Mekedatu ಯೋಜನೆಯಿಂದ ಒಂದು ಬಕೆಟ್‌ ನೀರೂ ನೀರಾವರಿಗೆ ಬಳಸಲ್ಲ: ಸಿಎಂ ಡಿಕೆಶಿ ಸ್ಪಷ್ಟನೆ

Published : Jun 19, 2026, 12:29 AM IST
DK Shivakumar

ಸಾರಾಂಶ

Mekedatu ಯೋಜನೆಯಿಂದ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕಾಗಿ ಈ ಯೋಜನೆ ಅನಿವಾರ್ಯ.

ಬೆಂಗಳೂರು (ಜೂ.19): ‘ಮೇಕೆದಾಟು ಯೋಜನೆ ದಕ್ಷಿಣ ಭಾರತದ ಹೃದಯ ಇದ್ದಂತೆ. ಈ ಯೋಜನೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಹಿತ ಅಡಗಿದೆ. ನಾವು ಯೋಜನೆಯಿಂದ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸಲ್ಲ. ಈ ಬಗ್ಗೆ ತಮಿಳುನಾಡು ಸರ್ಕಾರದ ಜತೆಗೆ ಚರ್ಚೆಗೂ ಸಿದ್ಧ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಮಿಳುನಾಡು ಪಾಲಿನ 177 ಟಿಎಂಸಿ ನೀರು ಬಿಡಲು ನಾವು ಸಿದ್ಧವಾಗಿದ್ದೇವೆ. ಮೇಕೆದಾಟು ಯೋಜನೆ ತೀರ್ಮಾನವನ್ನು ಕೇಂದ್ರ ಜಲ ಆಯೋಗ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ.

ನಾವು ಅದರಲ್ಲಿನ ಒಂದೇ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸುವುದಿಲ್ಲ. ಬೆಂಗಳೂರಿಗೆ ಕುಡಿಯುವ ನೀರು ನೀಡಲು ಇದೊಂದೇ ಆಯ್ಕೆ. ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಯೋಜನೆ ಅನಿವಾರ್ಯ ಎಂದು ಹೇಳಿದರು. ನಾವು ತಮಿಳುನಾಡಿನ ರೈತರ ಹಿತವನ್ನೂ ಕಾಪಾಡಬೇಕು. ಇದು ಸಮತೋಲಿತ ಜಲಾನಯನ. ಇಲ್ಲಿ ಒಂದೇ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸುವುದಿಲ್ಲ. ಬೆಂಗಳೂರಿಗೆ ನಾವು ಕೃಷ್ಣಾದಿಂದ ನೀರು ತರಲು ಸಾಧ್ಯವಿಲ್ಲ. ಹೀಗಾಗಿ ಕಾವೇರಿ ನಮ್ಮ ಮುಂದಿರುವ ಏಕೈಕ ಆಯ್ಕೆ ಎಂದರು.

