳ್ಳುವ ಉದ್ದೇಶದಿಂದ 2026ರಲ್ಲಿ ಸಿಂಗಾಪುರಕ್ಕೆ ಭೇಟಿ ನೀಡಿ ಮಾತುಕತೆ ಮಾಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.