
ಬೆಂಗಳೂರು (ಸೆ.23): ‘ಸಮುದಾಯವಾರು ಇನ್ನೂ ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂಬ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆಗೆ ನಾನು ಉತ್ತರ ನೀಡುವುದಿಲ್ಲ. ಅದಕ್ಕೆ ಉತ್ತರ ಕೊಡೋರು ಇದ್ದಾರೆ, ಅವರು ಕೊಡುತ್ತಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ‘ಪ್ರತಿಯೊಬ್ಬರಿಗೂ ಆಸೆಗಳು ಇರುತ್ತವೆ. ಆಸೆ ಪಡೋರಿಗೆ ನಾನು ಉತ್ತರ ಕೊಡೋದಿಲ್ಲ. ಉತ್ತರ ಕೊಡುವವರಿದ್ದಾರೆ. ಹೈಕಮಾಂಡ್ ಇದೆ. ಅವರು ಉತ್ತರ ಕೊಡುತ್ತಾರೆ. ನನ್ನನ್ನು ಉಪಮುಖ್ಯಮಂತ್ರಿ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ರಾಜಕೀಯವಾಗಿ ನಾನು ನಡೆದು ಬಂದ ದಾರಿಯನ್ನು ನೋಡಿದ್ದೀರಿ. ನನ್ನ ಹೋರಾಟ ನೋಡಿದ್ದೀರಿ. ಪಕ್ಷವನ್ನು ಅಧಿಕಾರಕ್ಕೆ ತರಲು ಹೋರಾಟ ಮಾಡಿದ್ದಕ್ಕಾಗಿಯೇ ನನ್ನನ್ನು ಇಲ್ಲಿ ಕೂರಿಸಲಾಗಿದೆ’ ಎಂದು ತಿರುಗೇಟು ನೀಡಿದರು.
ಭುಗಿಲೆದ್ದ ಕಾವೇರಿ ಕಿಚ್ಚು: ತಮಿಳುನಾಡಿಗೆ ನೀರು ಬಿಡದಂತೆ ರಾಜ್ಯಾದ್ಯಂತ ಹೋರಾಟ ತೀವ್ರ
ಹೋರಾಟ ಮಾಡಿ ಇಲ್ಲಿಗೆ ಬಂದಿದ್ದೇನೆ: ನನ್ನನ್ನು ಉಪಮುಖ್ಯಮಂತ್ರಿ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ. ರಾಜಕೀಯವಾಗಿ ನಾನು ನಡೆದು ಬಂದ ದಾರಿಯನ್ನು ನೋಡಿದ್ದೀರಿ. ನನ್ನ ಹೋರಾಟ ನೋಡಿದ್ದೀರಿ. ಪಕ್ಷವನ್ನು ಅಧಿಕಾರಕ್ಕೆ ತರಲು ಹೋರಾಟ ಮಾಡಿದ್ದಕ್ಕಾಗಿಯೇ ನನ್ನನ್ನು ಇಲ್ಲಿ ಕೂರಿಸಲಾಗಿದೆ.
3 ಡಿಸಿಎಂ ಹೇಳಿಕೆ ತಪ್ಪಲ್ಲ: ಸಹಕಾರ ಸಚಿವ ರಾಜಣ್ಣ ಅವರು ಸರ್ಕಾರದಲ್ಲಿ ಸಮುದಾಯವಾರು ಮೂವರು ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕೇಳಿರುವುದರಲ್ಲಿ ತಪ್ಪಿಲ್ಲ. ಒಂದು ಸಂದೇಶ ಹೋಗಲಿ ಎಂದು ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪುನರುಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ರಾಜಣ್ಣ ಅವರ ಹೇಳಿಕೆಯಲ್ಲಿ ತಪ್ಪಿಲ್ಲ. ಅವರು ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷ ಇನ್ನಷ್ಟು ಸದೃಢವಾಗಬೇಕು. ನಿರ್ದಿಷ್ಟ ಸಮುದಾಯಗಳನ್ನು ಸೆಳೆಯಬೇಕು ಎಂಬ ಕಾರಣಕ್ಕೆ ಈ ಹೇಳಿಕೆ ನೀಡಿದ್ದಾರೆ. ಒಂದು ಸಂದೇಶ ಹೋಗಲಿ ಎಂದು ಅವರು ಈ ರೀತಿ ಹೇಳಿದ್ದಾರೆ ಎಂದರು.
ಕೆಲ ಸಚಿವರು ರಾಜಣ್ಣ ಅವರ ಹೇಳಿಕೆ ಸರಿಯಲ್ಲ ಎಂದು ಹೇಳುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ಆ ರೀತಿ ಹೇಳುವುದು ತಪ್ಪು. ರಾಜಣ್ಣ ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ನಾನೂ ನನ್ನ ವೈಯಕ್ತಿಕ ಹೇಳಿಕೆ ಕೊಡುತ್ತೇನೆ. ಆದರೆ, ಅವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎನ್ನುವುದು ಮುಖ್ಯ. ಅಂತಿಮವಾಗಿ ಎಲ್ಲವೂ ಹೈಕಮಾಂಡ್‌ಗೆ ಬಿಟ್ಟ ವಿಷಯ ಎಂದರು.
ಕಾವೇರಿ ಅನ್ಯಾಯಕ್ಕೆ ರಾಜ್ಯ ಬಿಜೆಪಿಗರು ಕಾರಣ: ಮತ್ತೆ ತ.ನಾಡಿಗೆ 2 ದಿನ ನೀರು ಹರಿಸುತ್ತೇವೆಂದ ಡಿಕೆಶಿ
ಹೇಳಿಕೆ ತಪ್ಪಲ್ಲ-ಸಚಿವ ನಾಗೇಂದ್ರ: ಇದೇ ವೇಳೆ ರಾಜಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ನಾಗೇಂದ್ರ, ರಾಜಣ್ಣ ಅವರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಾದೇಶಿಕವಾರು ಅಲ್ಲ, ಜಾತಿವಾರು ಕೇಳಿದ್ದಾರೆ, ತಪ್ಪೇನಿಲ್ಲ. ದೊಡ್ಡ ವಿಚಾರವೂ ಅಲ್ಲ. ಇದು ನಮ್ಮ ಆಂತರಿಕ ವಿಚಾರ, ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕಾದ ವಿಚಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅನಿವಾರ್ಯತೆ ಇದ್ದರೆ ಜಾತಿವಾರು ಡಿಸಿಎಂ ಮಾಡಬಹುದು. ಚೆನ್ನಾಗಿ ಆಡಳಿತ ನಡೆಯುತ್ತಿದ್ದರೆ ಏನೂ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.