ಮುಂದಿನ ಎರಡು ವರ್ಷ ಬಿಎಸ್‌ವೈಯೇ ಸಿಎಂ: ಸಚಿವ ನಿರಾಣಿ

By Kannadaprabha News  |  First Published Jun 26, 2021, 2:10 PM IST

* ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ಮಧ್ಯೆಯೂ ಅವರೇ ಸಿಎಂ ಆಗಿ ಮುಂದುವರಿಕೆ
* ಕಾಂಗ್ರೆಸ್‌ ಬಿಜೆಪಿ ನಡುವೆ ನಡೆದಿರುವ ಪೈಪೋಟಿ ಹೇಳುವಷ್ಟು ಬುದ್ಧಿವಂತ ನಾನಲ್ಲ
* ವೀರಶೈವರಲ್ಲಿ ಉಪಜಾತಿ ಬೇಡ


ಬಾಗಲಕೋಟೆ(ಜೂ.26): ಬಿಜೆಪಿಯಲ್ಲಿ ಕೆಲವು ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇದ್ದರೂ ಮುಂದಿನ ಎರಡು ವರ್ಷದ ಅವ​ಧಿಗೆ ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಅವರೇ ಮುಂದುವರೆಯಲಿದ್ದಾರೆ. ಜೊತೆಗೆ ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುವುದಾಗಿ ಗಣಿ ಮತ್ತು ಭೂಗರ್ಭ ಇಲಾಖೆಯ ಸಚಿವ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 50 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಇರುವ ಬಿ.ಎಸ್‌.ಯಡಿಯೂರಪ್ಪ ಅವರ ಮಾರ್ಗದರ್ಶನ ಪಕ್ಷಕ್ಕೆ ಅವಶ್ಯವಿದೆ. ಎರಡು ವರ್ಷದ ನಂತರ ಅವರ ನೇತೃತ್ವದಲ್ಲಿ ಚುನಾವಣೆಗೆ ಪಕ್ಷ ಹೋಗಲಿದೆ. ಮತದಾರರ ತೀರ್ಪು ಮತ್ತೆ ಬಿಜೆಪಿ ಪರವಾಗಿಯೇ ಬರಲಿದೆ ಎಂದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದರು.

Tap to resize

Latest Videos

ಪಕ್ಷದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಎದುರಿಸಲು ಹಾಗೂ ಕ್ರಮ ಕೈಗೊಳ್ಳಲು ಬಿಜೆಪಿ ಹೈಕಮಾಂಡ್‌ ಸಮರ್ಥವಾಗಿದೆ. ಪಕ್ಷದ ಮಾರ್ಗದರ್ಶನದಲ್ಲಿ ಎಲ್ಲ ಶಾಸಕರು ಕಾರ್ಯನಿರ್ವಹಿಸಲಿದ್ದಾರೆ ಎಂದ ಅವರು, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಆಗುವುದಿಲ್ಲ. ಗಟ್ಟಿಯಾದ ಸರ್ಕಾರ ಇರುವಾಗ ಗಟ್ಟಿಯಾದ ಮುಖ್ಯಮಂತ್ರಿಗಳು ಇರುವಾಗ ಚುನಾವಣೆಯ ಪ್ರಶ್ನೆ ಏಕೆ? ಇತ್ತೀಚಿಗೆ ಉಸ್ತುವಾರಿ ಅರುಣ ಸಿಂಗ್‌ ಅವರು ಸಹ ಬಿಎಸ್‌ವೈ ಪರವೇ ಹೈಕಮಾಂಡ್‌ಗೆ ವರದಿಕೊಟ್ಟಿದ್ದು, 2023ರ ಚುನಾವಣೆಯಲ್ಲಿ ಸಹ ಪಕ್ಷ 130 ಸ್ಥಾನಗಳನ್ನು ಗೆಲ್ಲಲಿದೆ ಎಂದರು.

ಯಡಿಯೂರಪ್ಪ ಬಿಟ್ಟುಕೊಟ್ರೆ ನನಗೂ ಸಿಎಂ ಆಗುವ ಆಸೆ: ಮನದಾಳವನ್ನು ಬಿಚ್ಚಿಟ್ಟ ಸಚಿವ

ವೀರಶೈವರಲ್ಲಿ ಉಪಜಾತಿ ಬೇಡ:

