ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

Published : Aug 23, 2025, 09:54 AM IST
Siddaramaiah

ಸಾರಾಂಶ

ಬಿಜೆಪಿ ಅಧಿಕಾರದಲ್ಲಿರುವ ಬಹುತೇಕ ರಾಜ್ಯಗಳಲ್ಲಿ ಕಾಲ್ತುಳಿತ ಸಂಭವಿಸಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಹಾಗೆಂದ ಮಾತ್ರಕ್ಕೆ ಅಲ್ಲಿನ ಮುಖ್ಯಮಂತ್ರಿ ಅವರು ಹೊಣೆ ಹೊತ್ತು ರಾಜೀನಾಮೆ ನೀಡಲಿಲ್ಲ.

ವಿಧಾನಸಭೆ (ಆ.23): ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಡೆದಿರುವ ಕಾಲ್ತುಳಿತ ದುರ್ಘಟನೆಗಳ ಪಟ್ಟಿಯನ್ನು ಸದನದಲ್ಲಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿನ್ನಸ್ವಾಮಿ ಕ್ರೀಡಾಂಗಣ ಬಳಿಯ ಕಾಲ್ತುಳಿತ ಪ್ರಕರಣಕ್ಕೆ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದ ಬಿಜೆಪಿ ಶಾಸಕರಿಗೆ ತಿರುಗೇಟು ನೀಡಿದರು. ನಿಯಮ 69ರ ಅಡಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣದ ಬಗ್ಗೆ ನಡೆದ ಚರ್ಚೆ ವೇಳೆ ವಿರೋಧ ಪಕ್ಷದ ಶಾಸಕರು, ಕಾಲ್ತುಳಿತಕ್ಕೆ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದರು. ಜತೆಗೆ ದುರ್ಘಟನೆ ಕುರಿತು ಸಾರ್ವಜನಿಕರಲ್ಲಿ ಕ್ಷಮೆಯಾಚಿಸಬೇಕು ಹಾಗೂ ಹೊಣೆ ಹೊತ್ತು ಸಿಎಂ, ಡಿಸಿಎಂ ಮತ್ತು ಗೃಹ ಸಚಿವರು ರಾಜೀನಾಮೆ ನೀಡುವಂತೆಯೂ ಆಗ್ರಹಿಸಿದರು.

ಚರ್ಚೆಗೆ ಶುಕ್ರವಾರ ಉತ್ತರ ನೀಡಿದ ಸಿದ್ದರಾಮಯ್ಯ, ಧಾರ್ಮಿಕ ಕೇಂದ್ರಗಳು, ಕ್ರೀಡೆ, ಶೋಕಾಚರಣೆ, ಸಂಭ್ರಮಾಚರಣೆ ಸಂದರ್ಭದಲ್ಲಿ ಹೆಚ್ಚಾಗಿ ಕಾಲ್ತುಳಿತ ಸಂಭವಿಸಿ ದುರ್ಘಟನೆಗೆ ಕಾರಣವಾಗುತ್ತದೆ. ಈ ರೀತಿಯ ಕಾಲ್ತುಳಿತ ಪ್ರಕರಣಗಳು ಕರ್ನಾಟಕದಲ್ಲಿ ಮಾತ್ರ ಆಗಿಲ್ಲ. ಬಿಜೆಪಿ ಅಧಿಕಾರದಲ್ಲಿರುವ ಬಹುತೇಕ ರಾಜ್ಯಗಳಲ್ಲಿ ಕಾಲ್ತುಳಿತ ಸಂಭವಿಸಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಹಾಗೆಂದ ಮಾತ್ರಕ್ಕೆ ಅಲ್ಲಿನ ಮುಖ್ಯಮಂತ್ರಿ ಅವರು ಹೊಣೆ ಹೊತ್ತು ರಾಜೀನಾಮೆ ನೀಡಲಿಲ್ಲ. ಅಲ್ಲದೆ, ಬಿಜೆಪಿ ನಾಯಕರು ಅದರ ಬಗ್ಗೆ ಮಾತನಾಡಿಯೂಯಿಲ್ಲ ಎಂದು ಹೇಳಿದರು.

