ರಾಜ್ಯದಲ್ಲಿ ಅಭಿವೃದ್ಧಿ, ಕಾನೂನು ಸುವ್ಯವಸ್ಥೆ ಮರೀಚಿಕೆ: ವಿಜಯೇಂದ್ರ

By Kannadaprabha NewsFirst Published May 28, 2024, 12:21 PM IST
Highlights

ಪಾಕಿಸ್ತಾನ್‌ ಪರ ಘೋಷಣೆ ಕೂಗಿದ ದೇಶದ್ರೋಹಿಗಳನ್ನು ಜೈಲಿಗೆ ಹಾಕುವ ಕೆಲಸವನ್ನೂ ಕಾಂಗ್ರೆಸ್‌ ಸರ್ಕಾರಕ್ಕೆ ಮಾಡಲು ಆಗಿಲ್ಲ. ಅಲ್ಪಸಂಖ್ಯಾತರ ಈ ತುಷ್ಟೀಕರಣ ನೀತಿಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 

ಮಂಗಳೂರು/ಉಡುಪಿ(ಮೇ.28):  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಆಯ್ಕೆ ಮಾಡಿದ ಮತದಾರರಿಗೆ ಈಗ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡಂತಾಗಿದೆ. ಕಳೆದ ಒಂದು ವರ್ಷದಲ್ಲಿ ಮುಖ್ಯಮಂತ್ರಿಯಾದಿಯಾಗಿ, ಸಚಿವರು, ಶಾಸಕರು ಒಂದೇ ಒಂದು ಗುದ್ದಲಿ ಪೂಜೆ ಮಾಡಿಲ್ಲ. ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಮರೀಚಿಕೆಯಾಗಿದೆ. ಕಾನೂನು ಸುವ್ಯವಸ್ಥೆ ಕೂಡ ಹದಗೆಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ವಿಧಾನ ಪರಿಷತ್‌ನ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಉಡುಪಿಯಲ್ಲಿ ಮೈತ್ರಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪಾಕಿಸ್ತಾನ್‌ ಪರ ಘೋಷಣೆ ಕೂಗಿದ ದೇಶದ್ರೋಹಿಗಳನ್ನು ಜೈಲಿಗೆ ಹಾಕುವ ಕೆಲಸವನ್ನೂ ಕಾಂಗ್ರೆಸ್‌ ಸರ್ಕಾರಕ್ಕೆ ಮಾಡಲು ಆಗಿಲ್ಲ. ಅಲ್ಪಸಂಖ್ಯಾತರ ಈ ತುಷ್ಟೀಕರಣ ನೀತಿಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್‌ ಸರ್ಕಾರ ರಕ್ಷಣೆಗಿದೆ ಎಂಬ ಕಾರಣಕ್ಕೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಗಲಭೆ ಮಾಡುವ ದುಸ್ಸಾಹಸ ನಡೆದಿದೆ. ರಾಜ್ಯದಲ್ಲಿ ಚುನಾಯಿತ ಸರ್ಕಾರ, ಸಿಎಂ, ಮಂತ್ರಿಮಂಡಲ ಇದೆ ಎನ್ನುವ ಭರವಸೆಯೇ ಜನರಿಂದ ಅಳಿಸಿ ಹೋಗಿದೆ ಎಂದು ಟೀಕಿಸಿದರು.

Latest Videos

ನೀತಿ ಸಂಹಿತೆ ಇದ್ದರೂ ಸಭೆ: ಕರ್ನಾಟಕ ಸರ್ಕಾರಕ್ಕೆ ಚುನಾವಣಾ ಆಯೋಗ ಚಾಟಿ

ಉಡುಪಿ, ದಕ್ಷಿಣ ಕನ್ನಡ ಮಾತ್ರವಲ್ಲ, ಇಡೀ ರಾಜ್ಯಾದಲ್ಲಿಯೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸ್‌ ಅಧಿಕಾರಿಗಳು, ಸರ್ಕಾರದ ಪ್ರತಿನಿಧಿಗಳು ತಮ್ಮ ಕರ್ತವ್ಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಯಾರು ಏನು ಬೇಕಾದರೂ ಮಾಡಬಹುದು ಅನ್ನೋ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ತುಷ್ಟಿಕರಣದಿಂದ ರಾಜ್ಯದ ಜನ ಸಂಕಷ್ಟ ಪಡುತ್ತಿದ್ದಾರೆ ಎಂದು ಆರೋಪಿಸಿದರು.

