ಆರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಟಿ. ನರಸೀಪುರದ ಡಾ.ಎಚ್.ಸಿ.ಮಹದೇವಪ್ಪ, ಪಿರಿಯಾಪಟ್ಟಣದ ಕೆ.ವೆಂಕಟೇಶ್ ಹಾಗೂ ಮೈಸೂರ ನಗರ ನರಸಿಂಹರಾಜ ಕ್ಷೇತ್ರದ ತನ್ವೀರ್ ಸೇಠ್ ಅವರಿಗೆ ಮೊದಲ ಕಂತಿನಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ.
ಅಂಶಿ ಪ್ರಸನ್ನಕುಮಾರ್
ಮೈಸೂರು (ಮೇ.21): ಅಂತೂ ಇಂತೂ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಒಂದು ವಾರದ ನಂತರ ಬಹುನಿರೀಕ್ಷಿತ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಜಿಲ್ಲೆಯವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ರಾಮನಗರ ಜಿಲ್ಲೆಯ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಶಪಥಗೈದಿದ್ದಾರೆ. ಅವರೊಂದಿಗೆ ಎಂಟು ಮಂದಿ ಸಂಪುಟ ಸೇರ್ಪಡೆಯಾಗಿದ್ದಾರೆ. ಆದರೆ ತಲಾ ಆರು ಬಾರಿ ಗೆದ್ದಿರುವ ಮೈಸೂರು ಜಿಲ್ಲೆಯ ಮೂವರಿಗೆ ಕಾಯುವುದು ಅನಿವಾರ್ಯ...! ಆರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಟಿ. ನರಸೀಪುರದ ಡಾ.ಎಚ್.ಸಿ. ಮಹದೇವಪ್ಪ, ಪಿರಿಯಾಪಟ್ಟಣದ ಕೆ. ವೆಂಕಟೇಶ್ ಹಾಗೂ ಮೈಸೂರ ನಗರ ನರಸಿಂಹರಾಜ ಕ್ಷೇತ್ರದ ತನ್ವೀರ್ ಸೇಠ್ ಅವರಿಗೆ ಮೊದಲ ಕಂತಿನಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ.
ಡಾ. ಮಹದೇವಪ್ಪಗೆ ನಾಲ್ಕು ಬಾರಿ ಅವಕಾಶ: ಮಹದೇವಪ್ಪ ಅವರು 1985, 1994, 2004 ರಲ್ಲಿ ಜನತಾ ಪರಿವಾರ, 2008, 2013, 2023 ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ- ಒಟ್ಟು ಆರು ಬಾರಿ ಟಿ. ನರಸೀಪುರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 1994 ರಲ್ಲಿ ಎಚ್.ಡಿ. ದೇವೇಗೌಡ ಹಾಗೂ ಜೆ.ಎಚ್. ಪಟೇಲ್ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. 2004 ರಲ್ಲಿ ಎನ್. ಧರಂಸಿಂಗ್ ನೇತ್ವತ್ವದ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು. ಬಾಗಲಕೋಟೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ನಿರ್ವಹಿಸಿದ್ದರು. 2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. ಹಾಸನ, ಕೊಡಗು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.
ದುಬಾರಿಯಾಯ್ತು ಚಿಕ್ಕಬಳ್ಳಾಪುರದ ಸ್ಕಂದಗಿರಿ ಬೆಟ್ಟ ಪ್ರವೇಶ: ಚಾರಣಿಗರ ಆಕ್ರೋಶ
ವೆಂಕಟೇಶ್‌ಗೆ ಕೈ ಕೊಡುತ್ತಿರುವ ಸಮೀಕರಣ: ಪಿರಿಯಾಪಟ್ಟಣದಿಂದ ಕೆ. ವೆಂಕಟೇಶ್ ಅವರು 1985, 1994, 2004 ರಲ್ಲಿ ಜನತಾ ಪರಿವಾರ, 2008, 2013, 2023 ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾದವರು. 1989ರಲ್ಲಿ ಕಾಂಗ್ರೆಸ್‌ನ ಕೆ.ಎಸ್. ಕಾಳಮರೀಗೌಡ, 1999 ರಲ್ಲಿ ಬಿಜೆಪಿಯ ಎಚ್.ಸಿ. ಬಸವರಾಜು, 2018 ರಲ್ಲಿ ಜೆಡಿಎಸ್‌ನ ಕೆ. ಮಹದೇವ್ ಅವರು ಎದುರು ಸೋತವರು. 1994 ರಲ್ಲಿ ಗೆದ್ದಾಗ ಜೆ.ಎಚ್. ಪಟೇಲ್ ಅವರ ಸಂಪುಟದಲ್ಲಿ ಕಾಡಾ ಸಚಿವರಾಗಿದ್ದರು.
2004 ರಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದರೂ ಮಂತ್ರಿಯಾಗಲಿಲ್ಲ. ನಂತರ ಸಿದ್ದರಾಮಯ್ಯ ಅವರ ಹಿಂದೆ ಕಾಂಗ್ರೆಸ್‌ಗೆ ಬಂದರು. 2008 ಕಾಂಗ್ರೆಸ್ ಟಿಕೆಟ್ ಮೇಲೆ ಗೆದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. 2013 ರಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆದರೂ ವೆಂಕಟೇಶ್ ಅವರಿಗೆ ಮಂತ್ರಿ ಸ್ಥಾನ ಸಿಗಲಿಲ್ಲ. ಪ್ರಾದೇಶಿಕತೆ, ಜಿಲ್ಲಾ ಹಾಗೂ ಜಾತಿ ಸಮೀಕರಣದಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಅವರನ್ನು ಬಿಡಿಎ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಈ ಬಾರಿ ಮತ್ತೆ ಅವರ ಹೆಸರು ಸಚಿವ ಸ್ಥಾನಕ್ಕೆ ಕೇಳಿ ಬಂದಿತ್ತು.
