ಕ್ಷೇತ್ರದ ಯುವಜನತೆಯ ಕೈಗೆ ಉದ್ಯೋಗ ಕೊಡಿಸುವವರೆಗೆ ನಾನು ವಿಶ್ರಮಿಸುವುದಿಲ್ಲ. ಇದೇ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸುವವರೆಗೆ ಸುಮ್ಮನಿರುವುದಿಲ್ಲ ಎಂದ ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ(ಮೇ.03): ನನಗೆ ಯಾವುದೇ ಜಾತಿ, ಮತ ಭೇದವಿಲ್ಲ. ಅಭಿವೃದ್ಧಿಯೊಂದೇ ನನ್ನ ಜಾತಿ. ಕ್ಷೇತ್ರದ ಜನರ ನೆಮ್ಮದಿಯೊಂದೇ ನನ್ನ ಮತ ಎಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಭರವಸೆ ನೀಡಿದರು. ಕಂಗ್ರಾಳಿ ಕೆ.ಎಚ್ ಮತ್ತು ಕಂಗ್ರಾಳಿ ಬಿ.ಕೆ ಗ್ರಾಮಗಳಲ್ಲಿ ಚುನಾವಣೆ ಪ್ರಚಾರ ನಿಮಿತ್ತ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಜನರೊಂದಿಗೆ ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಪಾದಯಾತ್ರೆ ಹಾಗೂ ರೋಡ್ ಶೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಯುವಜನತೆಯ ಕೈಗೆ ಉದ್ಯೋಗ ಕೊಡಿಸುವವರೆಗೆ ನಾನು ವಿಶ್ರಮಿಸುವುದಿಲ್ಲ. ಇದೇ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸುವವರೆಗೆ ಸುಮ್ಮನಿರುವುದಿಲ್ಲ ಎಂದರು.
ನಿಮ್ಮೂರಿನ ಗಲ್ಲಿ ಗಲ್ಲಿಗಳಲ್ಲಿ ಈಗ ನಾನು ಸಾಗುತ್ತಿರುವ ಈ ಎಲ್ಲ ರಸ್ತೆಗಳನ್ನು ಕಳೆದ 5 ವರ್ಷದಲ್ಲಿ ಮಾಡಿಸಿದ್ದೇನೆ. ನೀವು ಕೇಳಿದ ಕೆಲಸವನ್ನೆಲ್ಲ ಮಾಡಿಸಿಕೊಟ್ಟಿದ್ದೇನೆ. ಹಾಗಾಗಿ ನಿಮ್ಮಲ್ಲಿ ಹಕ್ಕಿನಿಂದ ಮತ ಕೇಳುತ್ತಿದ್ದೇನೆ. ನೀವೂ ಅಷ್ಟೇ ಪ್ರೀತಿಯಿಂದ ಕಳೆದ 5 ವರ್ಷದಿಂದಲೂ ನನ್ನೊಂದಿಗಿದ್ದೀರಿ. ನಾನು ಶಾಸಕಿ, ನೀವು ಮತದಾರರು ಎನ್ನುವ ಭಾವನೆಯೇ ನಮ್ಮಲ್ಲಿಲ್ಲ. ನಾವು ನೀವೆಲ್ಲ ಒಂದೇ ಕುಟುಂಬದವರು. ಮನೆಯ ಮಗಳಾಗಿ ಸಿಕ್ಕ ಅಧಿಕಾರದ ಅವಕಾಶದಲ್ಲಿ ಗ್ರಾಮದ ಅಭಿವೃದ್ಧಿ ಮಾಡುವುದು ನನ್ನ ಕರ್ತವ್ಯ ಎಂದು ತಿಳಿದು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟುವೇಗದಿಂದ ಅಭಿವೃದ್ಧಿ ಕೆಲಸ ಮಾಡೋಣ. ದೊಡ್ಡ ಯೋಜನೆಗಳನ್ನು ತರುವ ಮೂಲಕ ಕ್ಷೇತ್ರದ ಚಿತ್ರಣ ಮತ್ತು ಕ್ಷೇತ್ರದ ಯುವಜನತೆಯ ಬದುಕನ್ನೇ ಬದಲಾಯಿಸೋಣ ಎಂದು ಮನವಿ ಮಾಡಿದರು.
