ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿಗೂ ಲಂಚ, ನಾಚಿಕೆಗೇಡು: ಸಂಸದ ಬಸವರಾಜ ಬೊಮ್ಮಾಯಿ

Kannadaprabha News   | Kannada Prabha
Published : Jun 28, 2025, 11:27 PM IST
Basavaraj Bommai

ಸಾರಾಂಶ

ಜಿಲ್ಲೆಯ ಕೆಲವು ಕೆಪಿಎಸ್ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಮುಖ್ಯ ಶಿಕ್ಷಕರು ಲಂಚಕ್ಕೆ ಕೈಯೊಡ್ಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದರು.

ಹಾವೇರಿ (ಜೂ.28): ಜಿಲ್ಲೆಯ ಕೆಲವು ಕೆಪಿಎಸ್ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಮುಖ್ಯ ಶಿಕ್ಷಕರು ಲಂಚಕ್ಕೆ ಕೈಯೊಡ್ಡುತ್ತಿದ್ದಾರೆ. ಉಚಿತವಾಗಿ ಕೊಡಬೇಕಾದ ಸೀಟಿಗೂ ಲಂಚ ಅಂದ್ರೆ ಬಡವರು ಏನು ಮಾಡಬೇಕು. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದರು. ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ದಿಶಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಡವರ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಭ್ರಷ್ಟಾಚಾರ ನಡೆದರೆ ಮುಂದಿನ ದಿನಗಳಲ್ಲಿ ದೇಶದ ಗತಿ ಏನು? ಶಿಕ್ಷಣ ಇಲಾಖೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವುದು ಗೊತ್ತಾಗಿದೆ. ಉಪನಿರ್ದೇಶಕರು ವಿಷಯ ಗೊತ್ತಾದ ಬಳಿಕವೂ ಯಾವ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ವಿಷಯ ತನಿಖೆಯಿಂದ ಗೊತ್ತಾಗುತ್ತದೆ. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಿ: ಜಿಲ್ಲೆಯಲ್ಲಿ ನಕಲಿ ಪಡಿತರ ಚೀಟಿಗಳ ಹಾವಳಿ ಹೆಚ್ಚಾಗಿದ್ದು, ₹5ರಿಂದ ₹10 ಸಾವಿರ ಪಡೆದು ಅಕ್ರಮವಾಗಿ ಕಾರ್ಡ್ ಮಾಡುತ್ತಿದ್ದಾರೆ. ಅರ್ಹರಿಗೆ ಮಾತ್ರ ಬಿಪಿಎಲ್ ಪಡಿತರ ಚೀಟಿ ನೀಡಬೇಕು. ಜಿಲ್ಲೆಯಲ್ಲಿ ತುರ್ತು ವೈದ್ಯಕೀಯ ಹೆಸರಿನಲ್ಲಿ ಲಂಚ ಪಡೆದು ಬಿಪಿಎಲ್ ಕಾರ್ಡ್ ನೀಡುತ್ತಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಅರ್ಹರಿಗೆ ಮಾತ್ರ ನೀಡಬೇಕು ಎಂದು ಆಹಾರ ಇಲಾಖೆ ಉಪನಿರ್ದೇಶಕ ರಮೇಶ ಎಂ.ಎಸ್. ಅವರಿಗೆ ಸೂಚಿಸಿದರು. ಜಿಲ್ಲೆಯಲ್ಲಿ 46,614 ಎಎವೈ ಹಾಗೂ 3,50,953 ಬಿಪಿಎಲ್ ಸೇರಿ 3,97,567 ಪಡಿತರ ಚೀಟಿಗಳಿದ್ದು, ಈ ಪೈಕಿ 23,906 ಅರ್ಹ ಫಲಾನುಭವಿಗಳ ಪಡಿತರ ಚೀಟಿ ಪಟ್ಟಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ರಮೇಶ ಎಂ.ಎಸ್. ವಿವರಿಸಿದರು.

ಅರಣ್ಯ ಲೂಟಿ ತಡೆಯಿರಿ: ಜಿಲ್ಲೆಯ ಹಲವೆಡೆ ಅರಣ್ಯ ನಾಶಪಡಿಸಿ, ಲೂಟಿ ಹೊಡೆಯುತ್ತಿದ್ದಾರೆ. ಕೃಷಿ ಮಾಡುತ್ತಿದ್ದಾರೆ. ಅರಣ್ಯ ಅವರ ಅಪ್ಪನ ಆಸ್ತಿಯಂತೆ ಹಂಚುತ್ತಿದ್ದಾರೆ. ಸರ್ಕಾರಿ ಕೆಲಸಗಳಿಗೆ ಅಡ್ಡಿಪಡಿಸುವ ಅರಣ್ಯ ಇಲಾಖೆ ಅಧಿಕಾರಿಗಳು, ಸರ್ಕಾರದ ಅರಣ್ಯ ನಾಶ, ಒತ್ತುವರಿ ಯಾಕೆ ತಡೆಯಲ್ಲ. ನೀವು ಕಚೇರಿಯಲ್ಲಿ ಕುಳಿತರೆ ಏನೂ ಗೊತ್ತಾಗಲ್ಲ. ಆರ್‌ಎಫ್‌ಒ, ಫಾರೆಸ್ಟರ್, ಸಿಬ್ಬಂದಿ ಏನು ಮಾಡುತ್ತಿದ್ದಾರೆ. ನಾನು ಸರ್ವೆ ನಂಬರ್ ಕೊಡುತ್ತೇನೆ. ಒತ್ತುವರಿ ತಡೆಯುತ್ತೀರಾ? ಎಂದು ಡಿಎಫ್‌ಒ ಅಬ್ದುಲ್ ಅಜೀಜ್ ಅವರಿಗೆ ಸವಾಲು ಹಾಕಿದರು.

ನಿಮ್ಮ ಮಕ್ಕಳಿಗೆ ಪೌಡರ್ ಕೊಡಿ: ಅಂಗನವಾಡಿ ಮಕ್ಕಳಿಗೆ ನೀಡುವ ಪೌಡರ್ ಸೇವಿಸಲು ಯೋಗ್ಯವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಮೊದಲು ಅಧಿಕಾರಿಗಳು ತಮ್ಮ ಮಕ್ಕಳಿಗೆ ಸೇವಿಸಲು ಕೊಡಿ. ಅವರು ತಿಂದರೆ ಅಂಗನವಾಡಿ ಮಕ್ಕಳಿಗೆ ಕೊಡಿ. ಇಲ್ಲವೇ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದರು.ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಜಿಂದಲ್, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