DK Shivakumar: ಡಿಕೆಶಿ ಪದಗ್ರಹಣ ಸಮಾರಂಭಕ್ಕೆ ರಾಮನಗರದಿಂದ 60 ಸಾವಿರ ಜನ ಸೇರಿಸಲು ಸಿದ್ಧತೆ!

Kannadaprabha News   | Kannada Prabha
Published : May 30, 2026, 12:00 PM IST
DK Shivakumar next CM

ಸಾರಾಂಶ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಪದಗ್ರಹಣ ಸಮಾರಂಭಕ್ಕೆ ಅವರ ತವರು ಜಿಲ್ಲೆಯಾದ ರಾಮನಗರದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ, ಜಿಲ್ಲೆಯಿಂದ ಸುಮಾರು 60 ಸಾವಿರ ಜನರನ್ನು ಸಮಾರಂಭಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸಲಾಗುತ್ತಿದೆ.

ರಾಮನಗರ (ಮೇ.30): ಜಿಲ್ಲೆಯ ಸುಪುತ್ರ ಡಿ.ಕೆ.ಶಿವಕುಮಾರ್(DK Shivakumar) ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಪದಗ್ರಹಣ ಸಮಾರಂಭಕ್ಕೆ ಜಿಲ್ಲೆಯಿಂದ ಸುಮಾರು 50 ರಿಂದ 60 ಸಾವಿರ ಜನರು ಸಾಕ್ಷಿಯಾಗುವಂತೆ ಮಾಡಲು ಜಿಲ್ಲಾ ಕಾಂಗ್ರೆಸ್‌ನಲ್ಲಿ ಭರದ ಸಿದ್ದತೆಗಳು ನಡೆದಿವೆ.

ತವರು ಜಿಲ್ಲೆ ಬೆಂಗಳೂರು‌ ದಕ್ಷಿಣದಿಂದ ಡಿ.ಕೆ.ಶಿವಕುಮಾರ್ ಅವರ ಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿ ಶಕ್ತಿ ಪ್ರದರ್ಶನ ಮಾಡಲು ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿ ತಾಲೂಕುಗಳಲ್ಲಿ ಪೂರ್ವಭಾವಿ ಸಭೆಗಳು ನಡೆಯುತ್ತಿವೆ.

