* ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ: ಜಮೀರ್
* ಹದ್ದು ಬಸ್ತಿನಲ್ಲಿರಲು ಹೇಳಿದ್ದೇನೆ, ವಿವರಣೆ ಪಡೆದಿದ್ದೇನೆ: ಡಿಕೆಶಿ
* ಸಿಎಂ ಬಗ್ಗೆ ಹೈಕಮಾಂಡ್‌ನಿಂದ ನಿರ್ಧಾರ: ಸಿದ್ದು
ಬೆಂಗಳೂರು(ಜೂ.20): ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರ ತಾರಕಕ್ಕೇರಿದೆ. ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಶಾಸಕ ಶನಿವಾರ ಮತ್ತೆ ಹೇಳಿಕೆ ನೀಡಿದ್ದು, ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ ಆಗಿ ಹದ್ದು ಬಸ್ತಿನಲ್ಲಿರುವಂತೆ ಜಮೀರ್‌ಗೆ ತಾಕೀತು ಮಾಡಿದ್ದಾರೆ.
ಇದಕ್ಕೆ ಮಾರುತ್ತರ ನೀಡಿರುವ ಜಮೀರ್ ಅಹ್ಮದ್, ಜನರ ಅಭಿಪ್ರಾಯವನ್ನು ನಾನು ಹೇಳಿದ್ದೇನೆ. ಅಷ್ಟಕ್ಕೂ ಇದು ನನ್ನ ವೈಯಕ್ತಿಕ ಹೇಳಿಕೆ ಎಂದಿದ್ದಾರೆ. ಈ ಚಕಮಕಿ ತೀವ್ರಗೊಂಡ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಹುದ್ದೆ ನಿರ್ಧಾರ ಮಾಡುವುದು ಹೈಕಮಾಂಡ್ ಎಂದು ಸಮಾಧಾನ ಪಡಿಸಲು ಯತ್ನಿಸಿದ್ದಾರೆ.
undefined
ನಗರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಜಮೀರ್ ಮತ್ತೆ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ‘ಮುಂದಿನ ಮುಖ್ಯಮಂತ್ರಿ ಕುರಿತು ಯಾರೂ ಹೇಳಿಕೆ ನೀಡಬಾರದು. ಎಲ್ಲರೂ ಹದ್ದುಬಸ್ತಿನಲ್ಲಿರಬೇಕು ಎಂದು ಸೂಚಿಸಿದ್ದೇನೆ. ಈ ಬಗ್ಗೆ ಜಮೀರ್ ಅವರನ್ನು ಕರೆದು ವಿವರಣೆ ಕೇಳಿದ್ದೇನೆ’ ಎಂದರು.
ಡಿಕೆಶಿ ಎಚ್ಚರಿಕೆ ವಿಚಾರ : ಸ್ಪಷ್ಟನೆ ಕೊಟ್ಟ ಜಮೀರ್
ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ. ಮುಖ್ಯಮಂತ್ರಿಯಾಗಲು ನನಗೆ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಸೇರಿದಂತೆ ಹಲವರಿಗೆ ಆಸೆ ಇರಬಹುದು. ಆದರೆ ನಮ್ಮ ಕರ್ತವ್ಯ ಮುಖ್ಯಮಂತ್ರಿ ಆಗುವುದಲ್ಲ. ಈ ರಾಜ್ಯದಲ್ಲಿ ಜನಪರ ಕೆಲಸ ಮಾಡಲು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವುದು ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಕೆಲವರು ವೈಯಕ್ತಿಕ ಅಭಿಪ್ರಾಯ ಹೇಳಿರಬಹುದು. ಈ ವಿಚಾರವಾಗಿ ಕರೆದು ನಾನು ವಿವರಣೆ ಕೇಳಿದ್ದೇನೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನೊಬ್ಬ ಇಲ್ಲಿದ್ದೇನೆ. ನನಗೆ ಪಕ್ಷ ಮುಖ್ಯ. ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮುಖ್ಯ ಎಂದರು.
ಆದರೆ, ಇದಕ್ಕೆ ಮಾರುತ್ತರ ನೀಡಿದ ಜಮೀರ್, ‘ನನಗೆ ಡಿ.ಕೆ.ಶಿವಕುಮಾರ್ ಯಾವ ವಿವರಣೆಯನ್ನೂ ಕೇಳಿಲ್ಲ. ನೋಟಿಸ್ ನೀಡುವಂಥದ್ದೂ ನಾನು ಏನೂ ಮಾಡಿಲ್ಲ. ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಾನು ಅಥವಾ ಡಿ.ಕೆ.ಶಿವಕುಮಾರ್ ನಿರ್ಧಾರ ಮಾಡಲ್ಲ. ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಜನರು ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುತ್ತಿದ್ದಾರೆ. ಅದನ್ನು ಹೇಳಿದ್ದೇನೆ’ ಎಂದರು.
ಈ ಹಿಂದೆಯೂ ಯಾವ ವಿಚಾರದಲ್ಲೂ ಡಿ.ಕೆ.ಶಿವಕುಮಾರ್ ನನಗೆ ಎಚ್ಚರಿಕೆ ನೀಡಿಲ್ಲ. ಗುರುವಾರ ವಿಜಯನಗರ, ಜಯನಗರ ಎಲ್ಲಾ ಕಡೆ ಸಿಕ್ಕಿದ್ದರು. ನನ್ನ ಬಳಿ ಏನೂ ಹೇಳಿಲ್ಲ. ಎಚ್.ಡಿ.ಕುಮಾರಸ್ವಾಮಿ ಹಾಗೂ ನನ್ನ ನಡುವಿನ ಫ್ಲಾಟ್ ವಿಚಾರದಲ್ಲೂ ಡಿ.ಕೆ.ಶಿವಕುಮಾರ್ ನನಗೆ ಏನೂ ಹೇಳಿಲ್ಲ ಎಂದು ತಿಳಿಸಿದರು. ಇಬ್ಬರ ನಡುವಿನ ಜಟಾಪಟಿ ತೀವ್ರಗೊಂಡ ಬೆನ್ನಲ್ಲೇ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ಮುಂದಿನ ಮುಖ್ಯಮಂತ್ರಿ ಕುರಿತು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಜಮೀರ್ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದರು.
ಹೈಕಮಾಂಡ್ ನಿರ್ಧರಿಸುತ್ತದೆ
ಜಮೀರ್ ಅಹಮದ್ ಖಾನ್ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಶಾಸಕರು ಅವರ ಅಭಿಪ್ರಾಯ ಹೇಳುತ್ತಾರೆ. ನಮ್ಮಲ್ಲಿ ಒಂದು ಪದ್ಧತಿ ಇದೆ. ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಜಮೀರ್ ಅಹ್ಮದ್ ಹೇಳಿರುವುದು ಪಕ್ಷದ ಅಭಿಪ್ರಾಯವಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.