Karnataka Assembly Elections 2023: ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ..!

By Kannadaprabha News  |  First Published Apr 9, 2023, 11:30 PM IST

ಕಾಂಗ್ರೆಸ್‌ ಇನ್ನೂ ದೇವರ ಹಿಪ್ಪರಗಿ, ಸಿಂದಗಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಬಾಕಿ ಇದೆ. ಈ ಎರಡು ಕ್ಷೇತ್ರಗಳಲ್ಲಿ ಭಿನ್ನಮತ ಸ್ಫೋಟಗೊಳ್ಳದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ವರಿಷ್ಠರು ಚಿತ್ತ ಹರಿಸಿದ್ದಾರೆ.


ರುದ್ರಪ್ಪ ಆಸಂಗಿ

ವಿಜಯಪುರ(ಏ.09): ಕಾಂಗ್ರೆಸ್‌ ಪಕ್ಷ ಈಗಾಗಲೇ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ 6 ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡುವ ಮೂಲಕ ನಿರಾಳವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಆಂತರಿಕ ಬೇಗುದಿ ಹೆಚ್ಚಿದೆ. ಕಾಂಗ್ರೆಸ್‌ ಇನ್ನೂ ದೇವರ ಹಿಪ್ಪರಗಿ, ಸಿಂದಗಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಬಾಕಿ ಇದೆ. ಈ ಎರಡು ಕ್ಷೇತ್ರಗಳಲ್ಲಿ ಭಿನ್ನಮತ ಸ್ಫೋಟಗೊಳ್ಳದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ವರಿಷ್ಠರು ಚಿತ್ತ ಹರಿಸಿದ್ದಾರೆ.

Tap to resize

Latest Videos

ಕಾಂಗ್ರೆಸ್‌ನಲ್ಲಿ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ ಮೇಲೆ ಭಿನ್ನಮತ ಸ್ಫೋಟಗೊಳ್ಳಲಿಲ್ಲ ಎಂದು ವರಿಷ್ಠರು ಸಮಾಧಾನದ ನಿಟ್ಟುಸಿರು ಬಿಡುವ ಮುನ್ನವೇ ನಾಗಠಾಣ ಟಿಕೆಟ್‌ ಹಂಚಿಕೆಯಲ್ಲಿ ಅಸಮಾಧಾನದ ಹೊಗೆ ಇದೆ ಎಂಬುದನ್ನು ಡಿ.ಜಿ.ಸಾಗರ ಬಣದ ಡಿಎಸ್‌ಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ವಿಜಯಪುರ ನಗರದಲ್ಲಿ ಹಠಾತ್‌ನೇ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಅಸಮಾಧಾನ ಮಡುಗಟ್ಟಿದೆ ಎಂಬ ಸಂದೇಶವನ್ನು ವರಿಷ್ಠರಿಗೆ ರವಾನಿಸಿದ್ದಾರೆ.

'ಬಿಜೆಪಿಗೆ ಕಾಂಗ್ರೆಸ್‌ ಒಂದೇ ಪರ್ಯಾಯವಲ್ಲ'

ವಿಜಯಪುರ ನಗರ ಮತ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ್ದ ಅಬ್ದುಲ್‌ ಹಮೀದ ಮುಶ್ರೀಫ್‌ ಅವರಿಗೇ ಕಾಂಗ್ರೆಸ್‌ ಟಿಕೆಟ್‌ ಫೈನಲ್‌ ಮಾಡಿದೆ. ಈ ಟಿಕೆಟ್‌ ಹಂಚಿಕೆಯಲ್ಲಿಯೂ ಮೇಲ್ನೋಟಕ್ಕೆ ಕಾಂಗ್ರೆಸ್‌ ಪಕ್ಷದಲ್ಲಿ ಅಸಮಾಧಾನ ಇಲ್ಲ ಎನ್ನಬಹುದು. ಆದರೆ 26 ಟಿಕೆಟ್‌ ಆಕಾಂಕ್ಷಿಗಳಿಗೆ ನಿರಾಸೆಯಾಗಿದ್ದು ನಿಚ್ಚಳವಾಗಿದೆ. ನಗರ ಮತಕ್ಷೇತ್ರದ ಟಿಕೆಟ್‌ ಹಂಚಿಕೆ ವಿಚಾರವಾಗಿ ಅಸಮಾಧಾನ ಎಲ್ಲಿಯೂ ಬಹಿರಂಗವಾಗಿ ಕಂಡು ಬಂದಿಲ್ಲ. ಆದರೂ ಚುನಾವಣೆಯಲ್ಲಿ ಇದು ಯಾವ ಸ್ವರೂಪ ಪಡೆಯುತ್ತದೆ ಎಂಬುದನ್ನು ಈಗಲೇ ಹೇಳಲಿಕ್ಕಾಗದು.

ಮಾಜಿ ಶಾಸಕ ಡಾ.ಮಕ್ಬುಲ್‌ ಬಾಗವಾನ ಸೇರಿದಂತೆ 26 ಮಂದಿ ಕಾಂಗ್ರೆಸ್‌ ಟಿಕೆಟ್‌ಗೆ ತೀವ್ರ ಪೈಪೋಟಿ ನಡೆಸಿದ್ದರು. ಆದರೆ ಅಬ್ದುಲ್‌ಹಮೀದ ಮುಶ್ರೀಫ್‌ ಅವರು ಕಳೆದ ಚುನಾವಣೆಯಲ್ಲಿ ಕೇವಲ 6413 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಅವರಿಂದ ಪರಾಭವಗೊಂಡಿದ್ದರು. ಸೋಲು ಅನುಭವಿಸಿದ ನಂತರ ಮನೆಯಲ್ಲಿಯೇ ಕೂರದೇ ಸತತ ಐದು ವರ್ಷಗಳ ಕಾಲ ಪಕ್ಷದ ಕಾರ್ಯಾಲಯದಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಮುಶ್ರೀಫ್‌ ಮತ್ತೆ ಕಾಂಗ್ರೆಸ್‌ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!