ಬಾಸೂರು ಚಂದ್ರೇಗೌಡ ಪಕ್ಷ ಸಂಘಟನೆಯ ದೃಷ್ಠಿಯಿಂದ ತಾಲೂಕು ಅಧ್ಯಕ್ಷ ಸ್ಥಾನದಿಂದ ಹಿರಿಯ ಕೆ.ಅಜ್ಜಪ್ಪ ಅವರನ್ನು ಕೆಳಗಿಳಿಸಿ, ತಮ್ಮ ಆಪ್ತ ವಕೀಲ ಎಂ.ಶಿವಪ್ಪ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಮೂಲ ಜೆಡಿಎಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.
ಸೊರಬ (ಡಿ.25) : ತಾಲೂಕಿನಲ್ಲಿ ಒಂದಿಷ್ಟುಚೇತರಿಕೆ ಕಂಡಿದ್ದ ಜೆಡಿಎಸ್‌ನಲ್ಲಿ ಈಗ ಭಿನ್ನಮತ ಸ್ಫೋಟಗೊಂಡಿದ್ದು, ಒಡೆದ ಮನೆಯಾಗಿ ಬಣ ರಾಜಕೀಯ ಪ್ರಾರಂಭಗೊಂಡಿದೆ. ಮಧು ಬಂಗಾರಪ್ಪ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ನಂತರ ಅನಾಥವಾಗಿದ್ದ ಜೆಡಿಎಸ್‌ಗೆ ಕೃಷಿಕ ಮತ್ತು ಹೋರಾಟಗಾರ ಬಾಸೂರು ಚಂದ್ರೇಗೌಡರ ಆಗಮನದಿಂದ ನವಚೈತನ್ಯ ಮೂಡಿ, ಸಂಘಟನೆ ಒಂದಿಷ್ಟುಚುರುಕುಗೊಂಡಿತ್ತು. 30 ವರ್ಷಗಳ ರಾಜಕೀಯ ಹಾದಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಾ ತಾಲೂಕಿನಲ್ಲಿ ತನ್ನದೇ ಆದ ಅಸ್ತಿತ್ವವನ್ನು ಸಾಧಿಸಿದ್ದ ಬಾಸೂರು ಚಂದ್ರೇಗೌಡ ಕಳೆದ ವರ್ಷ ಜೆಡಿಎಸ್‌ಗೆ ಎಂಟ್ರಿ ಕೊಟ್ಟು ನೆಲಕಚ್ಚಿದ್ದ ಜೆಡಿಎಸ್‌ಗೆ ಉತ್ಸಾಹ ತುಂಬಿ, ಸಂಘಟಿಸುವುದರ ಮೂಲಕ ಹೈಕಮಾಂಡ್‌ನ ಗಮನ ಸೆಳೆದಿದ್ದರು. ಇದರ ಪರಿಣಾಮ ಸೊರಬ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಎಂದು ಪಕ್ಷ ಘೋಷಣೆ ಮಾಡಿತ್ತು.
ಬಾಸೂರು ಚಂದ್ರೇಗೌಡ ಪಕ್ಷ ಸಂಘಟನೆಯ ದೃಷ್ಠಿಯಿಂದ ತಾಲೂಕು ಅಧ್ಯಕ್ಷ ಸ್ಥಾನದಿಂದ ಹಿರಿಯ ಕೆ.ಅಜ್ಜಪ್ಪ ಅವರನ್ನು ಕೆಳಗಿಳಿಸಿ, ತಮ್ಮ ಆಪ್ತ ವಕೀಲ ಎಂ.ಶಿವಪ್ಪ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಮೂಲ ಜೆಡಿಎಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಚಂದ್ರೇಗೌಡರ ವರ್ತನೆಯಿಂದ ಕೆರಳಿದ ಕೆ.ಅಜ್ಜಪ್ಪ ಪ್ರತ್ಯೇಕ ಬಣ ಹುಟ್ಟುಹಾಕಿ, ಹುಚ್ಚಪ್ಪ ಚಿಮಣೂರು ಅವರನ್ನು ತಾಲೂಕು ಜೆಡಿಎಸ್ ನೂತನ ಅಧ್ಯಕ್ಷರನ್ನಾಗಿ ಪ್ರತಿಷ್ಠಾಪಿಸಿದ್ದಾರೆ. ಪ್ರಸ್ತುತ ತಾಲೂಕು ಜೆಡಿಎಸ್ ಒಡೆದ ಮನೆಯಾಗಿ ಇಬ್ಬರು ಅಧ್ಯಕ್ಷರಿದ್ದಾರೆ. ಎರಡೂ ಬಣಗಳಿಂದ ಪ್ರತ್ಯೇಕ ಸಭೆಗಳು ನಡೆಯುತ್ತಿವೆ.
