ರಾಜಕಾರಣದಲ್ಲಿ ಸೇವಾ ಮನೋಭಾವನೆ ಕಣ್ಮರೆ: ಸಂತೋಷ್‌ ಹೆಗ್ಡೆ ಆತಂಕ

By Kannadaprabha News  |  First Published Jul 3, 2023, 10:03 PM IST

ರಾಜಕಾರಣವನ್ನು ವೃತ್ತಿಯಾಗಿ ಪರಿಗಣಿಸುತ್ತಿರುವುದರಿಂದ ರಾಜಕಾರಣಿಗಳಲ್ಲಿ ಸೇವಾ ಮನೋಭಾವನೆ ಕಣ್ಮರೆಯಾಗುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಆತಂಕ ವ್ಯಕ್ತಪಡಿಸಿದರು. 


ಮಂಡ್ಯ (ಜು.03): ರಾಜಕಾರಣವನ್ನು ವೃತ್ತಿಯಾಗಿ ಪರಿಗಣಿಸುತ್ತಿರುವುದರಿಂದ ರಾಜಕಾರಣಿಗಳಲ್ಲಿ ಸೇವಾ ಮನೋಭಾವನೆ ಕಣ್ಮರೆಯಾಗುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಆತಂಕ ವ್ಯಕ್ತಪಡಿಸಿದರು. ನಗರದ ಗಾಂಧಿ ಭವನದಲ್ಲಿ ಕನ್ನಡ ಸೇನೆ ಕರ್ನಾಟಕದಿಂದ ನಡೆದ ಪ್ರಸ್ತುತ ರಾಜಕೀಯದಲ್ಲಿ ಯುವಜನರ ಪಾತ್ರ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಇಂದು ರಾಜಕೀಯಕ್ಕೆ ಬರುವವರು ಆದಾಯಕ್ಕೆ ಬರುತ್ತಿದ್ದಾರೆಯೇ ಹೊರತು ಸೇವೆ ಎಂಬುದು ಅವರ ಮನಸ್ಸಿನಲ್ಲಿ ಇಲ್ಲ ಎಂದು ವಿಷಾದಿಸಿದರು.

ರಾಜಕೀಯ ಎಂದರೆ ತಮ್ಮ ಹಿತಕ್ಕಿಂತ ದೇಶ, ಜನಸಾಮಾನ್ಯರ ಹಿತಕ್ಕಾಗಿ ಸೇವೆ ಮಾಡುವುದಾಗಿದೆ. ಪ್ರಸ್ತುತ ರಾಜಕೀಯಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬಹುತೇಕರಲ್ಲಿ ಹಣ ಮಾಡುವುದು, ಹಣ ರಕ್ಷಣೆ ಮಾಡಿಕೊಳ್ಳುವುದಾಗಿದೆ. ಸೇವೆ ಎಂಬುದು ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿಂದೆ ಹೆಚ್ಚು ಓದಿ ದೇಶ ಸೇವೆ, ಜನಸೇವೆ ಮಾಡಬೇಕು, ಎಂಜಿನಿಯರ್‌, ವೈದ್ಯರಾಗಬೇಕು ಎನ್ನುವ ಕಾಲ ಇತ್ತು. ಆದರೆ, ಇಂದು ರಾಜಕೀಯಕ್ಕೆ ಬರಬೇಕು ಎಂಬ ವಿಚಾರ ಬಿಟ್ಟು ಬೇರೆ ಯೋಚನೆ ಮಾಡುತ್ತಿಲ್ಲ. ಈ ಭಾವನೆಯನ್ನು ಬದಲಾಯಿಸುವ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕಾಗಿದೆ ಎಂದರು.

Tap to resize

Latest Videos

ಪಶು ಸಂಗೋಪನಾ ಪಾಲಿಟೆಕ್ನಿಕ್‌ಗೆ ಮತ್ತೆ ಪ್ರವೇಶಾವಕಾಶ: ಶಿಕ್ಷಣಕ್ಕೆ ಕಾಳಜಿ ತೋರಿದ ಶಾಸಕ ಗಣೇಶ್‌ ಪ್ರಸಾದ್‌

ಇಂದು 365 ದಿನವೂ ರಾಜಕೀಯ: ಜನರಿಂದ ಆಯ್ಕೆಯಾದ ಪ್ರತಿನಿಧಿಗೆ ಈ ಹಿಂದೆ ಸದನದಲ್ಲಿ ಯಾವುದೇ ಸಂಭಾವನೆ ಇರಲಿಲ್ಲ. ತಮ್ಮ ವೈಯಕ್ತಿಕ ಅನುಭವದಿಂದ ಜನರಿಂದ ವಂತಿಕೆ ಸ್ವೀಕರಿಸುತ್ತಿದ್ದರು. ಕ್ಷೇತ್ರದ ವಂತಿಕೆಯಿಂದ ಊಟ, ವಾಸ್ತವ್ಯದ ವ್ಯವಸ್ಥೆ ಕೂಡ ನಡೆಯುತ್ತಿತ್ತು. ಚುನಾವಣೆ ವೇಳೆ ಮಾತ್ರ ರಾಜಕೀಯ. ಮುಗಿದ ಬಳಿಕ ಅಭಿವೃದ್ಧಿ ಬಗ್ಗೆಯೇ ಚಿಂತನೆ ನಡೆಯುತಿತ್ತು. ಈಗ ವರ್ಷದ 365 ದಿನವೂ ರಾಜಕೀಯ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಡಳಿತ ಪಕ್ಷದವರು ಮಾಡುವ ಕರಾರನ್ನು ವಿಪಕ್ಷದವರು ವಿರೋಧಿಸುತ್ತಾರೆ. ವಿಪಕ್ಷದವರು 5 ವರ್ಷದ ನಂತರ ಆಡಳಿತದ ಚುಕ್ಕಾಣಿ ಹಿಡಿದಾಗ ಅವರೂ ಅದನ್ನೇ ಮುಂದುವರಿಸುತ್ತಾರೆ. 