ಅಬೆಟ್ಟರ್‌ ಎಂದಿದ್ದಕ್ಕೆ ತರಾಟೆ: ಚರ್ಚೆ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸರ್ಕಾರವೇ ಅಬೆಟ್ಟರ್‌ (ಪ್ರಚೋದನೆ ನೀಡಿದವರು) ಎಂದು ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಉಲ್ಲೇಖಿಸಿದ್ದನ್ನು ಪ್ರಸ್ತಾಪಿಸಿ ಸಿಟ್ಟಾಗಿಯೇ ಪ್ರತಿಯಿಸಿದ ಸಿದ್ದರಾಮಯ್ಯ, ಉತ್ತರಪ್ರದೇಶದ ಪ್ರಯಾಗ್‌ರಾಜ್‌, ಬಾಲೇಶ್ವರ, ರತ್ನಘರ್‌, ಹಿಮಾಚಲ ಪ್ರದೇಶದ ನೈನಾ ದೇವಿ ದೇವಸ್ಥಾನ, ಜೋಧಪುರದ ಚಾಮುಂಡದೇವಿ ದೇವಸ್ಥಾನ, ರಾಜಸ್ಥಾನದ ಹರೀನ್‌ಚೌರಾ ಘಾಟ್‌, ಮಧ್ಯಪ್ರದೇಶದ ಬಿಹಾರದ ಪಟ್ನಾ, ಚತ್ತೀಸ್‌ಘಡದ ಹರಿದ್ವಾರ, ದೆಹಲಿಯ ರೈಲ್ವೆ ನಿಲ್ದಾಣ, ಮುಂಬೈ ರೈಲ್ವೆ ನಿಲ್ದಾಣ, ಗೋವಾದ ಲಾಯರಿ ಹೀಗೆ ಹಲವು ಕಡೆಗಳಲ್ಲಿ ಈ ಹಿಂದೆ ಕಾಲ್ತುಳಿತ ಸಂಭವಿಸಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ.

ಹೀಗೆ ಕಾಲ್ತುಳಿತ ಸಂಭವಿಸದ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಹಾಗಾದರೆ ಅಲ್ಲಿನ ಕಾಲ್ತುಳಿತಕ್ಕೆ ಬಿಜೆಪಿ ಮತ್ತು ಆಗಿನ ಮುಖ್ಯಮಂತ್ರಿ ಅವರೇ ಪ್ರಚೋದನೆ ನೀಡಿದಂತೆಯೇ? ಅವರನ್ನೆಲ್ಲ ಸುರೇಶ್‌ ಕುಮಾರ್‌ ಅಬೆಟ್ಟರ್‌ ಎಂದು ಕರೆದಿಲ್ಲವಲ್ಲ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು. ಚಾಮರಾಜನಗರದಲ್ಲಿ ಆಕ್ಸಿಜನ್‌ ಕೊರತೆಯಿಂದ ಸಾವನ್ನಪ್ಪಿದ ಘಟನೆಯನ್ನೂ ಪ್ರಸ್ತಾಪಿಸಿದ ಸಿಎಂ, ಕೋವಿಡ್‌ ಸಮಯದಲ್ಲಿ ಚಾಮರಾಜನಗರದಲ್ಲಿ ಆಕ್ಸಿಜನ್‌ ಕೊರತೆಯಿಂದ 36 ಮಂದಿ ಸಾವನ್ನಪ್ಪಿದರು. ಆಗ ನೀವೇ (ಸುರೇಶ್‌ಕುಮಾರ್‌) ಉಸ್ತುವಾರಿ ಸಚಿವರಾಗಿದ್ದವರು. ಹೀಗೆ ಅಮಾಯಕರು ಸಾವಿಗೀಡಾದಾಗ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು, ಆರೋಗ್ಯ ಸಚಿವ ಡಾ. ಸುಧಾಕರ್‌ ಅವರನ್ನು ಅಬೆಟ್ಟರ್‌ ಎಂದು ಕರೆಯಲಿಲ್ಲವಲ್ಲ. ಅವರಿಂದ ಕನಿಷ್ಟ ವಿಷಾಧ ವ್ಯಕ್ತಪಡಿಸುವಂತೆಯೂ ಕೇಳಲಿಲ್ಲವಲ್ಲ ಎಂದರು.

ಸಮೂಹ ಸನ್ನಿಯಿಂದ ಕಾಲ್ತುಳಿತ: ಆರ್‌ಸಿಬಿ 18 ವರ್ಷಗಳ ನಂತರ ಐಪಿಎಲ್‌ ಗೆದ್ದ ಹಿನ್ನೆಲೆಯಲ್ಲಿ ಜೂ. 3ರಂದು ರಾತ್ರಿ ಬೆಂಗಳೂರಿನಾದ್ಯಂತ ಸಂಭ್ರಮಾಚರಣೆ ನಡೆದಿದೆ. ಮರುದಿನ ಕ್ರಿಕೆಟಿಗರು ಬರುತ್ತಾರೆ ಎಂದು ಆರ್‌ಸಿಬಿ, ಕೆಎಸ್‌ಸಿಎ ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಿದ್ದರಿಂದ ಲಕ್ಷಾಂತರ ಜನರು ಚಿನ್ನಸ್ವಾಮಿ ಕ್ರೀಡಾಂಗಣ, ವಿಧಾನಸೌಧದತ್ತ ಬಂದರು. ಹೀಗೆ ಜನ ಬರಲು ಸಮೂಹ ಸನ್ನಿ ಕಾರಣ. ಅಲ್ಲದೆ, ಪೊಲೀಸರಿಗೆ ಈ ಬಗ್ಗೆ ಸೂಚನೆ ಇದ್ದರೂ ಸಮರ್ಪಕವಾಗಿ ಬಂದೋಬಸ್ತ್‌ ಮಾಡಿಕೊಳ್ಳಲಿಲ್ಲ. ಈ ಕಾರಣದಿಂದಲೇ ಕಾಲ್ತುಳಿತ ಸಂಭವಿಸುವಂತಾಯಿತು ಎಂದು ಸಿದ್ದರಾಮಯ್ಯ ವಿವರಿಸಿದರು.

