* ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ
* ಜೂ.13 ರಂದು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಮತದಾನಕ್ಕೆ ಅವಕಾಶ
* ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾಹಿತಿ
ಧಾರವಾಡ, (ಜೂನ್.11): ಭಾರತ ಚುನಾವಣಾ ಆಯೋಗವು ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ದಿನಾಂಕ: 13-06-2022 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಜರುಗಲಿದ್ದು, ಸದರಿ ಮತದಾನಕ್ಕೆ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಧಾರವಾಡ ಜಿಲ್ಲೆಯಲ್ಲಿ 3450 ಪುರುಷ ಮತ್ತು 2995 ಮಹಿಳಾ ಮತದಾರರು ಸೇರಿ ಒಟ್ಟು 6445 ಮತದಾರರಿದ್ದಾರೆ . ಜಿಲ್ಲೆಯಲ್ಲಿ ಒಟ್ಟು 21 ಮತಗಟ್ಟೆಗಳಿದ್ದು, ಈ ಎಲ್ಲ ಮತಗಟ್ಟೆಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಕೋವಿಡ್-19 ಹಿನ್ನಲೆಯಲ್ಲಿ ಎಲ್ಲ ಮತಗಟ್ಟೆಗಳಿಗೆ ಕೋವಿಡ್ ಮಾರ್ಗಸೂಚಿಯಂತೆ ಸ್ಯಾನಿಟೈಸರ್, ಪಲ್ಸ್ಆಕ್ಸಿಮೀಟರ್, ಥರ್ಮಾಮೀಟರ್ ಗಳನ್ನು ಆರೋಗ್ಯ ಇಲಾಖೆಯಿಂದ ಒದಗಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಸಿಬ್ಬಂದಿಗಳೊಂದಿಗೆ ಮೈಕ್ರೋ ಆಬ್ಸರ್ವರ್, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ಬಿಎಲ್‌ಓ ಅವರನ್ನು ಸೇವೆಗೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪರಿಷತ್ ಕ್ಷೇತ್ರ ಸಮೀಕ್ಷೆ: ಪಶ್ಚಿಮದಲ್ಲಿ ಗುರು-ಶಿಷ್ಯರ ಕಾಳಗ!
ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಸ್ಥಾಪಿಸಲಾಗಿರುವ ಒಟ್ಟು 21 ಮತಗಟ್ಟೆಗಳ ಪೈಕಿ 10 ಸೂಕ್ಷ್ಮ ಮತಗಟ್ಟೆಗಳು ಹಾಗೂ 3 ಅತೀ ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲಾಗಿದೆ. ಮತ್ತು ಒಟ್ಟು 21 ಮತಗಟ್ಟೆಗಳ ಪೈಕಿ 11 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್, 02 ಮತಗಟ್ಟೆಗಳಲ್ಲಿ ವಿಡಿಯೋಗ್ರಾಫಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 13 ಜನ ವಿಶೇಷಚೇತನ (ಪಿ.ಡಬ್ಲೂ ಡಿ) ಮತದಾರರಿದ್ದು, ಅಂತಹ ಮತದಾರರಿರುವ ಮತಗಟ್ಟೆಗಳಲ್ಲಿ ಮತದಾನ ಮಾಡಲು ಅವರಿಗೆ ಅನುಕೂಲವಾಗುವಂತೆ ವೀಲ್‌ಚೇರ್ ಪೂರೈಸಲು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮತದಾನಕ್ಕೆ ಗುರುತಿನ ಚೀಟಿ: ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಮತದಾನ ದಿನದಂದು ಅರ್ಹ ಮತದಾರರು ತಮ್ಮ ಮತವನ್ನು ಚಲಾಯಿಸಲು ಚುನಾವಣಾ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗ ನಿಗದಿಪಡಿಸಿರುವ ದಾಖಲೆಗಳನ್ನು ಸಹ ಬಳಸಿ ಮತ ಚಲಾಯಿಸಬಹುದು ಎಂದಿದ್ದಾರೆ.
ಆಧಾರ ಗುರುತಿನ ಚೀಟಿ, ವಾಹನ ಚಾಲನಾಪತ್ರ, ಪ್ಯಾನ್ ಕಾರ್ಡ್, ಇಂಡಿಯನ್ ಪಾಸ್‌ಪೊರ್ಟ, ಸೇವಾ ಗುರುತಿನ ಪತ್ರ, ಎಂ.ಪಿ.,ಎಂ.ಎಲ್.ಎ.,ಎಂ.ಎಲ್.ಸಿ ಕಚೇರಿ ಗುರುತಿನಪತ್ರ, ಅರ್ಹ ಮತದಾರರಾಗಿರುವ ಶಿಕ್ಷಕರಿಗೆ ಅವರ ಶೈಕ್ಷಣಿಕ ಸಂಸ್ಥೆಗಳು ನೀಡಿರುವ ಸೇವಾ ಗುರುತಿನಪತ್ರ, ವಿಶ್ವವಿದ್ಯಾಲಯಗಳು ನೀಡಿರುವ ಪದವಿ, ಡಿಪ್ಲೊಮಾ ಪ್ರಮಾಣಪತ್ರಗಳ ಮೂಲಪ್ರತಿ ಹಾಗೂ ಸಕ್ಷಮ ಪ್ರಾಧಿಕಾರ ನೀಡಿರುವ ದೈಹಿಕ ಅಂಗವಿಕಲ ಪ್ರಮಾಣಪತ್ರವನ್ನು ಮತಗಟ್ಟ ಅಧಿಕಾರಿಗಳಿಗೆ ತೊರಿಸಿ, ಮತ ಚಲಾಯಿಸಬಹುದು ಭಾರತ ಚುನಾವಾಣಾ ಆಯೋಗ ನೀಡಿರುವ ನಿರ್ದೆಶನದಂತೆ ಜಿಲ್ಲೆಯಲ್ಲಿ ಚುನಾವಣಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಅರ್ಹ ಶಿಕ್ಷಕ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಜೂ.13 ರಂದು ವಿಶೇಷ ಸಾಂದರ್ಭಿಕ ರಜೆ ನೀಡಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.