ನಾನು ರಾಜ್ಯಾಧ್ಯಕ್ಷನಾಗುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇಷ್ಟು ದೊಡ್ಡ ಜವಾಬ್ದಾರಿ ಕೊಡುತ್ತಾರೆ ಎಂದು ನಾನಂತೂ ಅಂದುಕೊಂಡಿರಲಿಲ್ಲ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.
ತುಮಕೂರು (ನ.14): ನಾನು ರಾಜ್ಯಾಧ್ಯಕ್ಷನಾಗುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇಷ್ಟು ದೊಡ್ಡ ಜವಾಬ್ದಾರಿ ಕೊಡುತ್ತಾರೆ ಎಂದು ನಾನಂತೂ ಅಂದುಕೊಂಡಿರಲಿಲ್ಲ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಕ್ತಿಸೌಧ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಇಡೀ ದೇಶದಲ್ಲಿ ಯುವಕರಿಗೆ ಶಕ್ತಿ ತುಂಬಬೇಕು ಎಂಬ ಉದ್ದೇಶದಿಂದ ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ವರಿಷ್ಠರು ಆಯ್ಕೆ ಮಾಡಿದ್ದಾರೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದೆ ನಿಜ. ಈಗ ಆ ಹಿನ್ನಡೆಯ ಕಾರಣದ ಬಗ್ಗೆ ಚರ್ಚೆ ಬೇಡ, ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಪಕ್ಷದ ವರಿಷ್ಠರು, ನಾಯಕರೊಂದಿಗೆ ಚರ್ಚಿಸಿ, ಅವರ ಸಲಹೆ ಮೇರೆಗೆ ಕೆಲಸ ಮಾಡಲಾಗುವುದು ಎಂದರು. ಇಡೀ ದೇಶದ ಜನತೆ ಪ್ರಧಾನಿ ಮೋದಿ ಕಡೆಗೆ ನೋಡುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ನಮ್ಮ ಪಕ್ಷ ಜಯಭೇರಿ ಭಾರಿಸುವ ವಿಶ್ವಾಸ ತಮಗಿದೆ ಎಂದು ಅವರು ತಿಳಿಸಿದರು. ಪಕ್ಷದ ರಾಜ್ಯಾಧ್ಯಕ್ಷನಾಗಿ ಘೋಷಣೆಯಾದ ತಕ್ಷಣವೇ ವಿಧಾನಸಭಾ ಕ್ಷೇತ್ರದ ಬೂತ್ ಅಧ್ಯಕ್ಷರ ಮನೆಗೆ ಭೇಟಿ ಕೊಟ್ಟಿದ್ದೇನೆ. ಇದರೊಂದಿಗೆ ಎಲ್ಲರ ಪ್ರೀತಿ ಉಳಿಸಿಕೊಳ್ಳಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದರು.
undefined
ಬಿಜೆಪಿ ಟೀಕಿಸಲು ಪ್ರಿಯಾಂಕ್ ಖರ್ಗೆಗೆ ನೈತಿಕತೆ ಇಲ್ಲ: ಎಂ.ಪಿ.ರೇಣುಕಾಚಾರ್ಯ
ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಅವರು ರಾಜ್ಯದ ಜನತೆಯಿಂದ ಅಧಿಕಾರ ಪಡೆದ ಕಾಂಗ್ರೆಸ್ ಸರ್ಕಾರ ಕಡಿಮೆ ಅವಧಿಯಲ್ಲಿಯೇ ಜನರ ವಿಶ್ವಾಸ ಕಳೆದುಕೊಂಡಿದೆ. ರಾಜ್ಯದಲ್ಲಿ 6 ತಿಂಗಳು ಕಳೆದ ಬಳಿಕ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಬೇಕು ಎಂದುಕೊಂಡಿದ್ದೇವು. ಆದರೆ ಈ ಸರ್ಕಾರ ನಾವು ಅಂದುಕೊಂಡಿದ್ದಕ್ಕಿಂತ ಮುಂಚಿತವೇ ಜನರ ವಿಶ್ವಾಸದಿಂದ ದೂರವಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಭೀಕರ ಪರಿಸ್ಥಿತಿಯಿದೆ. ಆದರೂ, ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ಇದನ್ನು ಗಮನಿಸಿದರೆ ಇವರಿಗೆ ರಾಜ್ಯದ ಜನರ ಹಿತಕ್ಕಿಂತ ಅಧಿಕಾರವೇ ಮುಖ್ಯ ಎಂಬುದು ಗೊತ್ತಾಗುತ್ತಿದೆ ಎಂದು ಲೇವಡಿ ಮಾಡಿದರು.
