ಎಲೆಕ್ಷನ್‌ಗೆ ನಿಲ್ಬಹುದು, ಕ್ಷೇತ್ರಕ್ಕೆ ಹೋಗೋ ಹಾಗಿಲ್ಲ: ವಿನಯ್‌ ಕುಲಕರ್ಣಿಗೆ ಕೋರ್ಟ್‌ ಶಾಕ್‌!

By Santosh Naik  |  First Published Apr 18, 2023, 1:57 PM IST

ಧಾರವಾಡ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಲಕರ್ಣಿಗೆ, ಜನಪ್ರತಿನಿಧಿ ನ್ಯಾಯಾಲಯ ಶಾಕ್‌ ನೀಡಿದೆ. ಇದರಿಂದಾಗಿ ಕ್ಷೇತ್ರದಲ್ಲಿ ಚುನಾವಣೆಗೆ ನಿಂತರೂ, ಧಾರವಾಡ ಜಿಲ್ಲೆಗೆ ಅವರು ಹೊಕ್ಕುವಂತಿಲ್ಲ ಎಂದು ಮಂಗಳವಾರ ತೀರ್ಪು ನೀಡಿದೆ.


ಬೆಂಗಳೂರು (ಏ.18): ಬಿಜೆಪಿ ಮುಖಂಡ ಹಾಗೂ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಯೋಗೀಶ್‌ ಗೌಡ ಹತ್ಯೆ ಪ್ರಕರಣದ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ ಗೆ ಕೋರ್ಟ್‌ ಆಘಾತ ನೀಡಿದೆ. ಧಾರವಾಡ ಜಿಲ್ಲೆ ಪ್ರವೇಶಕ್ಕೆ ಅನುಮತಿ ಕೋರಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಕಲಾಗಿದ್ದ ಅರ್ಜಿ ವಜಾಗೊಂಡಿದೆ. ಚುನಾವಣೆಗೆ ಸ್ಪರ್ಧೆ ಮಾಡಿದ್ದು ಧಾರವಾಡ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ವಿನಯ್ ಕುಲಕರ್ಣಿಗೆ ಜಿಲ್ಲೆಗೆ ಪ್ರವೇಶಿಸಲು ಅನುಮತಿ ನಿರಾಕರಿಸಿದೆ. ವಿನಯ್‌ ಕುಲಕರ್ಣಿ ಧಾರವಾಡ ಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ನಿರ್ಭಂದ ಹೇರಿತ್ತು. ಚುನಾವಣೆ ಸ್ಪರ್ಧೆಯ ಕಾರಣದಿಂದ ಷರತ್ತು ಸಡಿಲಿಸಲು ಅವಕಾಶ ಕೋರಲಾಗಿತ್ತು. ಆದರೆ, ಷರತ್ತು ಸಡಿಲಿಸಲುಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಪ್ಪಿಲ್ಲ. ನ್ಯಾ.ಜಯಂತ್ ಕುಮಾರ್ ಅವರು ಮಂಗಳವಾರ ಈ ಆದೇಶ ನೀಡಿದ್ದಾರೆ.

ಸಿಬಿಐ ಪರ ವಾದ ಏನಿತ್ತು: ಇಡೀ ಪ್ರಕರಣದ 120 ಸಾಕ್ಷಿಗಳ ಪೈಕಿ 90 ಮಂದಿ ಧಾರವಾಡದವರೇ ಆಗಿದ್ದಾರೆ. ಹಾಗೇನಾದರೂ ವಿನಯ್‌ ಕುಲಕರ್ಣಿಗೆ ಕ್ಷೇತ್ರಕ್ಕೆ ಪ್ರವೇಶ ನೀಡಿದರೆ, ಆದೇಶ ದುರುಪಯೋಗ ಆಗಬಹುದು. ಮುಂದಿನ ಹಂತದಲ್ಲಿ ಕೇಸ್‌ಗೆ ಸಮಸ್ಯೆ ಕೂಡ ಆಗಬಹುದು. ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂದು ಸಿಬಿಐ ವಾದ ಮಾಡಿತ್ತು. ಸಿಬಿಐ ವಾದ ಪುರಸ್ಕರಿಸಿದ ಕೋರ್ಟ್‌, ವಿನಯ್ ಕುಲಕರ್ಣಿ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.

ಯೋಗೇಶ್‌ ಗೌಡ ಕೊಲೆ ಪ್ರಕರಣದ ಆರೋಪಿ ವಿನಯ್‌ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಜಾಮೀನು ನೀಡುವಾಗ ಧಾರವಾಡ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್‌ ಷರತ್ತು ವಿಧಿಸಿತ್ತು. ಏಪ್ರಿಲ್‌ 15 ರಂದು ವಿನಯ್‌ ಕುಲಕರ್ಣಿ ಅವರ ಅರ್ಜಿಯ ವಿಚಾರಣೆಯನ್ನು ಪೂರ್ಣ ಮಾಡಿದ್ದ ಕೋರ್ಟ್‌, ಏಪ್ರಿಲ್‌ 18ಕ್ಕೆ ತೀರ್ಪು ಕಾಯ್ದಿರಿಸಿತ್ತು.
 

click me!