ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷದ ಹನಿಮೂನ್ ಪಿರಿಡ್ ಮುಗಿದರೂ ಸಾಧನೆ ಮಾತ್ರ ಶೂನ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕೆ ಮಾಡಿದ್ದಾರೆ.
ಕಲಬುರಗಿ (ಮೇ 28): ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷದ ಹನಿಮೂನ್ ಪಿರಿಡ್ ಮುಗಿದರೂ ಸಾಧನೆ ಮಾತ್ರ ಶೂನ್ಯವಾಗಿದೆ. ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ನಡೆಯುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕೆ ಮಾಡಿದ್ದಾರೆ.
ಕಲಬುರಗಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ. ಅಂದರೆ ಸರ್ಕಾರದ ಹನಿಮೂನ್ ಪಿರಿಡ್ ಮುಗಿದರೂ ಸಾಧನೆ ಶೂನ್ಯವಾಗಿದೆ. ಒಂದು ವರ್ಷದ ಕಾಂಗ್ರೆಸ್ ಸರಕಾರದ ಸಾಧನೆ ಶೂನ್ಯವಾಗಿದೆ. ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ನಡೆಯುತ್ತಿಲ್ಲ. ಭೀಕರ ಬರದಿಂದ ರಾಜ್ಯ ತತ್ತರಿಸಿದೆ.. ಕೇಂದ್ರ ಅನುದಾನ ಕೊಟ್ಟಿಲ್ಲ ಅಂತ ಬೊಬ್ಬೆ ಹೊಡೆಯುತ್ತಿದ್ದರು. ಕೇಂದ್ರ ನೆರವು ನೀಡಿದ್ದಾಗಿದೆ, ಆದರೂ ತಾಂತ್ರಿಕ ಕಾರಣವೊಡ್ಡಿ ಸರಕಾರ ರೈತರಿಗೆ ಪರಿಹಾರ ನೀಡುತ್ತಿಲ್ಲ ಎಂದು ವಾಗ್ದಾಳಿ ಮಾಡಿದರು.
undefined
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲು ಯೋಗ್ಯವಲ್ಲ; ಮಾಜಿ ಶಾಸಕ ಚರಂತಿಮಠ
ರಾಜ್ಯದಲ್ಲಿ ಬೆಳೆ ವಿಮೆ ಮತ್ತು ಪರಿಹಾರ ಎರಡೂ ಸಮರ್ಪಕವಾಗಿ ಕೊಡುತ್ತಿಲ್ಲ. ಸರಕಾರಕ್ಕೆ ರೈತರ ಪರ ನೈಜ ಕಾಳಜಿ ಇಲ್ಲ. ಕರ್ನಾಟಕದ ಕಾನೂನು ಸುವ್ಯವಸ್ಥೆ ದೇಶದಲ್ಲಿಯೇ ಚರ್ಚೆ ಆಗಿದೆ. ಚನ್ನಗಿರಿಯಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲದ ಘಟನೆ ನಡೆದಿದೆ. ಮಟಕಾ ದಂಧೆ ಯಥೇಚ್ಛವಾಗಿ ನಡೆಯುತ್ತಿದೆ. ಅಕ್ರಮ ದಂಧೆಗಳು ಯಾರ ಭಯವೂ ಇಲ್ಲದೇ ನಡೆಯುತ್ತಿವೆ. ಸಾವಿರಾರು ಜನ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ರಾಜ್ಯದಲ್ಲಿ ಸಿಎಂ, ಗೃಹ ಸಚಿವರು ಇದಾರೋ ಇಲ್ಲವೋ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ SC ST ನಿಗಮ ಮಂಡಳಿ ನೌಕರ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕೇಳ್ತೆನೆ ಎಲ್ಲಿ ಹೋಯಿತು ನಿಮ್ಮ ಪ್ರಾಮಾಣಿಕತೆ? ನಮ್ಮ ಸರಕಾರದ ಮೇಲೆ ಭ್ರಷ್ಡಾಚಾರದ ಸುಳ್ಳು ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದೀರಿ. ಆದರೆ ಭ್ರಷ್ಟಾಚಾರದ ನಿಜವಾದ ಪಿತಾಮಹ ಅಂದ್ರೆ ಅದು ಕಾಂಗ್ರೆಸ್ ಪಕ್ಷ. ಚಂದ್ರಶೇಖರ ಸೂಸೈಡ್ ನೋಟ್ ನಲ್ಲಿ ಕೆಲ ಅಧಿಕಾರಿಗಳ ಹೆಸರು ಉಲ್ಲೇಖ ಮಾಡಿದ್ದಾರೆ. ಸಂಬಂಧಿಸಿದ ಸಚಿವರ ಆದೇಶದ ಮೇಲೆ ನೂರಾರು ಕೋಟಿ ಅವ್ಯವಹಾರ ನಡೆದಿದೆ ಅಂತ ನೋಟ್ ನಲ್ಲಿ ಬರೆಯಲಾಗಿದೆ. ಆ ಸಚಿವ ನಾಗೇಂದ್ರರನ್ನ ಕೂಡಲೇ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರೂ. ಅವ್ಯವಹಾರ; ಸಚಿವರ ಹೆಸರು ಬರೆದಿಟ್ಟು ಅಧಿಕಾರಿ ಆತ್ಮಹತ್ಯೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರವನ್ನು ಸಿಟ್ಟಿಂಗ್ ಹೈಕೋರ್ಟ ಜಡ್ಜ್ ರಿಂದ ಈ ಬಗ್ಗೆ ತನಿಖೆ ಆಗಬೇಕು. ಸಿಎಂ ಇದಕ್ಕೆ ಉಡಾಫೆ ಉತ್ತರ ಕೊಡದೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಇಲ್ಲದಿದ್ದಲ್ಲಿ ನಾವು ರಾಜ್ಯಾದ್ಯಂತ ಹೋರಾಟ ಆರಂಭಿಸುತ್ತೇವೆ. ಯಾವುದೇ ಕಾರಣಕ್ಕೂ ಸಚಿವರನ್ನು ಮುಂದುವರೆಯಲು ಬಿಡುವುದಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಸದ್ಯದಲ್ಲೇ ರಾಜ್ಯಪಾಲರ ಭೇಟಿ ಮಾಡುತ್ತೇವೆ. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಪಾಪದ ಕೂಸು. ಇದನ್ನು ನೋಡಿಕೊಂಡು ಬಿಜೆಪಿ ಕೈ ಕಟ್ಟಿ ಕೂಡುವುದಿಲ್ಲ ಎಂದು ಹೇಳಿದರು.