ನರೇಂದ್ರ ಮೋದಿ ಜಾರಿಗೊಳಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಬಿಟ್ಟು ರಾಜ್ಯಕ್ಕೆ ಹೊಸ ಶಿಕ್ಷಣ ನೀತಿ (ಎಸ್‌ಇಪಿ) ತರುತ್ತೇವೆ ಎಂದು ಹೇಳಿ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಹದಗೆಡಿಸುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳಷ್ಟೇ ಅಲ್ಲ, ಪೋಷಕರು, ಶಿಕ್ಷಕರು ಇದರಿಂದ ಚಿಂತೆಗೆ ಒಳಗಾಗಿದ್ದಾರೆ. ಶಿಕ್ಷಣದ ನೀತಿ ನಿಯಮಗಳ ಕಲ್ಪನೆಯೂ ಇಲ್ಲದಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್‌ ಚುನಾವಣೆ 2024: ಅಭ್ಯರ್ಥಿಗಳ ಒತ್ತಡ, ಬಿಜೆಪಿಗೆ ತಲೆನೋವು..!

ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾವಿರಕ್ಕೂ ಅಧಿಕ ಪ್ರೌಢಶಾಲೆ, 50ಕ್ಕೂ ಅಧಿಕ ಪಾಲಿಟೆಕ್ನಿಕ್‌, 600ಕ್ಕೂ ಅಧಿಕ ಪ.ಪೂ. ಕಾಲೇಜುಗಳಾಗಿವೆ. 5ನೇ ವೇತನ ಆಯೋಗದ ಶಿಫಾರಸ್ಸಿನ ಯಥಾವತ್ ಅನುಷ್ಠಾನ, ಅತಿಥಿ ಉಪನ್ಯಾಸಕರ ಗೌರವಧನ 14 ಸಾವಿರ ರು. ಇದ್ದದ್ದನ್ನು 34 ಸಾವಿರ ರು.ಗೆ ಏರಿಕೆ ಮಾಡುವ ತೀರ್ಮಾನ ಆದದ್ದು ಬಿಜೆಪಿ ಸರ್ಕಾರದ ಕಾಲದಲ್ಲಿ ಎಂದರು.

ವಿಧಾನ ಪರಿಷತ್‌ನಲ್ಲಿ ಗೆದ್ದು ಮತ್ತೆ ಬಿಜೆಪಿಗೆ ಬರುತ್ತೇವೆ ಎಂದು ಪಕ್ಷದಿಂದ ಉಚ್ಛಾಟನೆಗೊಂಡಿರುವ ಕೆಲ ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಆದರೆ ಅವರನ್ನು ಗೆಲ್ಲಿಸುವಂತಹ ಮೂರ್ಖರು ನಮ್ಮ ಪಕ್ಷದ ಮತದಾರರಲ್ಲ. ಆದ್ದರಿಂದ ಬಂಡಾಯ ಸ್ಪರ್ಧೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಉಡುಪಿಯಿಂದ ಬಂಡಾಯವಾಗಿ ಸ್ಪರ್ಧಿಸಿರುವ ರಘುಪತಿ ಭಟ್ಟರಿಗೆ ಪಕ್ಷದಿಂದ ಯಾವುದೇ ಅನ್ಯಾಯವಾಗಿಲ್ಲ. ಅವರಿಗೆ ಎಲ್ಲ ಅವಕಾಶಗಳನ್ನು ನೀಡಲಾಗಿತ್ತು. ಅವುಗಳನ್ನೆಲ್ಲ ಅವರು ಬಳಸಿಕೊಂಡಿದ್ದಾರೆ, ಆದರೆ ಈಗ ಎಡವಿದ್ದಾರೆ. ಶಿಕ್ಷಕರ ಕ್ಷೇತ್ರವನ್ನು ಕರಾವಳಿಗೆ ನೀಡಬೇಕು ಎಂದು ನಾನೂ ದೆಹಲಿಯಲ್ಲಿ ವರಿಷ್ಠರಿಗೆ ಹೇಳಿದ್ದೆ. ಆದರೆ ಮೈತ್ರಿಯ ಕಾರಣಕ್ಕೆ ಅದನ್ನು ಜೆಡಿಎಸ್‌ಗೆ ನೀಡಲಾಗಿದೆ. ಅದನ್ನು ಪಕ್ಷದ ನಾಯಕರು, ಕಾರ್ಯಕರ್ತರು ಒಪ್ಪಿಕೊಳ್ಳಬೇಕು. ಅದು ನಮ್ಮ ಕರ್ತವ್ಯ ಎಂದು ಹೇಳಿದರು.

click me!