ಈಶ್ವರಪ್ಪರನ್ನು ಉಚ್ಚಾಟಿಸಿ ಇಲ್ಲವೇ ನೀವೇ ರಾಜೀನಾಮೆ ನೀಡಿ: ಸಿಎಂಗೊಂದು ಸವಾಲು!

By Suvarna NewsFirst Published Apr 3, 2021, 3:47 PM IST
Highlights

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಸಚಿವ ಕೆಎಸ್ ಈಶ್ವರಪ್ಪ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಸಾಬೀತಾಗಿದೆ. ಇದರ ಮಧ್ಯೆ ಸಿಎಂಗೊಂದು ಸವಾಲು ಹಾಕಲಾಗಿದೆ.

ಮಂಗಳೂರು, (ಮಾ.03): ಸಚಿವ ಕೆ.ಎಸ್. ಈಶ್ವರಪ್ಪನವರು ಮುಖ್ಯಮಂತ್ರಿಗಳ ವಿರುದ್ಧ ಪತ್ರ ಬರೆದಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪನವರನ್ನು ಸಚಿವ ಸ್ಥಾನದಿಂದ ಉಚ್ಛಾಟಿಸಲಿ ಅಥವಾ ಯಡಿಯೂರಪ್ಪ ತಾವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

ಇಂದು (ಶನಿವಾರ) ಕೇರಳ ಚುನಾವಣಾ ಪ್ರಚಾರಕ್ಕೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಈಶ್ವರಪ್ಪ ಬರೆದಿರುವುದು ಕೇವಲ ಪತ್ರ ಅಲ್ಲ, ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಬಿಂಬಿಸಿದ್ದಾರೆ. ಈಶ್ವರಪ್ಪ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರಿಗೆ ಪತ್ರ ಬರೆದು ಸಿಎಂ ಮೇಲೆ ವಿಶ್ವಾಸ ಇಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದು ಬಿದ್ದಿದ್ದು, ಸಚಿವರಿಗೆ ಸಿಎಂ ಮೇಲೆ ವಿಶ್ವಾಸ ಇಲ್ಲದಂತಾಗಿದೆ ಎಂದರು.

ಈಶ್ವರಪ್ಪ- ಯಡಿಯೂರಪ್ಪ ಅಸಮಾಧಾನ ಶಮನಕ್ಕೆ ಮುಂದಾದ ಹೈಕಮಾಂಡ್!

ಈವರೆಗೆ ಯಾವೊಬ್ಬ ಸಚಿವರು ಸಿಎಂ ಆಡಳಿತದ ಬಗ್ಗೆ ಚರ್ಚೆ ಮಾಡಿಲ್ಲ. ಆದರೆ, ಈಶ್ವರಪ್ಪ ಈಗ ಮಾಡಿದ್ದಾರೆ. ಇದು ರಾಜ್ಯದ ಆಡಳಿತ ವಿಚಾರ. ಆಡಳಿತದ ಬಗ್ಗೆ ದೇಶಕ್ಕೆ ಪಾಠ ಹೇಳುತ್ತಿದ್ದವರು ಇದನ್ನು ತೋರಿಸಿಕೊಟ್ಟಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕಾದರೆ ಇವತ್ತು ಸಾಯಾಂಕಾಲದ ಒಳಗೆ ಈಶ್ವರಪ್ಪ ಅವರನ್ನು ಉಚ್ಛಾಟಿಸಲಿ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಭಿನ್ನಮತವಿದೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಯಾವ ವಿಚಾರ ಬೀದಿಗೆ ಬಂದಿದೆ. ಈಗ ಅವರು ಆಡಳಿತದಲ್ಲಿದ್ದಾರೆ. ನಾನು ಮಂತ್ರಿಯಾದಾಗ ಸಿಎಂ ವಿರುದ್ಧ ಮಾತನಾಡಿಲ್ಲ. ಮೊದಲು ನಿಮ್ಮದನ್ನು ಸರಿ ಮಾಡಿಕೊಳ್ಳಿ. ನಿಮ್ಮಲ್ಲಿ 6 ಜನ ಮುತ್ತು ರತ್ನಗಳನ್ನು ಇಟ್ಟುಕೊಂಡಿದ್ದಾರೆ. ಇನ್ನು 15 ಜನ ಬೇರೆ ಇದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.

click me!