ನೂತನ ರಾಜ್ಯಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಬಿ. ಸುರೇಶ್‌ಗೌಡ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಮರ್ಥ ಅಭ್ಯರ್ಥಿ ಯಾರು? ಎಂಬ ಬಗ್ಗೆ ಯೋಚನೆ ಮಾಡುತ್ತಿದ್ದೆವು. ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಶಕ್ತಿ ಬರುತ್ತದೆ ಎಂದೂ ಸಹ ಯೋಚನೆ ಮಾಡಿದ್ದೆವು. ಈಗ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿರುವುದು ನಮಗೆಲ್ಲ ತುಂಬಾ ಸಂತೋಷವಾಗಿದೆ ಎಂದರು.
ವಿಜಯೇಂದ್ರ ಅವರಿಗೆ ಚಿಕ್ಕವಯಸ್ಸಿಗೆ ದೊಡ್ಡ ಜವಾಬ್ದಾರಿ ಬಂದಿದೆ. ಶೀಘ್ರದಲ್ಲೇ ಲೋಕಸಭೆ, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳು ಸೇರಿದಂತೆ ಅವರ ಮುಂದೆ ಸಾಕಷ್ಟು ಸವಾಲುಗಳು ಇವೆ. ಹಳೇ ಮೈಸೂರು ಭಾಗಕ್ಕೆ ಹೆಚ್ಚು ಒತ್ತು ಕೊಟ್ಟು ಪಕ್ಷವನ್ನು ಸಂಘಟಿಸಬೇಕಾಗಿದೆ. ಈ ಭಾಗದಲ್ಲಿ ಒತ್ತು ನೀಡಿದರೆ 30-40 ಜನ ಸೀಟುಗಳು ಗೆಲ್ಲುವ ಸಾಧ್ಯತೆಯಿದೆ. ಪಕ್ಷದಲ್ಲಿ ಎಲ್ಲರೂ ಒಟ್ಟಾಗಿ ಮುಂಬರುವ ಲೋಕಸಭಾ ಚುನಾವಣೆ ಎದುರಿಸೋಣ. ಒಂದು ಸೂಜಿ ಮೊನೆಯಷ್ಟು ಭಿನ್ನಾಭಿಪ್ರಾಯವಿಲ್ಲದೆ ಒಗ್ಗಟ್ಟಾಗಿ ವಿಜಯೇಂದ್ರ ಅವರಿಗೆ ಬೆಂಬಲ ಕೊಡುತ್ತೇವೆ ಎಂದು ಅವರು ತಿಳಿಸಿದರು.
ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ: ಪ್ರಲ್ಹಾದ್ ಜೋಶಿ
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ಮಧುಗಿರಿ ಮಂಡಲ ಅಧ್ಯಕ್ಷ ಬಿ.ಕೆ. ಮಂಜುನಾಥ್, ಮಾಜಿ ಶಾಸಕರಾದ ಪ್ರೀತಂಗೌಡ, ಮಸಾಲೆ ಜಯರಾಮ್, ಮುಖಂಡರಾದ ಗೂಳೂರು ಶಿವಕುಮಾರ್, ನರಸಿಂಹಮೂರ್ತಿ, ಶಂಕರಣ್ಣ, ಸಿದ್ದೇಗೌಡ, ರಾಮಚಂದ್ರಪ್ಪ, ಮೈದಾಳ ಮಂಜುನಾಥ್, ವಿಜಯಣ್ಣ, ಗ್ರಾಮಾಂತರ ತಾಲೂಕು ಉಪಾಧ್ಯಕ್ಷ ಎಂ.ಪಿ.ರಾಜಶೇಖರ್ ಮತ್ತಿತರರು ಭಾಗವಹಿಸಿದ್ದರು. ಗ್ರಾಮಾಂತರ ಕ್ಷೇತ್ರದ ಶಕ್ತಿ ಸೌಧ ಕಚೇರಿಗೆ ಆಗಮಿಸಿದ ಬಿ.ವೈ. ವಿಜಯೇಂದ್ರ ಅವರಿಗೆ ಮಹಿಳೆಯರು ಆರತಿ ಎತ್ತಿ ವಿಶೇಷವಾಗಿ ಬರಮಾಡಿಕೊಂಡರು.