40 ವರ್ಷಗಳಿಂದ ರಾಜಕೀಯ ಅಜೆಂಡಾ: ತಮಿಳುನಾಡಿನವರು 40 ವರ್ಷಗಳಿಂದ ರಾಜಕೀಯ ಅಜೆಂಡಾ ಇಟ್ಟುಕೊಂಡಿದ್ದಾರೆ. ಅವರ ರಾಜಕೀಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಈ ವಿಚಾರದ ಬಗ್ಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಕಳೆದ ವರ್ಷ 400ಕ್ಕೂ ಹೆಚ್ಚು ಟಿಎಂಸಿ ಹೆಚ್ಚುವರಿ ನೀರು ಸಮುದ್ರ ಸೇರಿದೆ. ಅವರು ಕೆಳಹಂತದಲ್ಲಿ ಸಾಕಷ್ಟು ಅಣೆಕಟ್ಟು ನಿರ್ಮಾಣ ಮಾಡುತ್ತಿದ್ದು, ನಾವು ಯಾವುದಕ್ಕೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಅವರ ನೆಲದಲ್ಲಿ ಅವರು ನಿರ್ಮಿಸಿಕೊಳ್ಳುತ್ತಿದ್ದಾರೆ. ಇದೇ ವಿಚಾರ ಸುಪ್ರೀಂ ಕೋರ್ಟ್ ನಲ್ಲೂ ಚರ್ಚೆಯಾಗಿದೆ. ಈ ಯೋಜನೆಗೆ ನಾವು ಯಾವುದೇ ಆರ್ಥಿಕ ನೆರವಾಗಲಿ ಇತರೆ ವಿಚಾರವನ್ನು ಕೇಳುತ್ತಿಲ್ಲ. ಈ ಯೋಜನೆಯಿಂದ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವುದು ಇಂಧನ ಕ್ಷೇತ್ರದಲ್ಲಿ ನಮಗೆ ಅನುಕೂಲ ಮಾಡಿಕೊಡಲಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಯಾವಾಗ ಕರೆದರೂ ಚರ್ಚೆಗೆ ಸಿದ್ಧ: ತಮಿಳುನಾಡು ಜೊತೆ ಚರ್ಚೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ಯಾವಾಗ ಬೇಕಾದರೂ ಅವರ ಜೊತೆ ಮಾತನಾಡಲು ಸಿದ್ಧನಿದ್ದೇನೆ. ತಮಿಳುನಾಡು, ಕರ್ನಾಟಕದವರು ಭಾರತೀಯರು. ನಾವು ಕಾವೇರಿ ನೀರು ಕುಡಿಯಬೇಕು. ತಮಿಳುನಾಡಿನಿಂದ ಇಲ್ಲಿಗೆ ಬಂದು ವೃತ್ತಿ ಮಾಡುತ್ತಿರುವ ಅನೇಕ ಜನರಿದ್ದಾರೆ. ಇಲ್ಲಿಂದ ಹೋಗಿ ಅಲ್ಲಿ ಕೆಲಸ ಮಾಡುತ್ತಿರುವವರೂ ಇದ್ದಾರೆ. ನಾವು ಅವರನ್ನು ಪ್ರತ್ಯೇಕಿಸುವುದಿಲ್ಲ. ಸಮತೋಲಿತ ಜಲಾನಯನ ನಿರ್ಮಾಣದಿಂದ ಕಷ್ಟ ಕಾಲದಲ್ಲಿ ತಮಿಳುನಾಡಿನ ಪಾಲಿನ ನೀರು ಹರಿಸಲು ನೆರವಾಗುತ್ತದೆ. ಅತಿ ಕಡಿಮೆ ವೆಚ್ಚದಲ್ಲಿ ಯೋಜನೆ ಆಗುವ ವಿಶ್ವಾಸವಿದೆ ಎಂದು ಶಿವಕುಮಾರ್‌ ತಿಳಿಸಿದರು.

ಸಂಸದರು ಒಗ್ಗಟ್ಟಾಗಿ ಹೋರಾಡುವ ವಿಶ್ವಾಸವಿದೆ

ತಮಿಳುನಾಡಿನವರು ಅವರು ರಾಜಕೀಯ ಉಳಿವಿಗಾಗಿ ಧ್ವನಿ ಎತ್ತುತ್ತಿದ್ದಾರೆ. ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ಬಂದ ಬಳಿಕ ಮತ್ತೇನಿದೆ? ಕರ್ನಾಟಕ 177 ಟಿಎಂಸಿ ನೀರು ಬಿಡಬೇಕು ಎಂದು ನೀಡಿದ ನಿರ್ದೇಶನವನ್ನು ನಾವು ಒಪ್ಪಿಕೊಳ್ಳಲಿಲ್ಲವೇ? ಅವರು ಹೋರಾಟ ಮಾಡುತ್ತಾರೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್, ಬಿಜೆಪಿ, ದಳ ಎಲ್ಲಾ ಸಂಸದರು ಒಗ್ಗಟ್ಟಾಗಿ ನಮ್ಮ ರಾಜ್ಯದ ಹಿತ ಕಾಪಾಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಶಿವಕುಮಾರ್‌ ತಿಳಿಸಿದರು. ತಮಿಳುನಾಡಿನಲ್ಲಿ ನಿಮ್ಮ ಮೈತ್ರಿ ಇದೆ ಎಂಬ ಪ್ರಶ್ನೆಗೆ, ನಾವು ಅವರಿಗೆ ಏನು ಮನವಿ ಮಾಡಬೇಕೋ ಮನವಿ ಮಾಡುತ್ತೇವೆ. ಇಲ್ಲಿ ರಾಜಕಾರಣ ಏನಿಲ್ಲ. ಎರಡು ರಾಜ್ಯಗಳ ಜನರ ಹಿತ ಕಾಪಾಡಿಕೊಂಡು ಹೋಗೋಣ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Karnataka mlc election : 5 ಕಾಂಗ್ರೆಸ್ - 2 ಬಿಜೆಪಿ ಗೆಲುವು, ಸಿಎಂ ಆದ ಮೊದಲ ಟಾಸ್ಕ್‌ನಲ್ಲೇ ಡಿಕೆಶಿ ಸಕ್ಸಸ್!