Assembly election: 2023ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಇತ್ತೀಚೆಗೆ ಜೆಡಿಎಸ್ ಬಿಡುಗಡೆಗೊಳಿಸಿರುವ 95 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೊರಬ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡದಿರುವುದು ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರಲ್ಲಿ ಇನ್ನಷ್ಟುಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಕಳೆದ ವಾರ ಸಮಾಜ ಸೇವಕ ಸಮನವಳ್ಳಿ ಪ್ರಸನ್ನಕುಮಾರ್ ಅವರು ಎಚ್.ಡಿ. ಕುಮಾರಸ್ವಾಮಿ ಸಮ್ಮುಖ ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇದು ನಿಯೋಜಿತ ಅಭ್ಯರ್ಥಿ ಎಂದು ಸಭೆ-ಸಮಾರಂಭಗಳಲ್ಲಿ ಹೇಳಿಕೊಳ್ಳುತ್ತಿರುವ ಬಾಸೂರು ಚಂದ್ರೇಗೌಡರ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಬಾಸೂರು ಚಂದ್ರೇಗೌಡರ ಬಣದಲ್ಲಿ ಬಸವರಾಜ್ ಬಾರ್ಕಿ, ಈಶ್ವರಪ್ಪ, ಶಿವಮೂರ್ತಿ, ಖಲಿಮುಲ್ಲಾ, ಬಸಪ್ಪಗೌಡ, ಶಿವರಾಜಪ್ಪ, ಭೀಮಪ್ಪ, ವೀರಭದ್ರಪ್ಪ, ವಿನಾಯಕ್, ಆನಂದ, ನಂದೀಶ್ ಗೌಡ, ಪ್ರಕಾಶ್‌ಗೌಡ, ಪ್ರಶಾಂತ್ ಸೇರಿದಂತೆ ಹಲವರಿದ್ದಾರೆ.
ಕೆ.ಅಜ್ಜಪ್ಪ ಬಣದಲ್ಲಿ ಹುಚ್ಚಪ್ಪ ಚಿಮಣೂರು, ತಾಲೂಕು ಮಹಿಳಾ ಅಧ್ಯಕ್ಷೆ ಸುಮಾ ಗಜಾನನ, ಬಸವನಗೌಡ ಪಾಟೀಲ್, ಗಣಪತಿ ಟಿ.ಜಿ.ಕೊಪ್ಪ, ಪುಂಡಲೀಕಪ್ಪ, ಸುಧಾಕರ ಭಟ್, ಮನೋಹರ್ ಕುಗ್ವೆ, ರಾಜು, ವಿಷ್ಣು, ತಿಮ್ಮಪ್ಪ ಈಡೂರು, ಮಧು ಚಿಮಣೂರು, ನಾಗರಾಜ್, ರಾಮಚಂದ್ರ, ದ್ಯಾವಪ್ಪ ಹಾಲಗಳಲೆ ಮೊದಲಾದವರು ಗುರ್ತಿಸಿಕೊಂಡಿದ್ದಾರೆ.
ಅಧ್ಯಕ್ಷರ ಬದಲಾವಣೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ವರಿಷ್ಠರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದೇನೆ. ತಮಗೆ ನೀಡಿದ ಜವಾಬ್ದಾರಿಯನ್ನು ಮುಂದುವರಿಸಿಕೊಂಡು ಹೋಗುವಂತೆ ಸೂಚಿಸಿದ್ದಾರೆ. ಹಾಗಾಗಿ ಜೆಡಿಎಸ್‌ಗೆ ನಾನೇ ಅಧ್ಯಕ್ಷ ಎಂದು ಎಂ. ಶಿವಪ್ಪ ದ್ವಾರಳ್ಳಿ ಹೇಳುತ್ತಾರೆ.