ರಂಗೇರಿದೆ ಅಥಣಿ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾವು..ಈ ಬಾರಿ ಯಾರಾಗ್ತಾರೆ ಅಥಣಿ ಕ್ಷೇತ್ರದ ಅರಸ..?
ನನಗೆ ದೊಡ್ಡದಾದ ಕನಸಿತ್ತು, ರಾಜಹಂಸಗಡ ಕೋಟೆಯನ್ನು ಅಭಿವೃದ್ಧಿಪಡಿಸಬೇಕು. ಅಲ್ಲಿ ದೇಶದಲ್ಲೇ ದೊಡ್ಡದಾದ ಸ್ವರಾಜ್ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಕರ್ತವ್ಯ ಪ್ರಜ್ಞೆಯಿಂದ ಅದನ್ನು ನೆರವೇರಿಸಿದ್ದೇನೆ. ಆದರೆ, ಕೆಲವರು ಅದನ್ನು ರಾಜಕೀಯಗೊಳಿಸಲು ಯತ್ನಿಸಿದರು. ಕ್ಷೇತ್ರದ ಜನರೆಲ್ಲರೂ ಅದನ್ನು ಅರ್ಥ ಮಾಡಿಕೊಂಡು ನನ್ನ ಬೆನ್ನಿಗೆ ನಿಂತಿದ್ದೀರಿ. ಶಾಸೊತ್ರೕಕ್ತವಾಗಿ ನಾನು ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಾಗ ಲಕ್ಷ ಲಕ್ಷ ಸಂಖ್ಯೆಯಲ್ಲಿ ನೀವೆಲ್ಲ ಬಂದು ಪ್ರೋತ್ಸಾಹ ನೀಡಿದ್ದೀರಿ. ಈಗ ರಾಜಹಂಸಗಡ ಉಭಯ ರಾಜ್ಯಗಳ ಅತ್ಯಂತ ಸುಂದರ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಿದೆ. ನಿತ್ಯ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದು ಸಾರ್ಥಕತೆಯಲ್ಲವೇ ಎಂದು ಲಕ್ಷ್ಮೀ ಹೆಬ್ಬಾಳಕರ ಪ್ರಶ್ನಿಸಿದರು.
ಒಬ್ಬ ಮಹಿಳೆಯಾಗಿ, ಮೊದಲ ಬಾರಿ ಶಾಸಕಿಯಾಗಿ, ವಿರೋಧ ಪಕ್ಷದಲ್ಲಿದ್ದುಕೊಂಡು ಇಷ್ಟೊಂದು ಅಭಿವೃದ್ಧಿ ಯೋಜನೆಗಳನ್ನು ತರುವಾಗ ಎಷ್ಟು ಸಂಕಷ್ಟ ಪಟ್ಟಿರಬೇಕೆಂದು ಊಹಿಸಿ. ವಿನಾಕಾರಣ ನನಗೆ ತೊಂದರೆ ಕೊಡುವ ಮೂಲಕ ಕ್ಷೇತ್ರದ ಅಭಿವೃದ್ಧಿ ಯೋಜನೆಗಳನ್ನು ತಡೆಯಲು ಕೆಲವರು ಯತ್ನಿಸಿದ್ದನ್ನೂ ನೀವೆಲ್ಲ ಕಂಡಿದ್ದೀರಿ ಎಂದು ವಿವರಿಸಿದರು.
ಮೇ.10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬ್ಯಾಲೆಟ್ ಯುನಿಟ್‌ನಲ್ಲಿ 4ನೇ ನಂಬರ್‌ನಲ್ಲಿರುವ ನನ್ನ ಫೋಟೋ, ಹಸ್ತದ ಚಿಹ್ನೆಯ ಮುಂದಿರುವ ಬಟನ್ ಒತ್ತುವ ಮೂಲಕ ನನಗೆ ಆಶೀರ್ವದಿಸಿ ಅಂತ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ.