
ವಿಧಾನಸಭೆ (ಆ.23): ಬೆಂಗಳೂರು ನಗರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾಗದ ಅಭಿವೃದ್ಧಿ ಕೆಲಸಗಳನ್ನು ನಮ್ಮ ಸರ್ಕಾರದಲ್ಲಿ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರು ಅಭಿವೃದ್ಧಿ ಕಾರ್ಯಗಳ ಸಮಸ್ಯೆಗಳು, ಅತಿವೃಷ್ಟಿಯಿಂದಾಗಿರುವ ನಷ್ಟ ಹಾಗೂ ಕೇಂದ್ರದ ಅನುದಾನಗಳ ಬಗ್ಗೆ ನಡೆದ ವಿಶೇಷ ಚರ್ಚೆಗೆ ಉತ್ತರಿಸಿದ ಅವರು, ವಿರೋಧ ಪಕ್ಷಗಳ ನಾಯಕರು ಅನೇಕ ಟೀಕೆ ಮಾಡಿದ್ದಾರೆ. ಅದು ಅವರ ಹಕ್ಕು, ಅವರು ನಮ್ಮನ್ನು ಟೀಕೆ ಮಾಡದಿದ್ದರೆ ಅವರ ಅಸ್ತಿತ್ವವೇ ಇರುವುದಿಲ್ಲ.
ಹೀಗಾಗಿ ಟೀಕೆ ಮಾಡುತ್ತಾರೆ. ಅದನ್ನು ನಾನು ತಪ್ಪು ಎನ್ನುವುದಿಲ್ಲ ಎಂದು ಟಾಂಗ್ ನೀಡಿದರು. ನಾನು ಬಹಳ ಆಸಕ್ತಿಯಿಂದ ಬೆಂಗಳೂರು ನಗರಾಭಿವೃದ್ಧಿ ಹಾಗೂ ಜಲಸಂಪನ್ಮೂಲ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ನಾವು ಯಾರೂ ಇಲ್ಲಿ ಶಾಶ್ವತವಲ್ಲ. ನನಗೆ ಸಿಕ್ಕ ಅವಕಾಶದಲ್ಲಿ ಬೆಂಗಳೂರಿಗೆ ಏನಾದರೂ ಕೊಡುಗೆ ಕೊಟ್ಟು ಹೋಗಬೇಕು ಎಂದುಕೊಂಡಿದ್ದೇನೆ. ಹೀಗಾಗಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.
ರಸ್ತೆಗಳ ಅಭಿವೃದ್ಧಿಗೆ ಆದ್ಯತೆ: ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲು ಎಲ್ಲೆಲ್ಲಿ ಗುಂಡಿಗಳಿವೆ ಎಂದು ಸಾರ್ವಜನಿಕರು ಕೂಡ ಅಧಿಕಾರಿಗಳ ಗಮನಕ್ಕೆ ತರಲು ಅಕಾಶ ಕಲ್ಪಿಸಿದ್ದೇವೆ. ‘ಗುಂಡಿ ಗಮನ’ ಯೋಜನೆ ತಂದು ಎಲ್ಲೆಲ್ಲಿ ರಸ್ತೆಗುಂಡಿಗಳಿವೆಯೋ ಅವುಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪೊಲೀಸರು ಕೂಡ ರಸ್ತೆಗುಂಡಿಗಳ ಪಟ್ಟಿ ಮಾಡುವ ಅವಕಾಶ ಕಲ್ಪಿಸಿದ್ದೇವೆ. ಸುಮಾರು 10 ಸಾವಿರ ಗುಂಡಿಗಳನ್ನು ಗುರುತಿಸಲಾಗಿದ್ದು. ಇದರಲ್ಲಿ ಸುಮಾರು 5,377 ಗುಂಡಿಗಳನ್ನು ಮುಚ್ಚಲಾಗಿದೆ. ಉಳಿದ 5 ಸಾವಿರ ಗುಂಡಿಗಳನ್ನು ಮುಚ್ಚಲು ಕಾರ್ಯಕ್ರಮ ರೂಪಿಸಿದ್ದೇವೆ. ಜನರೂ ಸಹ ನಗರದಲ್ಲಿ ಎಲ್ಲೇ ರಸ್ತೆಗುಂಡಿ ಕಂಡು ಬಂದರೂ ಫೋಟೊ ತೆಗೆದು ಪಾಲಿಕೆಯ ವಾಟ್ಸಾಪ್‌ಗೆ ಕಳುಹಿಸಬಹುದು ಎಂದು ಶಿವಕುಮಾರ್ ತಿಳಿಸಿದರು.
ಡಿನೋಟಿಫೈ ಮಾಡಿ ಜೈಲಿಗೆ ಹೋಗಲು ಸಿದ್ಧ ಇಲ್ಲ: ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ಯೋಜನೆಗೆ ವಶಪಡಿಸಿಕೊಂಡಿರುವ ಭೂಮಿ ಡಿನೋಟಿಫೈ ಮಾಡಿ ನಾನು ಜೈಲಿಗೆ ಹೋಗಲು ತಯಾರಿಲ್ಲ. ನನ್ನ ತಾಯಿಯ ಭೂಮಿಯೇ ಹೋಗಿದೆ. ಶಿವರಾಮ ಕಾರಂತ ಬಡಾವಣೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಆಗಿಲ್ಲ. ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲಾಗಿದೆ. ಪರಿಹಾರಕ್ಕೆ 60:40 ಅನುಪಾತದಲ್ಲಿ ಒಪ್ಪಿಗೆ ಸೂಚಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಹೊರವಲಯಕ್ಕೂ ಮೆಟ್ರೋ ವಿಸ್ತರಣೆಗೆ ಡಿಪಿಆರ್: ಹೊಸಕೋಟೆ, ನೆಲಮಂಗಲ, ಹೊಸೂರು, ತಾವರೆಕೆರೆ ಭಾಗಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಡಿಪಿಆರ್ ಕರೆಯಲಾಗಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆಗೆ ಸಂಪರ್ಕ ಕಲ್ಪಿಸುವ ನೇರಳೆ ಮಾರ್ಗವು 7.5 ಕಿ.ಮೀ. ಇದ್ದು, ಡಿ.26ರ ಹೊತ್ತಿಗೆ ಸಾರ್ವಜನಿಕ ಸೇವೆಗೆ ದೊರೆಯಲಿದೆ. ಈ ಎಲ್ಲಾ ಯೋಜನೆಗಳ ಬಗ್ಗೆ ಪ್ರಧಾನಿಯವರಿಗೆ ತಿಳಿಸಿ ಸೂಕ್ತ ಅನುದಾನಕ್ಕೆ ಮನವಿ ಸಲ್ಲಿಸಿದ್ದೇನೆ. ಎಲ್ಲರೂ ಒತ್ತಡ ಹಾಕಿಸಿದರೆ ನಿಮ್ಮ, ನಮ್ಮ ಬೆಂಗಳೂರು ಅಭಿವೃದ್ಧಿಯಾಗಲಿದೆ ಎಂದು ಅವರು ವಿಪಕ್ಷಗಳ ಶಾಸಕರನ್ನು ಉದ್ದೇಶಿಸಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.