ತನ್ವೀರ್‌ಸೇಠ್‌ಗೆ ಎರಡು ಬಾರಿ ಅವಕಾಶ: ತನ್ವೀರ್ ಸೇಠ್ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಮಾಜಿ ಸಚಿವ ದಿ. ಅಜೀಜ್‌ಸೇಠ್ ಅವರ ಪುತ್ರ. ಬಿಬಿಎಂ ಪದವೀಧರ. ನಗರಪಾಲಿಕೆ ಸದಸ್ಯರಾಗಿದ್ದರು. ಅಜೀಜ್‌ಸೇಠ್ ಅವರ ನಿಧನದ ನಂತರ ಮೈಸೂರಿನ ನರಸಿಂಹರಾಜ ಕ್ಷೇತ್ರದಿಂದ 2002 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶ. 2004, 2008, 2013, 2018, 2023- ಹೀಗೆ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ತನ್ವೀರ್ ಸೇಠ್ 2004 ರಲ್ಲಿ ಧರಂಸಿಂಗ್ ನೇತೃತ್ವದ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕಾರ್ಮಿಕ ಹಾಗೂ ವಕ್‌್ಛ ಖಾತೆ ರಾಜ್ಯ ಸಚಿವರಾಗಿದ್ದರು. ಕೊಡಗು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. 2016 ರಲ್ಲಿ ಸಿದ್ದರಾಮಯ್ಯ ಅವರ ಸಂಪುಟಕ್ಕೆ ಮೂರು ಕಾಲು ವರ್ಷದ ನಂತರ ಸೇರ್ಪಡೆಯಾಗಿ ಸಂಪುಟ ದರ್ಜೆ ಸಚಿವರಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ನಿರ್ವಹಿಸಿದ್ದರು. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.
ಚಾಮರಾಜನಗರದಲ್ಲಿ ಯಾವುದೇ ಗೊಂದಲ ಇಲ್ಲ: ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಚಾಮರಾಜನಗರಿಂದ ಉಪ್ಪಾರ ಜನಾಂಗದ ಸಿ. ಪುಟ್ಟರಂಗಶೆಟ್ಟಿ, ಕೊಳ್ಳೇಗಾಲದಿಂದ ಪ.ಜಾತಿಯ ಎ.ಆರ್. ಕೃಷ್ಣಮೂರ್ತಿ, ಗುಂಡ್ಲುಪೇಟೆಯಿಂದ ವೀರಶೈವ- ಲಿಂಗಾಯತ ಜನಾಂಗದ ಎಚ್.ಎಂ. ಗಣೇಶಪ್ರಸಾದ್ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದಾರೆ. ಪುಟ್ಟರಂಗಶೆಟ್ಟಿಸತತ ನಾಲ್ಕು ಬಾರಿ ಗೆದ್ದವರು. 2018 ರಲ್ಲಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಳ ಕಲ್ಯಾಣ ಖಾತೆ ಸಚಿವರಾಗಿದ್ದರು. ಈ ಬಾರಿಯೂ ಅವರ ಹೆಸರು ಪ್ರಬಲವಾಗಿ ಕೇಳಿ ಬಂದಿದೆ.
ರಾಜ್ಯ ರಾಜಕಾರಣದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ ಕೆ.ಎಚ್.ಮುನಿಯಪ್ಪ
ಇನ್ನೂ ಕೃಷ್ಣಮೂರ್ತಿ ಅವರು ಮೂರನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಅದು 19 ವರ್ಷಗಳ ನಂತರ ಅವರಿಗೆ ಗೆಲವು ಸಿಕ್ಕಿದೆ. ಮೈಸೂರಿನಿಂದ ಪ.ಜಾತಿಯ ಮಹದೇವಪ್ಪ ಅವರಿಗೆ ಅವಕಾಶ ನೀಡಿದರೆ ಕೃಷ್ಣಮೂರ್ತಿ ಅವರಿಗೆ ಅವಕಾಶ ಕಡಿಮೆ. ಅಲ್ಲದೇ ಹಿಂದುಳಿದ ಉಪ್ಪಾರ ಜನಾಂಗಕ್ಕೆ ಅವಕಾಶ ಮಾಡಿಕೊಡುವುದರಿಂದ ಸಿ. ಪುಟ್ಟರಂಗಶೆಟ್ಟಿಅವರಿಗೆ ಅವಕಾಶ ಹೆಚ್ಚು. ಗಣೇಶಪ್ರಸಾದ್ ಇದೇ ಮೊದಲ ಬಾರಿ ಗೆದ್ದವರು. ಅವರ ತಂದೆ ಎಚ್.ಎಸ್. ಮಹದೇವಪ್ರಸಾದ್ ಐದು ಬಾರಿ ಗೆದ್ದು, ಎನ್. ಧರಂಸಿಂಗ್, ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. ಅವರ ತಾಯಿ ಡಾ.ಗೀತಾ ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದರು.