ಇಂದಿಗೂ ಕಾಂಗ್ರೆಸ್‌ನಲ್ಲಿ ಸರ್ವಾಧಿಕಾರಿ ಮನಸ್ಥಿತಿ: ಸಂಸದ ಡಾ.ಕೆ.ಸುಧಾಕರ್

Kannadaprabha News   | Kannada Prabha
Published : Jun 29, 2025, 05:17 PM IST
Dr K Sudhakar

ಸಾರಾಂಶ

ರಾಜಕಾರಣವೇ ಆಗಲಿ, ಸಾಮಾನ್ಯ ಜೀವನವೇ ಆಗಲಿ ಯಾರಾದರೂ ಅನ್ಯಾಯ ಮಾಡಿದರೆ ಕ್ಷಮಿಸಬಹುದು. ಆದರೆ ದೇಶಕ್ಕೆ ಮಾಡಿದ ಘನಘೋರ ಅನ್ಯಾಯವನ್ನು ಯಾರೂ ಮರೆಯಬಾರದು ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.

ಚಿಕ್ಕಬಳ್ಳಾಪುರ (ಜೂ.29): ರಾಜಕಾರಣವೇ ಆಗಲಿ, ಸಾಮಾನ್ಯ ಜೀವನವೇ ಆಗಲಿ ಯಾರಾದರೂ ಅನ್ಯಾಯ ಮಾಡಿದರೆ ಕ್ಷಮಿಸಬಹುದು. ಆದರೆ ದೇಶಕ್ಕೆ ಮಾಡಿದ ಘನಘೋರ ಅನ್ಯಾಯವನ್ನು ಯಾರೂ ಮರೆಯಬಾರದು. ಅದನ್ನು ನಮ್ಮ ಮುಂದಿನ ಪೀಳಿಗೆಗೂ ತಿಳಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು. ನಗರದ ವಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕ ಶನಿವಾರ ಏರ್ಪಡಿಸಿದ್ದ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 5ಂ ವರ್ಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನದ ಕಗ್ಗೊಲೆ ಮಾಡಿದ ದಿನ: ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿ, ಜನರ ಹಕ್ಕುಗಳನ್ನು ದಮನ ಮಾಡಿ ಆಡಳಿತ ನಡೆಸಿದ ಇಂದಿರಾ ಗಾಂಧಿರವರು 1975ರ ಜೂನ್ 25ರ ಮದ್ಯರಾತ್ರಿ ಯಂದು ತುರ್ತು ಪರಿಸ್ಥಿತಿ ಹೇರಿದ್ದು, ಸಂವಿಧಾನವನ್ನು ಕಗ್ಗೊಲೆ ಮಾಡಿದ ದಿನವಾಗಿದೆ. ಇಂದಿರಾ ಗಾಂಧಿರವರು ಸಂವಿಧಾನಕ್ಕೆ ಬೀಗ ಹಾಕಿ, ರಾಷ್ಟ್ರವನ್ನು ಕತ್ತಲೆಗೆ ದೂಡಿ ಸರ್ವಾಧಿಕಾರಿ ಆಡಳಿತ ನಡೆಸಿದ್ದರು. ಹೀಗಿರುವಾಗ ಕಾಂಗ್ರೆಸ್‌ ನಾಯಕರಿಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಭಾರತದಲ್ಲಿ ಆ ಸಮಯದಲ್ಲಿ ಹಣಕಾಸಿನ ಮುಗ್ಗಟ್ಟು ಇರಲಿಲ್ಲ, ರಾಜ್ಯ- ರಾಜ್ಯಗಳ ನಡುವೆ ಯಾವುದೇ ವ್ಯಾಜ್ಯವೂ ಇರಲಿಲ್ಲ. ಯುದ್ದ ಪರಿಸ್ಥಿತಿ ಅಥವಾ ಬಾಹ್ಯ ಆಕ್ರಮಣವೂ ಇರಲಿಲ್ಲ. ಆದರೂ ಇಂದಿರಾರವರು ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ತುರ್ತು ಪರಿಸ್ಥಿತಿ ಹೇರಿದರು. ಇಂದಿಗೂ ಕಾಂಗ್ರೆಸ್ ನಾಯಕರು ಸರ್ವಾಧಿಕಾರ ಮನಸ್ಥಿತಿಯಿಂದ ಹೊರ ಬಂದಿಲ್ಲ ಎಂದರು.