ಜೂ. 4ರಂದು ಬೆಳಗ್ಗೆ ನನ್ನ ರಾಜಕೀಯ ಕಾರ್ಯದರ್ಶಿಯಾಗಿದ್ದ ಗೋವಿಂದರಾಜು ಕರೆ ಮಾಡಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಸಂಭ್ರಮಾಚರಣೆಗೆ ಬರುವಂತೆ ಕೋರಿದ್ದರು. ಆದರೆ, ಆರ್‌ಸಿಬಿ ನಮ್ಮ ರಾಜ್ಯದ ತಂಡವಲ್ಲ, ನಾನು ಬರುವುದಿಲ್ಲ ಎಂದೆ. ಕೊನೆಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್‌ಸಿಬಿ ಆಟಗಾರರನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಯಿತು. ರಾಜ್ಯಪಾಲರಿಗೆ ಕರೆ ಮಾಡಿ ನಾನೇ ಕರೆದೆ. ಕೇವಲ 10 ನಿಮಿಷದಲ್ಲಿ ಕಾರ್ಯಕ್ರಮ ಮುಗಿಯಿತು. ಇದರಲ್ಲಿ ಸರ್ಕಾರ ಮತ್ತು ನನ್ನ ತಪ್ಪೇನಿದೆ ಎಂದರು.

ಸನ್ಮಾನಿಸದಿದ್ದರೂ ಪ್ರಶ್ನೆ ಮಾಡುತ್ತೀರಿ: ಆರ್‌ಸಿಬಿ ಆಟಗಾರರ ವಿಕ್ಟರಿ ಪರೇಡ್‌ಗೆ ಸರ್ಕಾರ ಅನುಮತಿಸದಾಗ ಬಿಜೆಪಿ ಮತ್ತು ಜೆಡಿಎಸ್‌ ಸರ್ಕಾರವನ್ನು ಮತ್ತು ಗೃಹ ಸಚಿವರನ್ನು ಟೀಕೆ ಮಾಡಿದ್ದರು. ಇನ್ನು, ಆರ್‌ಸಿಬಿ ಆಟಗಾರರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸದೇ ಹೋಗಿದ್ದರೆ, ಅದಕ್ಕೂ ಟೀಕಿಸುತ್ತಿದ್ದಿರಿ. ಇನ್ನು, 2021ರಲ್ಲಿ ಕರೋನಾ ತಾಂಡವವಾಡುತ್ತಿದ್ದಾಗ ಗುಜರಾತ್‌ ತಂಡ ಐಪಿಎಲ್‌ ಗೆದ್ದಾಗ ಖುದ್ದು ಗೃಹ ಸಚಿವ ಅಮಿತ್‌ ಶಾ ಟ್ರೋಫಿ ನೀಡಲು ಹೋಗಿದ್ದರು. ಅಹಮದಾಬಾದ್‌ನಲ್ಲಿ ಮೆರವಣಿಗೆಗೆ ಅನುಮತಿಸಿದ್ದರು. ಅದು ತಪ್ಪಲ್ಲವೇ ಎಂದು ಸಿದ್ದರಾಮಯ್ಯ ಹೇಳಿದರು.

ರೈತರಿಗೆ ಗುಂಡಿ ಹೊಡೆಸಿದವರು ರಾಜೀನಾಮೆ ಕೊಟ್ರಾ: ಸಿಎಂ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿಯ ಬಿ.ವೈ. ವಿಜಯೇಂದ್ರ ಮಾತನಾಡಲು ಎದ್ದು ನಿಂತಾಗ ಅವರ ತಂದೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಸಗೊಬ್ಬರಕ್ಕಾಗಿ ಗೋಲಿಬಾರ್‌ ಮಾಡಿಸಿದ್ದನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಸಗೊಬ್ಬರ ಕೇಳಿದ ರೈತರ ಮೇಲೆ ಗುಂಡು ಹಾರಿಸಿ, ಇಬ್ಬರು ರೈತರನ್ನು ಕೊಲ್ಲಲಾಯಿತು. ಆಗ ಯಡಿಯೂರಪ್ಪ ರಾಜೀನಾಮೆ ಕೊಟ್ರಾ? ಹಾಗೆಯೇ, ಡಾ. ರಾಜ್‌ಕುಮಾರ್‌ ಸಾವಿಗೀಡಾದಾಗ ಸಂಭವಿಸಿದ ಗದ್ದಲದಲ್ಲಿ 7 ಜನ ಸಾವನ್ನಪ್ಪಿದರು, ಆಗ ಸಿಎಂ ಆಗಿದ್ದ ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆ ಕೊಟ್ರಾ ಎಂದು ಟಾಂಗ್‌ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!