ಮತ್ತೊಮ್ಮೆ ಸಿಎಂ ಅಸ್ತ್ರ ಪ್ರಯೋಗಿಸಿದ ಡಿಕೆಶಿ..! ಲೋಕಸಭಾ ಚುನಾವಣೆ ನಂತರ ರಾಜ್ಯಕ್ಕೆ ಮುಖ್ಯಮಂತ್ರಿ ಯಾರು?

By Sathish Kumar KHFirst Published Apr 15, 2024, 9:15 PM IST
Highlights

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್. ಯಾರಾಗ್ತಾರೆ, ಮುಂದಿನ ಸಿಎಂ? 

ಬೆಂಗಳೂರು (ಏ.15): ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್​ನಲ್ಲಿ ಕ್ಷಿಪ್ರ ಕ್ರಾಂತಿ ಆಗುವ ಸುಳಿವನ್ನ ಸ್ವತಃ ಕಾಂಗ್ರೆಸ್ ನಾಯಕರೇ ನೀಡ್ತಿದ್ದಾರೆ. ಚುನಾವಣೆ ನಂತರ ರಾಜ್ಯದಲ್ಲಿ ಅಧಿಕಾರ ಬದಲಾವಣೆ ಆಗುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೀತಿದೆ ಎನ್ನಲಾಗಿದೆ. ಇದಕ್ಕೆ ಉತ್ತರವಾಗಿ ಸಿಎಂ ಹಾಗೂ ಡಿಸಿಎಂ ಆಡುತ್ತಿರುವ ಕೆಲವು ಮಾತುಗಳು ಸಹ ಅಧಿಕಾರ ಬದಲಾವಣೆಯ ಮುನ್ಸೂಚನೆ ನೀಡ್ತಿದೆ. 

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಒಕ್ಕಲಿಗ ನಾಯಕರ ಸಭೆಯಲ್ಲಿ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ‘ನಾನು ನಿಮ್ಮೂರು ಅಳಿಯ. ನನಗೂ ದೊಡ್ಡ ಜವಾಬ್ದಾರಿ ಇದೆ.. ನೀವು ತಲೆ ಕಡೆಸಿಕೊಳ್ಳಲು ಹೋಗಬೇಡಿ. ಸ್ವಲ್ಪ ದಿನ ಅಷ್ಟೇ.. ದೆಹಲಿಯಲ್ಲಿ ಏನು ಆಗಬೇಕು ಅದು ತೀರ್ಮಾನ ಆಗಿದೆ.. ಇದು 5 ವರ್ಷ ಸರ್ಕಾರ ಅಲ್ಲ.. ಹತ್ತು ವರ್ಷದ ಸರ್ಕಾರ.. ಮೈಸೂರಿನ ನೀವೆಲ್ಲರೂ ನಮಗೆ ಬೆಂಬಲವಾಗಿ ನಿಲ್ಲಬೇಕು.. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್​ರನ್ನ ಗೆಲ್ಲಿಸಿ.. ಎಂ. ಲಕ್ಷ್ಮಣ್​ ಸೋತರೆ ನಮಗೆ ಮುಂದೆ ದೊಡ್ಡ ಅಪಾಯ’ ಎಂದಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಅವರ ಈ ಮಾತುಗಳು ಅಧಿಕಾರ ಬದಲಾವಣೆಯ ಸುಳಿವು ಎಂದೇ ರಾಜಕೀಯ ತಜ್ಞರು ಹೇಳುತ್ತಿದ್ದು, ಅದು ಲೋಕಸಭೆ ಚುನಾವಣೆ ಬಳಿಕ ನಡೆದರೂ ಅಚ್ಚರಿ ಇಲ್ಲ ಎನ್ನುತ್ತಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ ಮಾತುಗಳು ಸಹ ಇದಕ್ಕೆ ಪುಷ್ಠಿ ನೀಡುತ್ತಿದೆ. 
ಇತ್ತೀಚೆಗೆ ವರುಣಾದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತಾಡಿದ ಸಿಎಂ ಸಿದ್ದರಾಮಯ್ಯ, ‘ವಿಧಾನಸಭೆಯಲ್ಲಿ 48 ಸಾವಿರ ಲೀಡ್‌ ಕೊಟ್ಟು ಗೆಲ್ಲಿಸಿದ್ದೀರಿ. ಈಗ ಅಷ್ಟೇ ಲೀಡ್ ಅಲ್ಲ, ಜಾಸ್ತಿ ಲೀಡ್​ ಕೊಡಬೇಕು. ನಾನು ಮಹಾದೇವಪ್ಪ ಇದ್ದೀವಿ ಇವಾಗ 62 ಸಾವಿರ ಲೀಡ್​ ಬರಬೇಕಲ್ವಾ? ಈ ಬಾರಿ ವರುಣಾ ಕ್ಷೇತ್ರದಿಂದ 62 ಸಾವಿರ  ಲೀಡ್​ ಬರಬೇಕು. ಹೆಚ್ಚು ಲೀಡ್ ಬಂದ್ರೆ ನನ್ನ ಯಾರೂ ಕೂಡ ಮುಟ್ಟೋಕಾಗಲ್ಲ. ನಾನು ಇರಬೇಕಾ..? ಬೇಡ್ವಾ?  ಕೈ ಜೋಡಿಸಿ ಕೇಳುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದ್ದರು.

ಕೇರಳ ಸಾಲದ ಶೂಲಕ್ಕೆ ಸಿಲುಕಿದ್ಯಾಕೆ? ನೌಕರರಿಗೆ ಸಂಬಳ, ಪಿಂಚಣಿ ಕೊಡಲೂ ಪರದಾಟ!

ಈ ಹೇಳಿಕೆಗೂ ಮೊದಲು ಸಿಎಂ ಬದಲಾವಣೆ ಕಿಚ್ಚು ಹಚ್ಚಿದ್ದೇ ಕಾಂಗ್ರೆಸ್ ಶಾಸಕ ಗುಬ್ಬಿ ಶ್ರೀನಿವಾಸ್ ಮಾತುಗಳು. ತುಮಕೂರಿನಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತಾಡಿದ ಶಾಸಕ ‘ಲೋಕಸಭೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟ್ ಗೆಲ್ಲಿಸಲಿಲ್ಲ ಅಂದ್ರೆ, ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾಗುತ್ತದೆ. ಬಡವರ ಪರ ಕೆಲಸ ಮಾಡುವ ಸಿದ್ದರಾಮಯ್ಯರನ್ನು ಉಳಿಸಬೇಕು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಿ’ ಎಂದು ಶಾಸಕ ಗುಬ್ಬಿ ಶ್ರೀನಿವಾಸ್ ಮನವಿ ಮಾಡಿದರು.

ಈ ಹೊತ್ತಲ್ಲೇ ಕಾಂಗ್ರೆಸ್ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಸಹ ಒಂದು ಆಡಿಯೋ ಬಿಡುಗಡೆ ಮಾಡಿ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಬದಲಾವಣೆ ಕಿಚ್ಚು ಜೋರಾಗುವಂತೆ ಮಾಡಿದ್ದಾರೆ. ಆ ಆಡಿಯೋದಲ್ಲಿ ‘ಸಿದ್ದರಾಮಯ್ಯ ನನಗಾಗಿ ಚುನಾವಣೆ ಮಾಡಿ ಎಂದು ಹೇಳಿದ್ದಾರೆ. ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕಾದ್ರೆ, ಈ ಚುನಾವಣೆ ಮಾಡಬೇಕು ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಜನಪ್ರಿಯ CM ಸಿದ್ದರಾಮಯ್ಯರನ್ನು ಉಳಿಸಿಕೊಳ್ಳಬೇಕಾಗಿದೆ. ಸಿದ್ದರಾಮಯ್ಯ ಆದೇಶ ಪಾಲನೆ ಮಾಡಲು ಮುಂದಾಗಿದ್ದೇನೆ’  ಎಂಬ ಆಡಿಯೋ ರಿಲೀಸ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಗ್ಯಾರಂಟಿ ಕರಪತ್ರ ಹಂಚಿದ ಕೈ ಅಭ್ಯರ್ಥಿ ಸೌಮ್ಯಾರೆಡ್ಡಿ ಮೇಲೆ ಎಫ್‌ಐಆರ್!

ಸದ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಾರ್ಗೆಟ್ 20 ಗುರಿ ಇಟ್ಟುಕೊಂಡು ಪ್ರಚಾರಕ್ಕೆ ಇಳಿದಿದೆ. ಇದಕ್ಕಾಗಿ ತಮ್ಮ ಸಮುದಾಯದಲ್ಲಿ ಅನುಕಂಪ ಗಿಟ್ಟಿಸಲು ಸಿಎಂ ಅಸ್ತ್ರ ಪ್ರಯೋಗಿಸ್ತಿದ್ದಾರೆ ಎಂದು ಸಹ ಹೇಳಲಾಗ್ತಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಏನಾದ್ರೂ ರಾಜ್ಯದಲ್ಲಿ ಕಳಪೆ ಸಾಧನೆ ಮಾಡಿದ್ದೆ ಆದರೆ, ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳುತ್ತೆ ಎಂಬ ಟೆನ್ಷನ್  ಸಿಎಂ ಹಾಗೂ ಡಿಸಿಎಂ ಇಬ್ಬರನ್ನೂ ಕಾಡ್ತಿದೆ.

click me!