
ದೇವದುರ್ಗ (ಜೂ.28): ಪ್ರಾದೇಶಿಕ ಪಕ್ಷದಿಂದ ಮಾತ್ರ ಕರ್ನಾಟಕ ರಾಜ್ಯದ ಅಭಿವೃದ್ಧಿ ಸಾಧ್ಯ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವಂತಹ ಜವಾಬ್ದಾರಿ ನಮ್ಮ-ನಿಮ್ಮೆಲ್ಲರ ಮೇಲಿದೆ ಎಂದು ಪಕ್ಷ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಬಸವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ, ಅಭಿನಂದನಾ ಸಮಾರಂಭ, ಪ್ರತಿಮೆ ಅನಾವರಣ ಹಾಗೂ ಮಿಸ್ಡ್ ಕಾಲ್ ಮುಖಾಂತರ ಪಕ್ಷದ ಸದಸ್ಯತ್ವ ಅಭಿಯಾನ ಸಮಾರಂಭದಲ್ಲಿ ಮಾತನಾಡಿದರು.
ನಿಸ್ವಾರ್ಥ, ನಿಷ್ಕಲ್ಮಶ ಮನಸ್ಸಿನ ಕಾರ್ಯಕರ್ತರಿಂದ ಜೆಡಿಎಸ್ ಉಳಿದಿದೆ. 40ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಆಗಲ್ಲ ಎನ್ನುವುದು ಎಲ್ಲ ಪ್ರಮಾಣಿಕ ಕಾರ್ಯಕರ್ತರ ಯಕ್ಷ ಪ್ರಶ್ನೆಯಾಗಿದೆ. ಅದಕ್ಕಾಗಿಯೇ ರಾಜ್ಯಾದ್ಯಂತ ಸಂಚರಿಸಿ ಪಕ್ಷವನ್ನು ಸಂಘಟಿಸಲಾಗುತ್ತಿದೆ. ಜಾತ್ಯಾತೀತ ತತ್ವದಡಿ ಕೆಲಸ ಮಾಡುತ್ತಿರುವ ಪಕ್ಷದಲ್ಲಿ ಎಲ್ಲ ಸಮಾಜದವರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಾನ ಕಲ್ಪಿಸಿಕೊಡುವ ಕೆಲಸವನ್ನು ಮಾಡಲಾಗುತ್ತಿದ್ದು, ಎಲ್ಲರೂ ಸೇರಿಕೊಂಡು ಪಕ್ಷವನ್ನು ಕಟ್ಟೋಣ ಎಂದರು. ಈ ಭಾಗದಲ್ಲಿ ದೊಡ್ಡ ಕೈಗಾರಿಕೆ ಸ್ಥಾಪಿಸಬೇಕು ಎನ್ನುವುದು ಎಲ್ಲರ ಒತ್ತಾಸೆಯಾಗಿದೆ. ಅದನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಹಂತ ಹಂತವಾಗಿ ಏನು ಮಾಡಬೇಕು ಎನ್ನುವುದರ ಕುರಿತು ಚಿಂತಿಸಲಾಗುವುದು ಎಂದರು. ಜೆಡಿಎಸ್ ಪಕ್ಷದ ವರಿಷ್ಠರು, ಹಿರಿಯರು ಅಧಿಕಾರವಿರಲಿ, ಇರದೇ ಇರಲಿ ಸದಾ ಬಡವರ, ರೈತರ ಹಾಗೂ ಅಭಿವೃದ್ಧಿ ಪರ ಚಿಂತನೆಯನ್ನು ಮಾಡುತ್ತಿರುತ್ತಾರೆ. ಅದೇ ಮಾರ್ಗದಲ್ಲಿ ನಾವೆಲ್ಲರೂ ಸಾಗುತ್ತಿದ್ದೇವೆ. ಪಕ್ಷದ ವರಿಷ್ಠರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ದೇವದುರ್ಗ ಪ್ರದೇಶಕ್ಕೆ ನೀರಾವರಿ ಕಲ್ಪಿಸಿಕೊಡುವುದರ ಮುಖಾಂತರ ಈ ನೆಲಕ್ಕೆ ಶಾಶ್ವತ ಕೊಡುಗೆ ಕೊಟ್ಟಿದ್ದಾರೆ ಅದರ ಫಲವಾಗಿಯೇ ಇಂದು ಹಳ್ಳಿ ಹಳ್ಳಿಗಳಲ್ಲಿ ಅವರ ಮೇಲೆ ಪೂಜ್ಯಭಾವನೆ, ಅಪಾರ ಅಭಿಮಾನ ವ್ಯಕ್ತವಾಗುತ್ತಿದೆ ಎಂದರು.
ಅಭಿವೃದ್ಧಿ ಹಣದ ಶ್ವೇತಪತ್ರ ಹೊರಡಿಸಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಪ್ರವಾಸ ಹಾಗೂ ಪಕ್ಷದ ಸದಸ್ಯತ್ವದ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಇಟ್ಟಿರುವಂಥ ಹಣವನ್ನು ಎಲ್ಲೆಲ್ಲಿ ಕಲ್ಯಾಣ ಮಾಡಿದ್ದೀರಿ, ಯಾವ ರಸ್ತೆ ಅಭಿವೃದ್ಧಿ ಆಗಿದೆ.
ಯಾವ ಶಾಲೆ ಕಟ್ಟಡ ಕಟ್ಟಿದ್ದೀರಿ, ಯಾವ ಬಸ್ ಸ್ಟ್ಯಾಂಡ್ ನಿರ್ಮಾಣ ಮಾಡಿದ್ದೀರಿ, ಕಲ್ಯಾಣ ಕರ್ನಾಟಕಕ್ಕೆ ಏನೇನು ಅಭಿವೃದ್ಧಿ ಕೆಲಸಗಳು ಆಗಿವೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಹೇಳಿದರು. ಕಳೆದ ಹತ್ತು ದಿನಗಳಿಂದ ಸರ್ಕಾರದಲ್ಲಿರುವ ಹಿರಿಯ ಸ್ವಪಕ್ಷಿಯ ಶಾಸಕರೇ ಸರ್ಕಾರ ವಿರುದ್ಧ ಗರಂ ಆಗಿದ್ದಾರೆ. ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ವೈಫಲ್ಯಗಳ ಬಗ್ಗೆ ಹಾಗೂ ಸರ್ಕಾರದಲ್ಲಿರುವ ಶಾಸಕರನ್ನು ಆಡಳಿತ ಪಕ್ಷ ಕಡೆಗಣಿಸುತ್ತಿದೆ ಎಂಬ ಬೇಸರ ಹೊರ ಹಾಕಿದ್ದಾರೆ. ಮಧ್ಯವರ್ತಿಗಳನ್ನ ಇಟ್ಕೊಂಡು ಕಮಿಷನ್ ಪಡೆದುಕೊಂಡು ಅಧಿಕಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.