ಕಾಂಗ್ರೆಸ್‌ ಕ್ಷಮೆ ಯಾಚಿಸಲಿ: 1971ರಲ್ಲಿ ನಡೆದ ಚುನಾವಣೆಯಲ್ಲಿ ರಾಯಬರೇಲಿಯಲ್ಲಿ ಇಂದಿರಾ ಗಾಂಧಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಲಹಾಬಾದ್ ನ್ಯಾಯಾಲಯ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ ಷರತ್ತುಬದ್ಧ ತಡೆ ನೀಡಿತು. ಆದರೂ ಸಹ ಜೂ. 25ರಂದು ತಡರಾತ್ರಿ ರಾಷ್ಟ್ರಪತಿಗಳಾಗಿದ್ದ ಫಕ್ರುದ್ದೀನ್ ಆಲಿ ಅಹ್ಮದ್ ಅವರು ಮಲಗಿದ್ದರೆ ಅವರನ್ನು ನಿದ್ದೆಯಿಂದ ಎಬ್ಬಿಸಿದ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಆದೇಶಕ್ಕೆ ಅವರ ಅಂಕಿತ ಹಾಕಿಸಿ ದೇಶಕ್ಕೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು. ಎಂದು ತಿಳಿಸಿದರು. ಸಂವಿಧಾನದ ರಕ್ಷಕರಂತೆ ವರ್ತಿಸುತ್ತಿರುವ ಕಾಂಗ್ರೆಸಿಗರು ಇಂದಿರಾಗಾಂಧಿ ಮಾಡಿದ ತಪ್ಪಿಗೆ ಇದುವರೆಗೂ ಕ್ಷಮೆಯಾಚನೆ ಮಾಡಲ್ಲ ಎಂದರು.

ಕರಾಳ ಅಧ್ಯಾಯ ಮರೆಯಬೇಡಿ: ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, ತುರ್ತು ಪರಿಸ್ಥಿತಿಯನ್ನು ನಾವು ಮರೆತರೆ ಆ ಕರಾಳ ಅಧ್ಯಾಯ ಮತ್ತೊಮ್ಮೆ ಪುನರಾವರ್ತನೆಯಾಗುವ ಅಪಾಯವಿದೆ. ಕಾಂಗ್ರೆಸ್‌ನ ಅಂದಿನ ಮನಸ್ಥಿತಿ ಇಂದಿಗೂ ಬದಲಾಗಿಲ್ಲ. ಆ ಪಕ್ಷಕ್ಕೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆಯೂ ಇಲ್ಲ, ಆದ್ದರಿಂದ ನಾವೆಲ್ಲರೂ ಜಾಗೃತರಾಗಿದ್ದರೆ ಮಾತ್ರ ಸಂವಿಧಾನ ಉಳಿಸಲು ಸಾಧ್ಯ ಎಂದು ಹೇಳಿದರು. ಈ ವೇಳೆ ಮಾಜಿ ಸಚಿವ ಹಾಗೂ ರಾಜಾಜಿ ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಸುರೇಶ್ ಕುಮಾರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಮಾಜಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮುಖಂಡರಾದ ಪಿ.ಎನ್.ಕೇಶವರೆಡ್ಡಿ, ಕೆ.ವಿ.ನಾಗರಾಜ್, ವೇಣುಗೋಪಾಲ್, ಡಾ.ಶಶಿಧರ್ ಮತ್ತಿತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!