ಈಗಾಗಲೇ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ರಾಮನಗರ ಮತ್ತು ಹಾರೋಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿದರೆ, ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಬಿಡದಿಯಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಪದಗ್ರಹಣ ಸಮಾರಂಭಕ್ಕೆ ಜಿಲ್ಲೆಯಿಂದ ನಿರೀಕ್ಷೆಗೂ ಮೀರಿ ಜನರು ಆ ಸಂಭ್ರಮದಲ್ಲಿ ಭಾಗಿಯಾಗಲು ಬಸ್ಸು ಮತ್ತು ಊಟದ ವ್ಯವಸ್ಥೆ ಮಾಡುವುದು. ಶುಭ ಕೋರುವ ಕಟೌಟ್ ಗಳನ್ನು ಅಳವಡಿಸುವ ಬಗ್ಗೆಯೂ ಶಾಸಕರು ಮುಖಂಡರು ಮತ್ತು ಕಾರ್ಯಕರ್ತರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಜಿಲ್ಲೆಯಿಂದ ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗವಹಿಸಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡೋಣ ಎಂದು ಶಾಸಕ ಇಕ್ಬಾಲ್ ಹುಸೇನ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ರಾಮನಗರದಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿ ಮತ್ತು ಹಾರೋಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿದ ಇಕ್ಬಾಲ್ ಹುಸೇನ್ ರವರು ಯುವ ಕಾಂಗ್ರೆಸ್, ಎನ್ ಎಸ್ ಯುಐ, ಮಹಿಳಾ ಘಟಕ ಸೇರಿದಂತೆ ಎಲ್ಲ ಘಟಕದ ಪದಾಧಿಕಾರಿಗಳು, ಗ್ರಾಮ‌ ಪಂಚಾಯಿತಿ ಮಟ್ಟದಿಂದ ಸುಮಾರು 60 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆ. ಪಕ್ಷದ ಮುಖಂಡರು ಡಿಕೆಶಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಬಹಳ‌ ದಿನಗಳ ರಾಜ್ಯದ ಜನರ ಕನಸ್ಸು ನನಸ್ಸಾಗುತ್ತಿದೆ. ಡಿ.ಕೆ.ಶಿವಕುಮಾರ್ ರವರು ಕಾಂಗ್ರೆಸ್ ಪಕ್ಷವನ್ನು ದೇವರೆಂದು ಪೂಜಿಸಿ, ಆರಾಧಿಸಿದವರು. ದೇಶದಲ್ಲಿ ಎಲ್ಲೆ ಕಾಂಗ್ರೆಸ್ ಪಕ್ಷ ಸಂಕಷ್ಟ ಸಮಯದಲ್ಲಿದ್ದಾಗ ಹೆಗಲು ಕೊಟ್ಟವರು. ಆ ಮೂಲಕ ರಾಷ್ಟ್ರ‌ಮಟ್ಟದಲ್ಲಿ ಡಿ.ಕೆ.ಶಿವಕುಮಾರ್ ಜನಮ್ನಣೆ ಗಳಿಸಿದ್ದಾರೆ. ಗ್ರಾಮ ಮಟ್ಟದಿಂದ ದೆಹಲಿ ಮಟ್ಟದವರೆಗೆ ಕಾಂಗ್ರೆಸ್ ‌ಪಕ್ಷವನ್ನು ಹಂತ ಹಂತವಾಗಿ ಸಂಘಟಿಸಿದ ಮಹಾನ್ ಚತುರರು. ಅವರ ಕಾಯಕ‌ನಿಷ್ಟೆಯನ್ನು ಗುರುತಿಸಿ ದೆಹಲಿ ವರಿಷ್ಟರು ಮುಖ್ಯಮಂತ್ರಿ ಸ್ಥಾನ ನೀಡಿದ್ದಾರೆ. ಅವರೆಲ್ಲರಿಗೂ ಜಿಲ್ಲೆಯ ಜನತೆಯ ಪರವಾಗಿ ಕೋಟಿ ನಮಸ್ಕಾರಗಳನ್ನು ತಿಳಿಸುತ್ತೇನೆ ಎಂದರು.

ನಮ್ಮ‌ ಜೆಲ್ಲೆಯವರಾದ ಡಿಕೆಶಿ ಅವರು ಸಿಎಂ ಆಗುತ್ತಿರುವುದರಲ್ಲಿ ಅರ್ಥವಿದೆ.ಅವರ ರಾಜಕೀಯ ಪಯಣ ಸಾಧಾರಣವಾದದ್ದಲ್ಲ. ಅವರ ಪಯಣ ದೊಡ್ಡ ಮಟ್ಟದ್ದು, ಅವರ ಸಂಘಟನೆ ನಮ್ಮೆಲ್ಲರಿಗೂ ಸ್ಪೂರ್ತಿ, ಅದು ಮುಂದಿನ‌ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್ ಸಂಕಷ್ಟದ ದಿನಗಳಲ್ಲಿ ತಿಹಾರ್ ಜೈಲಿನಿಂದ ಬಂದ ತಕ್ಷಣ ಕಾಂಗ್ರೆಸ್ ಪಕ್ಷದ ವರಿಷ್ಠರು ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ ಜವಾಬ್ದಾರಿ ವಹಿಸಿದರು. ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಮತ್ತು ಪ್ರಮುಖರ ಜೊತೆ ಪ್ರತಿದಿನ ಜೂಮ್ ಮೀಟಿಂಗ್, ಹೋರಾಟ‌ಗಳು, ಸ್ವಾತಂತ್ರ ನಡಿಗೆ, ಆರೋಗ್ಯ ಹಸ್ತ, ಮೇಕೆದಾಟು ಹೋರಾಟದಂತಹ ಹತ್ತು ಹಲವು ಹೋರಾಟಗಳ ಮೂಲಕ ರಾಜ್ಯದಲ್ಲಿ ಅವರ ಸಂಘಟನೆಯ ಪರಿಶ್ರಮದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ದೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಸಭೆಯಲ್ಲಿ ಮಾಜಿ ಶಾಸಕ ಕೆ.ರಾಜು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಜಿ.ಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಹೆಚ್.ರಾಜು, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್ ನಗರಸಭೆ ಮಾಜಿ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ ಸೇರಿದಂತೆ ನಗರಸಭೆ ಸದಸ್ಯರು, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿಗಳ ಮುಖಂಡರು ಹಾಜರಿದ್ದರು.

