ಸವದಿಗೆ ಎಲ್ಲಾ ಅವಕಾಶ, ಗೌರವ ನೀಡಿದ್ದೆವು. ಸೋತರೂ ಅವರ ಸೇವೆ ಪರಿಗಣಿಸಿ ಡಿಸಿಎಂ ಮಾಡಿದ್ದೇವು. ಆದರೆ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಜಗದೀಶ ಶೆಟ್ಟರ್ ರಾಜೀನಾಮೆ ನಿರ್ಧಾರ ವಿಚಾರ ಎಲ್ಲವೂ ಪಕ್ಷದ ಗಮನದಲ್ಲಿದೆ. ಬಿಜೆಪಿ ಈ ಬಾರಿ ಸ್ಪಷ್ಟಬಹುಮತದಿಂದ ಸರ್ಕಾರ ರಚಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಧರ್ಮೇಂದ್ರ ಪ್ರಧಾನ್
ಬೆಳಗಾವಿ(ಏ.16): ಬೆಳಗಾವಿ ಬಿಜೆಪಿಯಲ್ಲಿನ ಬಂಡಾಯ ಶಮನಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದ ನಾಯಕರ ತಂಡ ಟಿಕೆಟ್ ವಂಚಿತ ಶಾಸಕರು, ಆಕಾಂಕ್ಷಿಗಳ ಜೊತೆಗೆ ಸಭೆ ನಡೆಸಿದರು. ಆದರೆ, ಇಲ್ಲಿ ಯಾವುದೇ ಭರವಸೆ ನೀಡದೇ ಇರುವುದು ಬಿಜೆಪಿಯಲ್ಲಿನ ಬಂಡಾಯಕ್ಕೆ ಮತ್ತಷ್ಟು ಕಿಚ್ಚು ಹೆಚ್ಚಿಸುವಂತೆ ಮಾಡಿದ್ದು, ಟಿಕೆಟ್ ವಂಚಿತರ ಮನವೊಲಿಕೆಗೆ ಯತ್ನಿಸಿದ ಪ್ರಯತ್ನ ಫಲಕೊಡಲಿಲ್ಲ.
ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಹೈಕಮಾಂಡ್ ಸೂಚನೆ ಮೇರೆಗೆ ಭಿನ್ನಮತ ಶಮನಕ್ಕೆ ಧರ್ಮೇಂದ್ರ ಪ್ರಧಾನ, ಖಾಗೇಶ್ವರ ಶೂ, ಡಾ.ಮನ್ಸೂಕ್ ಮಾಡ್ವಿಯಾ, ನಂದೀಶ ಪೀಟಾಣಿ, ಉಸ್ಮಾನಿ ಸೇರಿ ಐವರು ಬೆಳಗಾವಿಗೆ ಆಗಮಿಸಿದ್ದರು. ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ಯಮಕನಮರಡಿ ಟಿಕೆಟ್ ಆಕಾಂಕ್ಷಿಯಾದ ಮಾರುತಿ ಅಷ್ಟಗಿ, ಶಾಸಕ ಅಭಯ ಪಾಟೀಲ, ಪ್ರಭಾಕರ ಕೋರೆ, ಸಂಸದೆ ಮಂಗಲ ಅಂಗಡಿ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.ಪ್ರಧಾನ ಮಾತನಾಡಿ, ಸವದಿಗೆ ಎಲ್ಲಾ ಅವಕಾಶ, ಗೌರವ ನೀಡಿದ್ದೆವು. ಸೋತರೂ ಅವರ ಸೇವೆ ಪರಿಗಣಿಸಿ ಡಿಸಿಎಂ ಮಾಡಿದ್ದೇವು. ಆದರೆ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಜಗದೀಶ ಶೆಟ್ಟರ್ ರಾಜೀನಾಮೆ ನಿರ್ಧಾರ ವಿಚಾರ ಎಲ್ಲವೂ ಪಕ್ಷದ ಗಮನದಲ್ಲಿದೆ. ಬಿಜೆಪಿ ಈ ಬಾರಿ ಸ್ಪಷ್ಟಬಹುಮತದಿಂದ ಸರ್ಕಾರ ರಚಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶೆಟ್ಟರ್ ಬಳಿಕ ಈ ಇಬ್ಬರೂ ನಾಯಕರಿಗೆ ಬಿಜೆಪಿ ಟಿಕೆಟ್ ಸಿಗೋದು ಡೌಟು?
ಸಭೆಯಲ್ಲಿ ಯಾವುದೇ ಭರವಸೆ ನೀಡಿಲ್ಲ. ಆದಾಗ್ಯೂ ಎರಡು ದಿನ ನಾನು ಕಾಯ್ದುನೋಡಿ, ಪಕ್ಷಕ್ಕೆ ರಾಜೀನಾಮೆ ನೀಡುವ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಯಮಕನಮರಡಿ ಟಿಕೆಟ್ ವಂಚಿತ ಮಾರುತಿ ಅಷ್ಟಗಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.