ಇದನ್ನು ವಿರೋಧಿಸುವುದು, ಸಭಾತ್ಯಾಗ ಮಾಡಿದರೂ ಅಂತಹ ಕರಡನ್ನು ಆಡಳಿತ ಪಕ್ಷದವರು ಜಾರಿ ಮಾಡುತ್ತಾರೆ. ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಯೇ ನಡೆಯುವುದಿಲ್ಲ. ಇಂತಹ ಕಾಲಘಟ್ಟದಲ್ಲಿ ನಾವಿರುವಾಗ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯುತ್ತೇವೆಯೇ ಎಂದು ಪ್ರಶ್ನಿಸಿದರು. ಗಣಿ ಕುರಿತಂತೆ 2012ರಲ್ಲಿ ಮೂವರು ಮುಖ್ಯಮಂತ್ರಿಗಳು, ಹಲವಾರು ಮಂದಿ ಶಾಸಕರು, ಮಂತ್ರಿಗಳ ವಿರುದ್ಧ ವರದಿ ನೀಡಲಾಗಿತ್ತು. ಆಡಳಿತ ಪಕ್ಷದವರು ಅದನ್ನು ಜಾರಿ ಮಾಡದಿದ್ದಾಗ ವಿಪಕ್ಷದವರು ಜಾರಿಗಾಗಿ ಒತ್ತಾಯಿಸಿ ಬೆಂಗಳೂನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದರು. ನಂತರ ಅಧಿಕಾರಕ್ಕೆ ಬಂದಾಗ ಅವರೂ ಅದನ್ನು ಜಾರಿ ಮಾಡಲೇ ಇಲ್ಲ. ಇದು ಸರಿಯೇ ಎಂದು ಪ್ರಶ್ನಿಸಿದರು.

ಎಸಿಬಿ ಬಂದ್‌ ಮಾಡುವಂತೆ ಕೇಳುತ್ತಿದ್ದವರು ಅಧಿಕಾರಕ್ಕೆ ಬಂದು 24 ತಿಂಗಳು ಸಿಎಂ ಆಗಿ ಅಧಿಕಾರ ನಡೆಸಿದರೂ ಬಂದ್‌ ಮಾಡಲಿಲ್ಲ. ಕೊನೆಗೆ ನ್ಯಾಯಾಲಯವೇ ಎಚ್ಚರಿಕೆ ನೀಡಬೇಕಾಯಿತು. ನಂತರ ನಾವು ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಕೊಟ್ಟೆವು ಎಂದು ಬಿಂಬಿಸಿಕೊಂಡರೇ ಹೊರತು ಏನನ್ನೂ ಮಾಡಲಿಲ್ಲ ಎಂದು ಕಿಡಿಕಾರಿದರು. ರಾಜಕೀಯ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಾದರೆ ನಮ್ಮಿಂದ ಮಾತ್ರ ಸಾಧ್ಯ. ಮತದಾರರು ಯಾವ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ಕ್ಷೇತ್ರಕ್ಕೆ ನಿಂತ ವ್ಯಕ್ತಿ ನಮ್ಮ ಹಿತ ಕಾಪಾಡುತ್ತಾನೋ ಇಲ್ಲವೋ ಎಂಬುದನ್ನು ನೋಡಬೇಕು. ಯಾರೂ ಒಳ್ಳೆಯವರಲ್ಲ ಎಂದಾದರೆ ನೋಟಾಕ್ಕೆ ಮತ ಹಾಕಬೇಕು ಎಂದರು.

ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸಬೇಡಿ: ಸಭೆಯಲ್ಲಿ ಶಾಸಕ ಬಾಲಕೃಷ್ಣ ಅಧಿಕಾರಿಗಳಿಗೆ ತಾಕೀತು

ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳು ಬಹಳಷ್ಟು ಹೆಚ್ಚಾಗಬೇಕು. ಜನರಲ್ಲಿ ದೇಶದ ಸೇವೆ ಮಾಡುವಂತಹ ಭಾವನೆ ಮೂಡಿಸುವ ಕಾರ್ಯ ಆಗಬೇಕು. ರಾಜಕೀಯದಲ್ಲಿ ಹಣ ಮಾಡುವುದು, ಅಧಿಕಾರ ಚಲಾಯಿಸುವುದಷ್ಟೇ ಆಗಬಾರದು. ನಮ್ಮ ಪ್ರತಿನಿಧಿಗಳು ಜನರ ಸೇವೆ ಮಾಡಬೇಕು. ನಮಗೂ ಅವರಿಗೂ ಒಂದೇ ಕಾನೂನು ಎಂಬುದನ್ನು ಅರಿತು ನಡೆಯುವವರನ್ನು ಬೆಂಬಲಿಸಬೇಕು ಎಂದರು. ಸಮಾರಂಭದಲ್ಲಿ ವಿಧಾನ ಪರಿಷತ್‌ ಸಭಾಪತಿ ವಿ.ಆರ್‌.ಸುದರ್ಶನ್‌ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್‌.ಕುಮಾರ್‌, ಜಿಲ್ಲಾಧ್ಯಕ್ಷ ಎಚ್‌.ಸಿ.ಮಂಜುನಾಥ್‌, ಮಹಿಳಾಧ್ಯಕ್ಷೆ ಸೌಭಾಗ್ಯ ಶಿವಲಿಂಗು, ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಭಾಗವಹಿಸಿದ್ದರು.

click me!