
ಬೆಂಗಳೂರು, (ಜ.28): ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮತ್ತೊಂದು ರಾಜಕೀಯ ತಿಕ್ಕಾಟ ಮುನ್ನೆಲೆಗೆ ಬಂದಿದೆ. ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಶಿಷ್ಯಂದಿರ ಹೇಳಿಕೆಗಳು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಆಕ್ರೋಶದ ಕಟ್ಟೆ ಹೊಡೆದಿದ್ದು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
"
ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಸಿದ್ಧ: ಎಚ್‌ಡಿಕೆ ಬಾಂಬ್
ಮಾಜಿ ಮುಖ್ಯಮುಂತ್ರಿಯನ್ನು ಸಾರ್ವಜನಿಕ ಸಮಾರಂಭಗಳಲ್ಲಿ ಇವರೇ ಸಿಎಂ ಎಂದು ಘಂಟಾಘೋಷವಾಗಿ ಹೇಳುತ್ತಿದ್ದರೆ, ಹಾಲಿ ಮುಖ್ಯಮಂತ್ರಿಗಳಿಗೆ ಹೊಟ್ಟೆ ಉರಿಯದೆ ಇರುತ್ತಾ?.
ಇಂತಹದ್ದೇ ಪ್ರಸಂಗಗಳು ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವುದರಿಂದ ಸಿಎಂ ಕುಮಾರಸ್ವಾಮಿ ಅವರ ಆಕ್ರೊಶಕ್ಕೆ ಕಾರಣವಾಗಿದೆ.
ಅಷ್ಟಕ್ಕೂ ಸಿಎಂ ರಾಜೀನಾಮೆ ಮಾತಿಗೆ ಅಸಲಿ ಕಾರಣ ಅಂದ್ರೆ ಅದು ಸಚಿವರಾದ ಎಂ.ಟಿ.ಬಿ.ನಾಗರಾಜ್, ಪುಟ್ಟರಂಗ ಶೆಟ್ಟಿ ಹಾಗೂ ಶಾಸಕರಾದ ಎಸ್.ಟಿ. ಸೋಮಶೇಖರ್, ಡಾ. ಸುಧಾಕರ್ ಅವರ ಮಾತುಗಳು.
ಸಿಎಂ ‘ರಾಜೀನಾಮೆ' ಎಚ್ಚರಿಕೆ; ಕೈ ಮುಖಂಡನಿಗೆ ನೋಟಿಸ್ ಬಿಸಿ!
ಇವರುಗಳು ಹಾಡಿದ ಒಂದೊಂದು ಮಾತುಗಳು ಬಾಣದ ರೂಪದಲ್ಲಿ ಸಿಎಂ ಕುಮಾರಸ್ವಾಮಿ ಮನಸ್ಸಿಗೆ ಚುಚ್ಚಿವೆ. ಅಷ್ಟಕ್ಕೂ ಸಿದ್ದರಾಮಯ್ಯ ಶಿಷ್ಯಂದಿರು ಹೇಳಿರುವುದಾದರೂ ಏನು ಅಂತೀರಾ?
ಎದೆ ಬಗೆದರೆ ಸಿದ್ದರಾಮಯ್ಯ ಕಾಣಿಸುತ್ತಾರೆ:
''ಹನುಮಂತನ ಎದೆ ಬಗೆದರೆ ಹೇಗೆ ರಾಮ ಕಾಣುತ್ತಾನೋ, ಅದೇ ರೀತಿ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ,'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಸತಿ ಸಚಿವ ಎಂ.ಟಿ.ಬಿ.ನಾಗರಾಜ್ ಗುಣಗಾನ ಮಾಡಿದ್ದರು.
ನಾನು ಸಚಿವನಾಗಬೇಕೆನ್ನುವ ಆಸೆ ಇತ್ತು. ಅದನ್ನು ಸಿದ್ದರಾಮಯ್ಯ ಅವರು ಈಡೇರಿಸಿದ್ದು, ಇವರೇ ನಮಗೆಲ್ಲ ಸಿಎಂ ಎಂದು ನಾಗರಾಜ್ ನಗರದ ಹೊರವಲಯದ ಜಟ್ಟಿಗರಹಳ್ಳಿಯಲ್ಲಿ ಭಾನುವಾರ ಕನಕ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದ್ದರು.
ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ
ಇನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗ ಶೆಟ್ಟಿ ಅವರದ್ದು ಅದೇ ಮಾತುಗಳನ್ನಾಡಿದ್ದಾರೆ. ''ಚಿಕ್ಕಬಳ್ಳಾಪುರದ ಶಾಸಕ ಸುಧಾಕರ್ ಹೇಳಿದಂತೆ, ಯಾರು ಏನೇ ಹೇಳಿದರೂ ನಮಗೆ ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ. ನಮ್ಮ ಕಷ್ಟಗಳು ಏನೇ ಇದ್ದರೂ ನಾವು ಅವರ ಬಳಿಯೇ ಹೇಳಿಕೊಳ್ಳುತ್ತೇವೆ. ಅವರು ಮತ್ತೆ ಸಿಎಂ ಆಗಬೇಕು'' ಎಂದಿದ್ದರು.
ದೌಡ್ಡ ಗೌಡ್ರಿಗೆ ಕಾಂಟ್ ಕೊಟ್ಟ ಎಚ್.ಎಂ.ರೇವಣ್ಣ
ಸಿದ್ದರಾಮಯ್ಯ ಅವರ ಆಪ್ತರಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ಸಹ ಎಚ್.ಡಿ.ದೇವೇಗೌಡ ಕುಟುಂಬಕ್ಕೆ ಟಾಂಗ್ ಕೊಟ್ಟಿದ್ದಾರೆ.
ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ಯಾವ ಮಣ್ಣಿನ ಮಕ್ಕಳು ರಚನೆ ಮಾಡಿಲ್ಲ. ಸಿದ್ದರಾಮಯ್ಯ ಅವರೇ ಮಾಡಿದ್ದಾರೆ ಎಂದು ಹೇಳುವ ಮೂಲಕ ಮಣ್ಣಿನ ಮಗ ಎಂದೇ ಬಿಂಬಿತರಾಗಿರುವ ದೇವೇಗೌಡರನ್ನು ಕಿಚಾಯಿಸಿದ್ದರು.
ಸಿದ್ದರಾಮಯ್ಯ ನಮ್ಮ ಮುಖಂಡ ಎಂದಿದ್ದ ಸೋಮಶೇಖರ್
ಸಿದ್ದರಾಮಯ್ಯ ನಮ್ಮ ಮುಖಂಡ ಎಂದಿದ್ದ ಸೋಮಶೇಖರ್ ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅವರು ಸಹ, 'ಸಿದ್ದರಾಮಯ್ಯ ಅವರು ಮಾತ್ರವೇ ಎಂದಿಗೂ ನಮ್ಮ ನಾಯಕರು. ಬೆಂಗಳೂರಿನ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ.
ಈಗಿನ ಮೈತ್ರಿ ಸರ್ಕಾರ ಏಳು ತಿಂಗಳು ಪೂರೈಸಿದರೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರು ಸೋಲಲು ಕೆಲವರ ಪಿತೂರಿಯೇ ಕಾರಣ' ಎಂದು ಅವರು ದೂರಿದ್ದರು.
ಇಷ್ಟೇ ಅಲ್ಲದೇ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಕೂಡ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ, ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿಗಳು ಎಂದು ಹೇಳಿಕೆ ಕೊಟ್ಟಿದ್ದರು.
ಹೀಗೇ ಸಿದ್ದರಾಮಯ್ಯ ಆಪ್ತರ ಹೇಳಿಕೆಗಳಿಗೆ ಕೆಂಡಾಮಂಡಲವಾಗಿರುವ ಎಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರು ಅವರ ಪಕ್ಷದ ಶಾಸಕರು ಅಸಂಬದ್ಧ ಹೇಳಿಕೆಗಳನ್ನು ನೀಡುವುದನ್ನು ನಿಯಂತ್ರಿಸದೆ ಇದ್ದರೆ, ನಾನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಸಿದ್ಧ ಎಂದು ಹೇಳಿರುವುದಕ್ಕೆ ಪ್ರಮುಖ ಕಾರಣವಾಗಿದೆ.
ಒಟ್ಟಿನಲ್ಲಿ ಕಾಂಗ್ರೆಸ್‌ನ ಕೆಲ ನಾಯಕರುಗಳು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಎಂದು ಬಹಿರಂಗವಾಗಿ ಹೇಳಿಕೊಡುತ್ತಿರುವುದು ಕುಮಾರಸ್ವಾಮಿ ಕಣ್ಣು ಕೆಂಪಾಗಿಸಿದಂತೂ ಸತ್ಯ.
ಇವುಗಳೆಲ್ಲವನ್ನು ಸಹಿಸಿಕೊಳ್ಳಲಾದೆ ಕುಮಾರಸ್ವಾಮಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.