
ಬೆಂಗಳೂರು (ಜೂ.5): ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸ್ಪಂದಿಸಲು ಹಾಗೂ ಅನಿವಾಸಿ ಭಾರತೀಯರಿಗಾಗಿ ಎರಡು ಪ್ರತ್ಯೇಕ ಸಚಿವಾಲಯಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯವನ್ನೇ ಆರಂಭಿಸುತ್ತಿರುವುದು ದೇಶದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವಾದ ಗುರುವಾರ ವಿಧಾನಸೌಧದಲ್ಲಿ ಸರ್ಕಾರದ ಎಲ್ಲಾ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈ ಸಭೆಯಲ್ಲಿ ನಮ್ಮ ಸರ್ಕಾರ ಎರಡು ಹೆಚ್ಚುವರಿ ಸಚಿವಾಲಯಗಳನ್ನು ತೆರೆಯಲು ನಿರ್ಧಾರ ತೆಗೆದುಕೊಂಡಿದೆ. ಸಾರ್ವಜನಿಕರ ಕುಂದುಕೊರತೆಯ ಸಚಿವಾಲಯ ಆರಂಭಿಸಿ, ಜನರ ಅರ್ಜಿ, ವಿಚಾರಧಾರೆ, ಸಮಸ್ಯೆ ಆಲಿಸಲು ಪ್ರತ್ಯೇಕ ಸಚಿವರನ್ನು ನೇಮಕ ಮಾಡಲಾಗುವುದು. ನಿತ್ಯ ವಿವಿಧ ತಂಡಗಳು, ಸಂಘಟನೆಗಳು, ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುತ್ತಾರೆ. ಹೊಸ ಸಚಿವಾಲಯದ ಮೂಲಕ ಅವರ ವಿಚಾರ ಆಲಿಸಿ, ಸ್ಪಂದಿಸಲು ಸರ್ಕಾರ ಮುಂದಾಗಿದೆ ಎಂದು ವಿವರಿಸಿದರು.
ಅದೇ ರೀತಿ ಅನಿವಾಸಿ ಭಾರತೀಯರ (ಎನ್ಆರ್ ಐ) ಸಚಿವಾಲಯ ತೆರೆಯಲು ನಿರ್ಧರಿಸಲಾಗಿದೆ. ನಮ್ಮ ರಾಜ್ಯದಲ್ಲಿ ಎನ್ಆರ್‌ಐಗಳು ಬಂಡವಾಳ ಹೂಡಿಕೆಗೆ ಆಸಕ್ತಿ ಹೊಂದಿದ್ದರೆ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಈ ಸಚಿವಾಲಯ ಸಹಾಯವಾಗುತ್ತದೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.