ದೇವರಾಜ ಅರಸು ಆಶಯಗಳು ಸಿದ್ದರಾಮಯ್ಯ ಮೂಲಕ ಮುಂದುವರಿಕೆ: ಸಚಿವ ಡಿ.ಸುಧಾಕರ್

By Kannadaprabha News  |  First Published Aug 21, 2024, 3:09 PM IST

ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ರಾಷ್ಟ್ರ ಕಂಡ ಅಪ್ರತಿಮ ಮುತ್ಸದ್ಧಿ ರಾಜಕಾರಣಿಯಾಗಿದ್ದು ಅವರ ತತ್ವ, ಬದ್ದತೆ ಹಾಗೂ ಆಶಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಮುಂದುವರೆಸಲಾಗುತ್ತಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಬಣ್ಣಿಸಿದರು. 
 


ಚಿತ್ರದುರ್ಗ (ಆ.21): ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ರಾಷ್ಟ್ರ ಕಂಡ ಅಪ್ರತಿಮ ಮುತ್ಸದ್ಧಿ ರಾಜಕಾರಣಿಯಾಗಿದ್ದು ಅವರ ತತ್ವ, ಬದ್ದತೆ ಹಾಗೂ ಆಶಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಮುಂದುವರೆಸಲಾಗುತ್ತಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಬಣ್ಣಿಸಿದರು. ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.

ದೇವರಾಜ ಅರಸು ಸಾಮಾಜಿಕ ನ್ಯಾಯ ತತ್ವದಲ್ಲಿ ನಂಬಿಕೆ ಇಟ್ಟಿದ್ದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿ ಕೊಡಲು ಹೋರಾಡಿದರು ಎಂದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅರಸು ಅವರು ಜಾರಿಗೆ ತಂದ ಯೋಜನೆಗಳ ಫಲವನ್ನು ನಾವೆಲ್ಲರೂ ಇಂದಿಗೂ ಅನುಭವಿಸುತ್ತಿದ್ದೇವೆ. ದೇವರಾಜ ಅರಸು ತಂದ ಸುಧಾರಣೆಗಳಿಂದಾಗಿಯೇ, ರಾಜ್ಯದ ಹಿಂದುಳಿದ ವರ್ಗಗಳು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿದ್ದಾವೆ. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ದೇವರಾಜ ಅರಸು ಅವರ ಮಾರ್ಗದಲ್ಲಿಯೇ ಸಾಗಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ನ್ಯಾಯ ದೊರಕಿಸಿ ಕೊಡಲು ಕಂಕಣ ಬದ್ಧರಾಗಿದ್ದಾರೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.

Latest Videos

undefined

ಡಿಕೆಶಿ ಜತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿ

ಸ್ವತಃ ಬಡ ಕುಟುಂಬದಲ್ಲಿ ಜನಿಸಿದ ದೇವರಾಜ ಅರಸು ತಮ್ಮ ಸ್ವಂತ ಪರಿಶ್ರಮದಿಂದ ಎಲ್ಲವನ್ನು ಮೆಟ್ಟಿ ನಿಂತು ಜೀವನದಲ್ಲಿ ಮುಂದೆ ಬಂದರು. ಅರಸು ಎನ್ನುವ ಸಣ್ಣ ಸಮುದಾಯದಲ್ಲಿ ಜನಿಸಿದ ಅವರಿಗೆ ಯಾವುದೇ ಪ್ರಬಲ ಜಾತಿಗಳ ಬೆಂಬಲವಿರಲಿಲ್ಲ. ಆದರೂ ಎಲ್ಲಾ ಜಾತಿ ಜನರ ಪ್ರೀತಿ ವಿಶ್ವಾಸಗಳಿಸಿ, ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾದರು. ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಲಕ್ಷಾಂತರ ಭೂ ರಹಿತ ಜನರಿಗೆ ಭೂ ಒಡೆತನ ಲಭಿಸುವಂತೆ ಮಾಡಿದರು. ಹಾವನೂರು ವರದಿ ಜಾರಿ ಮಾಡಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದರು. 

1973 ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಹೆಗ್ಗಳಿಕೆ ಅವರದ್ದು ಎಂದು ಸಚಿವ ಡಿ. ಸುಧಾಕರ್ ತಿಳಿಸಿದರು. ಇಂದು ದೇವರಾಜು ಅರಸು ಜನ್ಮ ದಿನ ಮಾತ್ರವಲ್ಲದೇ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಜನ್ಮದಿನವೂ ಆಗಿದೆ. ವಿದ್ಯಾರ್ಥಿಗಳು ಈ ಎಲ್ಲಾ ಮಹನೀಯರ ಕುರಿತಾದ ಪುಸ್ತಕಗಳನ್ನು ಓದಿ, ಅವರ ಕೊಡುಗೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಚಿವ ಡಿ.ಸುಧಾಕರ್ ಕಿವಿಮಾತು ಹೇಳಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ರಾಜ್ಯದ ಹಿಂದುಳಿದ ವರ್ಗಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುನ್ನಲೆಗೆ ಬರಲು ದೇವರಾಜು ಅರಸು ಕಾರಣ. ಶಿವರಾಮ ಕಾರಂತರ ಚೋಮನದುಡಿ ಕಾದಂಬರಿಯಲ್ಲಿ ಚೋಮ ಕಡೆಯವರೆಗೂ ಭೂ ರಹಿತನಾಗಿಯೇ ಉಳಿಯುತ್ತಾನೆ. ಆದರೆ ರಾಜ್ಯದಲ್ಲಿ ಉಳುವವನೇ ಭೂ ಒಡೆಯ ಎನ್ನುವುದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ ದೇವರಾಜು ಅರಸು ಲಕ್ಷಾಂತರ ಭೂ ರಹಿತ ಕೃಷಿ ಕಾರ್ಮಿಕರ ಪಾಲಿನ ವಿಮೋಚಕರಾಗಿ, ಭೂ ಒಡೆತನದ ಹಕ್ಕು ಕಲ್ಪಿಸಿದರು ಎಂದರು.

ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಉಪನ್ಯಾಸ ನೀಡಿ, ಡಿ. ದೇವರಾಜ ಅರಸು ಮೌನಕ್ರಾಂತಿ ಹರಿಕಾರ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‍ಗಳನ್ನು ತೆರೆದರು. ರಾಜ್ಯದಲ್ಲಿ ಮಲ ಹೊರುವ ಪದ್ಧಿತಿಯನ್ನು ನಿಷೇಧಿಸಿದರು. ಅರಸು ಅವರು ತಂದ ಭೂ ಸುಧಾರಣೆ ಫಲವಾಗಿ ರಾಜ್ಯದ 4.85 ಲಕ್ಷ ಭೂ ಗೇಣಿದಾರರು ಭೂ ಮಾಲೀಕರಾಗಿ ಬದಲಾದರು. ಭೂ ರಹಿತರಿಗೆ ಹಂಚಿದ ಜಮೀನುಗಳ ರಕ್ಷಣೆಗಾಗಿ ಭೂ ನ್ಯಾಯಮಂಡಳಿಗಳನ್ನು ಸ್ಥಾಪಿಸಿದರು. ಡಾ. ಎಲ್.ಜಿ ಹಾವನೂರು ವರದಿ ಅನುಷ್ಠಾನ ಮಾಡಿ, ಹಿಂದುಳಿದ ವರ್ಗದವರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿದರು ಎಂದರು.

ಜೀತ ಮುಕ್ತ ಕಾನೂನು ಜಾರಿಗೆ ತಂದು ಜೀತ ಪದ್ದತಿಯನ್ನು ತೊಡೆದು ಹಾಕಿದರು. ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್ ಪಾಸ್, ನ್ಯಾಯಬೆಲೆ ಅಂಗಡಿಗಳ ಸ್ಥಾಪನೆಗಳು ಸಹ ದೇವರಾಜು ಅರಸು ಅವರ ಕೊಡುಗೆಗಳಾಗಿವೆ. ಶುದ್ಧ ಹಸ್ತ ರಾಜಕಾರಣಿಯಾಗಿದ್ದ ದೇವರಾಜ ಅರಸು, ಅಧಿಕಾರವನ್ನು ದುರಪಯೋಗ ಪಡಿಸಿಕೊಂಡು ಹಣ ಸಂಪಾದಿಸಲಿಲ್ಲ. ಅವರು ತೀರಿಹೋದ ಸಂದರ್ಭದಲ್ಲಿ ಆಸ್ಪತ್ರೆಯ ಬಿಲ್ ಸಹಿತ ಪಾವತಿ ಮಾಡಲು ಕುಟುಂಬ ವರ್ಗದವರಲ್ಲಿ ಹಣ ಇರಲಿಲ್ಲ. ಅಂದಿನ ಸರ್ಕಾರ ಅವರ ಆಸ್ಪತ್ರೆಯ ಬಿಲ್ ಪಾವತಿಗೆ ಹಾಗೂ ಅಂತಿಮ ಸಂಸ್ಕಾರ ನೆರವೇರಿಸಲು ಸಹಾಯ ನೀಡಿತು ಎಂದರು.

ಮುಡಾ ತನಿಖೆ ಬಳಿಕ ಸಿದ್ದರಾಮಯ್ಯ ದೋಷಮುಕ್ತರಾದರೆ ಅವರ ಪಾದ ತೊಳೆವೆ: ಶಾಸಕ ಚನ್ನಬಸಪ್ಪ

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ದೇವರಾಜು ಅರಸು ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ನಗರದ ನೀಲಕಂಠೇಶ್ವರ ದೇವಸ್ಥಾನದ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಡಾ.ಆರ್. ಸುಬ್ರಾನಾಯಕ್ ಮೆರವಣಿಗೆಗೆ ಚಾಲನೆ ನೀಡಿದರು. ನಗರದ ದೇವರಾಜು ಅರಸು ಹಿಂದುಳಿದ ವಿದ್ಯಾರ್ಥಿನಿಲಯಗಳಿಂದ ಆಗಮಿಸಿದ ಸಾವಿರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ಮೆರಣಿಗೆ ಗಾಂಧಿ ವೃತ್ತ, ಎಸ್ ಬಿಐ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತರಾಸು ರಂಗಮಂದಿರ ತಲುಪಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ. ಕುಮಾರಸ್ವಾಮಿ, ಜಿಪಂ ಉಪಕಾರ್ಯದರ್ಶಿ ತಿಮ್ಮಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲಾ ಸಮಿತಿ ಅಧ್ಯಕ್ಷ ಶಿವಣ್ಣ, ಆಹಾರ ಇಲಾಖೆ ಜಂಟಿ ನಿರ್ದೇಶಕ ಕೆ.ಸಿ. ಮಧುಸೂಧನ್, ಡಿವೈಎಸ್‍ಪಿ ದಿನಕರ್ ಸೇರಿದಂತೆ ಮತ್ತಿತರರು ಇದ್ದರು.

click me!