ಕಾಂಗ್ರೆಸ್ ಪಕ್ಷದ ನಿಷ್ಟಾವಂತರು, ನಮ್ಮ ಜಿಲ್ಲೆಯವರಾದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಿರುವುದು ಜಿಲ್ಲೆಯ ಜನರಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ನಮ್ಮೆಲ್ಲರಿಗೂ ಬಹಳ ಸಂತಸ ತಂದಿದೆ. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಮಾರಂಭಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಮಾಡಲು ಶಾಸಕ ಇಕ್ಬಾಲ್ ಹುಸೇನ್ ಮತ್ತು ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ಎಲ್ಲ ಸಕಲ ಸಿದ್ದತೆಗಳು ನಡೆಯುತ್ತಿವೆ.

-ಚೇತನ್‌ಕುಮಾರ್, ಅಧ್ಯಕ್ಷರು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ........

ಡಿ‌‌.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ನಮ್ಮ ಜಿಲ್ಲೆಯ ಜನತೆಯ ಕನಸು. ಈ ಸಮಾರಂಭಕ್ಕೆ ಜನರನ್ನು ಕರೆದುಕೊಂಡು ಹೋಗುವುದು ನಮ್ಮ ಜವಾಬ್ದಾರಿ. ಜಿಲ್ಲೆಯಿಂದ 60 ಸಾವಿರ ಜನರನ್ನು ಕರೆದುಕೊಂಡು ಹೋಗಲು ಸಿದ್ಧತೆ ಮಾಡುತ್ತಿದ್ದೇವೆ. ಅದಕ್ಕಾಗಿ ಬಸ್ಸು, ಊಟ, ತಿಂಡಿ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದೇವೆ. ಇದು ನಮ್ಮ ಕಾರ್ಯಕ್ರಮ, ನಮ್ಮ ಜಿಲ್ಲೆಯ ಕಾರ್ಯಕ್ರಮ. ಹಾಗಾಗಿ ಜವಾಬ್ದಾರಿ ತೆಗೆದುಕೊಂಡು ಪದಗ್ರಹಣಕ್ಕೆ ಸಿದ್ಧತೆ ಮಾಡುತ್ತಿದ್ದೇವೆ.

-ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕೆಶಿ ಕ್ಯಾಬಿನೆಟ್‌ಗೆ ಹೈಕಮಾಂಡ್ ಟೂ ಸ್ಟೇಜ್ ಫಾರ್ಮುಲಾ: ಜೂನ್ 3ಕ್ಕೆ ಸಿಎಂ ಜೊತೆ 10 ಮಂದಿ ಹಿರಿಯ ಶಾಸಕರಿಗೆ ಮಂತ್ರಿಗಿರಿ!
Karnataka News Live: DK Shivakumar - ಡಿಕೆಶಿ ಪದಗ್ರಹಣ ಸಮಾರಂಭಕ್ಕೆ ರಾಮನಗರದಿದ 60 ಸಾವಿರ ಜನ ಸೇರಿಸಲು ಸಿದ್ಧತೆ!