Karnataka Politics : ಡಿಕೆ ಸಹೋದರರ ಕೋಟೆಯಲ್ಲಿ ಎಚ್ಡಿಕೆ ಹವಾ
ಬಾಸೂರು ಚಂದ್ರೇಗೌಡ ಮಾತನಾಡಿ ತಾವು ಮಧುಬಂಗಾರಪ್ಪ ಕಳೆದ ಒಂದು ವರ್ಷದಿಂದ ತಾಲೂಕಿನ 409 ಹಳ್ಳಿಗಳಲ್ಲಿ 250 ಕ್ಕೂ ಹೆಚ್ಚು ಹಳ್ಳಿಗಳಿಗೆ ಪ್ರವಾಸ ಮಾಡಿ ಕಾರ್ಯಕರ್ತರ ಜೊತೆ ಪಕ್ಷ ಸಂಘಟನೆಯ್ನ ಮಾಡಿದ್ದೇವೆ. ಹಿಂದಿನಿಂದಲೂ ಎಸ್. ಬಂಗಾರಪ್ಪ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೆ ರಾಜಕಾರಣ ಮಾಡಿದ್ದೇನೆ. ಪಕ್ಷದ ಹೈಕಮಾಂಡ್ ನಿಯೋಜಿತ ಅಭ್ಯರ್ಥಿ ಎಂದು ಹೇಳಿದೆ. ಇತ್ತೀಚಿನ ಬೆಳವಣಿಗೆಯಿಂದ ಕೆಲವರು ಪಕ್ಷದಲ್ಲಿ ಗೊಂದಲ ಸೃಷ್ಠಿಸುತ್ತಿದ್ದಾರೆ. ಇದಕ್ಕೆ ವರಿಷ್ಠರು ಹಾಗೂ ತಾಲೂಕಿನ ಕಾರ್ಯಕರ್ತರು ಕಿವಿಗೊಡಬಾರದು
- ಬಾಸೂರು ಚಂದ್ರೇಗೌಡ
ಸೊರಬ ತಾಲೂಕಿನಲ್ಲಿ ಬಲಿಷ್ಠ ಕೋಮಿನ ವ್ಯಕ್ತಿ ಅಧ್ಯಕ್ಷರಾದರೆ ಪಕ್ಷಕ್ಕೆ ಮತ್ತಷ್ಟುಬಲ ಬರುತ್ತದೆ. ಅಲ್ಲದೇ ಕುಮಾರಸ್ವಾಮಿ ಅವರ ಕೈ ಬಲಪಡಿಸಲು ಸಾಧ್ಯವಾಗುತ್ತಿದೆ. ಇದನ್ನು ಪರಿಗಣಿಸಿ ತಾಲೂಕಿಗೆ ಹುಚ್ಚಪ್ಪ ಚಿಮಣೂರು ಅವರನ್ನು ನೂತನ ಅಧ್ಯಕ್ಷರನ್ನಾಗಿ ವರಿಷ್ಠರು ಮಾಡಿದ್ದಾರೆ
- ಕೆ.ಅಜ್ಜಪ್ಪ, ಹಿರಿಯ ಮುಖಂಡ, ಜೆಡಿಎಸ್
ಸೊರಬ ತಾಲೂಕು ಜೆಡಿಎಸ್‌ನಲ್ಲಿ ಯವುದೇ ಭಿನ್ನಮತವಿಲ್ಲ. ಒಮ್ಮತದಿಂದ ಎಲ್ಲರೂ ಪಕ್ಷ ಸಂಘಟನೆಗೆ ಪಣತೊಟ್ಟಿದ್ದಾರೆ. ಈ ಹಿಂದೆ ಬಾಸೂರು ಚಂದ್ರೇಗೌಡರು ನಿಯೋಜಿತ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗಿ ಮುಂದಿನ ದಿನಗಳಲ್ಲಿ ಯಾರೇ ಅಭ್ಯರ್ಥಿಯಾದರೂ ಗೆಲುವಿಗೆ ಶ್ರಮಿಸಬೇಕು
- ಎನ್. ಕುಮಾರ್, ರಾಜ್ಯ ಕಾರ್ಯದರ್ಶಿ, ಜೆಡಿಎಸ್