
ಮೈಸೂರು (ಜೂ.29): ಬಿಜೆಪಿಗರಿಂದ ದೇಶದಲ್ಲಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ತುರ್ತು ಪರಿಸ್ಥಿತಿಯ ಜಾರಿ ಆಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಧಿಕಾರಕ್ಕೆ ಬಂದ ದಿನದಿಂದಲೂ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣವಿದ್ದು, ಇದು ದೇಶದ ಅಂತರ್ ಶಕ್ತಿಯನ್ನು ಕುಂದಿಸುವಂತಹ ಕೆಲಸ ಮಾಡುತ್ತಿದೆ.
ಸಂವಿಧಾನಾತ್ಮಕವಾದ ಸ್ವತಂತ್ರ ಸಂಸ್ಥೆಗಳನ್ನು ನಿಯಂತ್ರಣಕ್ಕೆ ಪಡೆದು ವಿರೋಧ ಪಕ್ಷಗಳ ಮೇಲೆ ರಾಜಕೀಯ ಪ್ರೇರಿತ ದಾಳಿ ಮಾಡಲು ಬಳಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರವು ಸ್ವತಂತ್ರ ಸಂಸ್ಥೆಗಳನ್ನು ಸರ್ವಾಧಿಕಾರದಿಂದ ನಿಯಂತ್ರಿಸುವ ಮೂಲಕ ದೇಶದ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ. ಉತ್ತಮ ಆಡಳಿತಕ್ಕಾಗಿ ಯಾರಾದರೂ ಸಲಹೆ ನೀಡಿದರೆ ಅಥವಾ ವಿಮರ್ಶೆ ಮಾಡಿದರೆ ಅವರನ್ನು ವ್ಯವಸ್ಥಿತವಾಗಿ ಹಣಿಯುವಂತಹ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸುತ್ತಾ ಬಂದಿದೆ.
ರಾಜಕೀಯ ಎದುರಾಳಿಗಳನ್ನು ಐಟಿ, ಇಡಿ, ಸಿಬಿಐ ಅಂತಹ ತನಿಖಾ ಸಂಸ್ಥೆಗಳ ಮೂಲಕ ನಿರಂತರವಾಗಿ ನಿಯಂತ್ರಿಸುತ್ತಿರುವ ಕೇಂದ್ರ ಸರ್ಕಾರವು ಈ ದೇಶದಲ್ಲಿ ಅಘೋಷಿತ ರಾಜಕೀಯ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ್ದು, ಇನ್ನೊಂದೆಡೆ ಸಾಮಾಜಿಕ ಅಸಮಾನತೆಯನ್ನು ಉತ್ತೇಜಿಸುವಂತಹ ಆರ್ ಎಸ್ಎಸ್ ನಡವಳಿಕೆಗಳನ್ನು ನಿಯಂತ್ರಿಸದೇ ಸಾಮಾಜಿಕ ತುರ್ತು ಪರಿಸ್ಥಿತಿಯನ್ನು ಜಾರಿ ಮಾಡಿದೆ ಎಂದು ಆರೋಪಿಸಿದ್ದಾರೆ. ಇನ್ನು ರಾಜ್ಯ ಸರ್ಕಾರಕ್ಕೆ ಬರಬೇಕಾದ ನ್ಯಾಯಬದ್ಧವಾದ ತೆರಿಗೆ ಪಾಲನ್ನು ನೀಡದೇ ಸತಾಯಿಸುತ್ತಿರುವ ಕೇಂದ್ರ ಸರ್ಕಾರವು ನಾಡಿನ ಜನ ಮತ್ತು ಅವರ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಾಣಿಸಿದ್ದು, ದೇಶದ ಸಂಪತ್ತನ್ನು ತಮ್ಮ ಕಾರ್ಪೊರೇಟ್ ಸ್ನೇಹಿತರ ನಿಯಂತ್ರಣಕ್ಕೆ ಒಪ್ಪಿಸಿ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಜನರ ಮೇಲೆ ಹೇರಿದೆ ಎಂದು ದೂರಿದ್ದಾರೆ.
ದೇಶದಲ್ಲಿ ಸಂವಿಧಾನಾತ್ಮಕವಾಗಿ ಇರುವಂತಹ ಭಾವೈಕ್ಯತೆ, ಜಾತ್ಯಾತೀತತೆ ಮತ್ತು ಸಮಾನತೆಯ ತತ್ವಗಳನ್ನು ಗಾಳಿಗೆ ತೂರಿ ಸ್ವಾತಂತ್ರ್ಯದ ಮಹಾನ್ ಉದ್ದೇಶಗಳನ್ನು ಗಣನೆಗೇ ತೆಗೆದುಕೊಳ್ಳದೇ ಏಕಮುಖವಾಗಿ ವರ್ತಿಸುತ್ತಿರುವ ಕೇಂದ್ರ ಸರ್ಕಾರವು ತನ್ನ ಅರಾಜಕ ಪ್ರವೃತ್ತಿಯ ಮೂಲಕ ದೇಶದಲ್ಲಿ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ತುರ್ತು ಪರಿಸ್ಥಿತಿಯನ್ನು ಹೇರಿದ್ದು, ಇದು ದೇಶದ ಆತ್ಮವಾದ ಸಂವಿಧಾನದ ಆಶಯಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.