ಹಾನಗಲ್ಲ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ ಕಾರಣದಿಂದಾಗಿ ಹಾಳಾದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ 15 ಕೋಟಿ ಅನುದಾನ ಬಿಡುಗಡೆಗೊಳಿಸಿದ ಬಿಜೆಪಿ ನೇತೃತ್ವದ ರಾಜ್ಯ ಸರಕಾರ
ಹಾನಗಲ್ಲ(ಸೆ.14): ಹಾನಗಲ್ಲ ವಿಧಾನಸಭಾ ಕ್ಷೇತ್ರಕ್ಕೆ ಅತಿವೃಷ್ಟಿ ಹಾನಿಯಾದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರಕಾರ ನೀಡಿದ 15 ಕೋಟಿ ವಿಶೇಷ ಅನುದಾನದ ಕಾಮಗಾರಿ ಸ್ಥಗಿತಗೊಳ್ಳುವ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಟ್ಸಾಪ್ ಸಮರ ಆರಂಭವಾಗಿದೆ.
ಹಾನಗಲ್ಲ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ ಕಾರಣದಿಂದಾಗಿ ಹಾಳಾದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರ 15 ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ಶಾಸಕ ಶ್ರೀನಿವಾಸ ಮಾನೆ ಹಾನಿಗೊಳಗಾದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 293 ಕಾಮಗಾರಿಗೆ ತುಂಡು ಗುತ್ತಿಗೆ ಮೇಲೆ ಹಣ ನೀಡಿದ್ದಾರೆ ಎನ್ನಲಾಗಿದೆ. ಆದರೆ ಹಾವೇರಿ ಜಿಲ್ಲಾ ಪಂಚಾಯಿತಿ ಕಾರ್ಯಾಲಯ ಅನುಮೋದನೆಗೊಂಡ ಈ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಮುಂದಿನ ಆದೇಶದವರೆಗೂ ಅನುಷ್ಠಾನಗೊಳಿಸದಂತೆ ನಿರ್ದೇಶಿಸಿದೆ. ಈ ಕಾರಣದಿಂದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಟ್ಸಾಪ್‌ನಲ್ಲಿ ಆರೋಪ- ಪ್ರತ್ಯಾರೋಪಗಳು ನಡೆಯುತ್ತಿವೆ.
undefined
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಪುನರಾಯ್ಕೆ?
ಈ ಕಾಮಗಾರಿಗಳನ್ನು ಟೆಂಡರ್ ಮೂಲಕ ಹಂಚಿಕೆ ಮಾಡಿ, ಅದು ಸರಿಯಾಗಿ ಕಾರ್ಯಗತವಾಗುವಂತೆ ನೋಡಿಕೊಳ್ಳಬೇಕೆಂದು ಮಾಜಿ ಶಾಸಕ ಶಿವರಾಜ ಸಜ್ಜನರ್ ಆಗ್ರಹಿಸಿದ್ದಾರೆ. ಆದರೆ ಸಿಎಂ ವಿಶೇಷ ಅನುದಾನದಲ್ಲಿ ನೀಡಿದ 5 ಕೋಟಿಯಲ್ಲಿ ತಾಲೂಕಿನ ಬಹುತೇಕ ಹಾಳಾದ ರಸ್ತೆಗಳನ್ನು ಗುರುತಿಸಿ 293 ಕಾಮಗಾರಿಗಳನ್ನು ತುಂಡು ಗುತ್ತಿಗೆಯಲ್ಲಿ ನೀಡಲಾಗಿದೆ. ಹಾಳಾದ ರಸ್ತೆ ಶೀಘ್ರ ದುರಸ್ತಿ ಆಗಲಿ ಎಂಬುದು ಎಲ್ಲರ ಆಶಯ. ಅದಕ್ಕಾಗಿ ಯಾವುದೇ ನಿಯಮ ಉಲ್ಲಂಘನೆ ಮಾಡದೇ ಕಾಮಗಾರಿ ತ್ವರಿತವಾಗಲಿ ಎಂಬ ಉದ್ದೇಶದಿಂದ ತುಂಡು ಗುತ್ತಿಗೆ ನೀಡಲಾಗಿದೆ. ಇದಕ್ಕೆ ತಡೆ ನೀಡಿರುವುದು ಬೇಸರ ತಂದಿದೆ ಎನ್ನುವ ಶಾಸಕ ಶ್ರೀನಿವಾಸ ಮಾನೆ, ಬೇರೆ ಕಡೆ ತುಂಡು ಗುತ್ತಿಗೆ ಇಲ್ಲವೇ, ಬೇರೆ ತಾಲೂಕಿಗೆ ಇಲ್ಲದ ನಿಯಮ ನಮಲ್ಲಿ ಮಾತ್ರ ಯಾಕೆ ಎಂದು ಪ್ರಶ್ನಿಸುತ್ತಾರೆ.
ರಾಜಕೀಯ ಬೇಡ:
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಶ್ರೀನಿವಾಸ ಮಾನೆ, ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ವಾಸ್ತವ ಪರಿಸ್ಥಿತಿ ತಿಳಿಸುತ್ತೇನೆ. ಉಳಿದದ್ದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ನನ್ನದು ತಾಲೂಕಿನ ಅಭಿವೃದ್ಧಿಯ ಆಸಕ್ತಿಯೇ ಹೊರತು ಯಾರನ್ನೂ ವಿರೋಧಿಸುವ ಅಗತ್ಯ ನನಗಿಲ್ಲ. ಬೇರೆ ತಾಲೂಕಿಗೆ . 50 ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾಗಿದೆ. ಈ ತುಂಡು ಗುತ್ತಿಗೆ ವಿರೋಧಿಸುವವರು ಹಾನಗಲ್ಲ ತಾಲೂಕಿಗೆ ಉಳಿದ ತಾಲೂಕುಗಳಂತೆ ಅನುದಾನ ಬಿಡುಗಡೆಗೊಳಿಸಲು ಶ್ರಮಿಸಲಿ. ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಬೇಡ ಎಂಬುದು ನನ್ನ ಅಭಿಪ್ರಾಯ ಎಂದರು.
ಟೆಂಡರ್ ಕರೆಯಲಿ
ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಶಾಸಕ ಶಿವರಾಜ ಸಜ್ಜನರ, ಬಿಜೆಪಿ ಸರಕಾರ ನೀಡಿದ . 15 ಕೋಟಿ ಅನುದಾನವನ್ನು 293 ಕಾಮಗಾರಿಗಳಿಗೆ ತಲಾ 5 ಲಕ್ಷದಂತೆ ತುಂಡು ಗುತ್ತಿಗೆ ನೀಡಿದ್ದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕಾಮಗಾರಿ ತಡೆಹಿಡಿಯಲಾಗಿದೆ. ಇದನ್ನೇ ಟೆಂಡರ್ ಕರೆದು ಕಾಮಗಾರಿ ಮಾಡಲಿ. ಭ್ರಷ್ಟಾಚಾರಕ್ಕೆ ಆಸ್ಪದವಾಗಬಾರದು. ಬೇರೆ ತಾಲೂಕುಗಳಲ್ಲಿ ತುಂಡುಗುತ್ತಿಗೆ ನೀಡಿದ್ದಾರೆ ಎಂಬ ಹೇಳಿಕೆಗೆ ನನ್ನಲ್ಲಿ ಉತ್ತರವಿಲ್ಲ. ಆ ಬಗ್ಗೆ ನನಗೆ ಗೊತ್ತಿಲ್ಲ ಎಂದರು.