ಖಾತೆ ಹಂಚಿಕೆ ಬಗ್ಗೆ ಬಿಜೆಪಿ ಸಚಿವರ ಅಸಮಾಧಾನದ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೂತನ ಸಚಿವರ ಕಾಲೆಳೆದಿದ್ದಾರೆ.
ಬೆಂಗಳೂರು, (ಜ.22): ನೂತನ 7 ಸಚಿವರಿಗೆ ಖಾತೆ ಹಂಚಿಕೆ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದ ಇನ್ನು ಕೆಲ ಸಚಿವರುಗಳ ಖಾತೆಯಲ್ಲೂ ಬದಲಾವಣೆ ಮಾಡಿರುವುದಕ್ಕೆ ಅಸಮಾಧಾನ ಭುಗಿಲೆದ್ದಿದೆ.
ಈ ಬಿಜೆಪಿ ಸಚಿವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾನು ವಿಧಾನಸಭೆಯಲ್ಲಿ ಈ ಮೊದಲೇ ಹೇಳಿದ್ದೆ ನೀವೆಲ್ಲ ರಾಜಕೀಯವಾಗಿ ಸಮಾಧಿ ಆಗ್ತೀರೆಂದು. ಈಗ ನೋಡಿ ಯಾವ್ಯಾವ ಖಾತೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಐಸಿಯು, ವೆಂಟಿಲೇಟರ್ನಲ್ಲಿ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು.
ಈ ಖಾತೆ ನಾನೇನು ಮಾಡಲಿ? ಬೇಡವೇ ಬೇಡ ಎಂದ ಸಚಿವ
ಗೋಪಾಲಯ್ಯ, ಎಂಟಿಬಿ ನಾಗರಾಜ್, ನಾರಾಯಣಗೌಡ, ರೋಷನ್ ಬೇಗ್ ಅವರ ಕಥೆ ಈಗ ಏನಾಗಿದೆ ನೋಡಿ. ಎಂಟಿಬಿ ನಾಗರಾಜ್ಗೆ ಈ ಮೊದಲು ವಸತಿ ಖಾತೆ ಇತ್ತು. ಪಾಪ ಈಗ ಅಬಕಾರಿ ಖಾತೆ ಕೊಟ್ಟಿದ್ದಾರೆ. ವಲಸಿಗರನ್ನೆಲ್ಲ ಯೂಸ್ ಆಂಡ್ ಥ್ರೋ ಮಾಡಿದ್ದಾರೆ. ವಲಸಿಗರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಅಳೆದೂ ತೂಗಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟ ವಿಸ್ತರಣೆ ನಡೆದ 9 ದಿನಗಳ ಬಳಿಕ ಖಾತೆ ಹಂಚಿಕೆ ಮಾಡಿದ್ರು. ಯಾವಾಗ ಸಿಎಂ ಖಾತೆ ಹಂಚಿಕೆ ಮಾಡಿದ್ರೋ ತಕ್ಷಣ ಅಸಮಾಧಾನ ಭುಗಿಲೆದ್ದಿದೆ. ಖಾತೆ ಹಂಚಿಕೆ ಮಾಡಿದ ಬಳಿಕ ನಡೆದ ಸಚಿವ ಸಂಪುಟ ಸಭೆಗೆ ಹಲವರು ಬರಲೇ ಇಲ್ಲ. ಇದು ಸಚಿವ ಸಂಪುಟ ಸದಸ್ಯರಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನ ಸಾಬೀತಾಗಿದೆ.