ರಾಜ್ಯದಲ್ಲಿ 6 ಕೋಟಿ 50 ಲಕ್ಷ ಜನಸಂಖ್ಯೆಯಲ್ಲಿ ಅತಿದೊಡ್ಡ ಸಮುದಾಯ ವೀರಶೈವ ಲಿಂಗಾಯತವಾಗಿದೆ. ಇಂತಹ ದೊಡ್ಡ ಸಮುದಾಯದಲ್ಲಿ ಯಾರು ಉಪಜಾತಿಗಳನ್ನು ಮುಂದಿಟ್ಟುಕೊಂಡು ಹೋಗಬಾರದು. ಎಲ್ಲರೂ ಒಂದೇ ಎಂಬ ಭಾವನೆಯಿಂದ ಹೋಗುವುದು ಅವಶ್ಯವಾಗಿದೆ. ಆದರೆ, ತಮ್ಮ ಇತಿಮಿತಿಯೊಳಗೆ ಉಪಜಾತಿಗಳಲ್ಲಿ ಮಾಡಿಕೊಳ್ಳುವ ಅನುಕೂಲಕ್ಕೆ ವಿರೋಧವಿಲ್ಲ. ಆದರೆ, ಒಟ್ಟು ಸಮುದಾಯ ಅಂತ ಬಂದಾಗ ವೀರಶೈವ ಸಮುದಾಯ ಒಟ್ಟಾಗಿ ಇರಬೇಕು. ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಸಿಗುವತ್ತ ಪ್ರಯತ್ನಿಸಬೇಕು ಎಂದು ಸಮುದಾಯದ ಮಠಾ​ಧೀಶರು ಹಾಗೂ ನಾಯಕರುಗಳಲ್ಲಿ ಮನವಿ ಮಾಡಿದರಲ್ಲದೆ ಬಾವಿಯೊಳಗಿನ ಕಪ್ಪೆಯಾಗದೆ ವಿಶಾಲ ಮನೋಭಾವದಿಂದ ಸಮುದಾಯವನ್ನು ನೋಡಬೇಕಿದೆ ಎಂದರು.

ಶಾಸಕ, ಸಚಿವನಾಗಿ ಸಂತಸದಲ್ಲಿರುವೆ:

ಮುಖ್ಯಮಂತ್ರಿ ವಿಚಾರದಲ್ಲಿ ಕಾಂಗ್ರೆಸ್‌ ಬಿಜೆಪಿ ನಡುವೆ ನಡೆದಿರುವ ಪೈಪೋಟಿ ಹೇಳುವಷ್ಟು ಬುದ್ಧಿವಂತ ನಾನಲ್ಲ. ಕೋವಿಡ್‌ನಿಂದ ಕಷ್ಟದಲ್ಲಿರುವ ರಾಜ್ಯದಲ್ಲಿ ಉದ್ಯಮ ನಿಂತು ಹೋಗಿವೆ. ಬೆಲೆ ಏರಿಕೆಯಾಗುತ್ತಿದೆ. ಇದರ ಬಗ್ಗೆ ಗಮನಹರಿಸಬೇಕಿದೆ. ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ವಿಶ್ವನಾಥ ಹೇಳಿಕೆ ಅಭಿಮಾನದಿಂದ ಹೇಳಿದ್ದು, ಸದ್ಯ ನಾನು ಶಾಸಕ ಹಾಗೂ ಮಂತ್ರಿಯಾಗಿ ಸಂತಸದಲ್ಲಿದ್ದೇನೆ. ಒಂದು ಸಾಮಾನ್ಯ ರೈತ ಕುಟುಂಬದಿಂದ, ಸಾವಿರ ಜನಸಂಖ್ಯೆ ಇರುವ ಗ್ರಾಮದಿಂದ ಬಂದಿರುವ ನಾನು 17 ಕಾರ್ಖಾನೆಗಳನ್ನು ಕಟ್ಟಿ 70 ಸಾವಿರ ಜನರಿಗೆ ಉದ್ಯೋಗ ನೀಡಿದ ತೃಪ್ತಿ ನನ್ನದಿದೆ ಎಂದರು.

ಕೋವಿಡ್‌ ಸಾವಿನ ಸಂಖ್ಯೆಯಲ್ಲಿ ತಪ್ಪಾಗಿದೆ ಎಂಬ ಟೀಕೆಗಳಿಗೆ ಸರ್ಕಾರ ಪ್ರತಿ ಮನೆ ಮನೆಗೆ ತೆರಳಿ ಸಾವಿನ ಸಂಖ್ಯೆ ಕ್ರೋಡಿಕರಿಸುವ ಕಾರ್ಯವನ್ನು ನಾನು ಉಸ್ತುವಾರಿಯಾಗಿರುವ ಕಲಬುರ್ಗಿಯಲ್ಲಿ ಆರಂಭಿಸಿದ್ದು ನಮ್ಮ ಜಿಲ್ಲೆಯಲ್ಲಿಯೂ ಈ ರೀತಿಯ ಸರ್ವೆ ನಡೆಯಬೇಕು. ಇದರಲ್ಲಿ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ. 

click me!