ದಿಲ್ಲಿ ಕುರ್ಚಿ ಯಾರಿಗೆ? ಬೆಳಗ್ಗೆ 11ಕ್ಕೆ ಚಿತ್ರಣ| ಆಪ್‌ಗೆ ಸತತ 3ನೇ ಸಲ ಗೆಲ್ಲುವ ವಿಶ್ವಾಸ| ಚುನಾವಣೆ ಸಮೀಕ್ಷೆಗಳು ನಿಜವಾಗುತ್ತಾ?
ನವದೆಹಲಿ[ಫೆ.11]: ಇಡೀ ದೇಶದ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ. 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.8ರಂದು ಚುನಾವಣೆ ನಡೆದಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಎಕ ಆರಂಭವಾಗಲಿದೆ. ಹಾಲಿ ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್‌ಆದ್ಮಿ ಪಕ್ಷ ಮರಳಿ ಅಧಿಕಾರಕ್ಕೇರುವ ಆಶಾಭಾವನೆಯಲ್ಲಿದ್ದರೆ, 22 ವರ್ಷಗಳ ಬಳಿಕ ಮರಳಿ ದೆಹಲಿ ಗದ್ದುಗೆ ಏರುವ ತವಕದಲ್ಲಿ ಬಿಜೆಪಿ ಇದೆ.
70 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 672 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಕಳೆದ ಬಾರಿಯಂತೆ ಈ ಬಾರಿಯೂ ಆಪ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದ್ದು, ಕಾಂಗ್ರೆಸ್ ಇದ್ದೂ ಇಲ್ಲದಂತಾಗಿತ್ತು. ಬಹುತೇಕ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಮರಳಿ ಅಧಿಕಾರಕ್ಕೆ ಬರುವ ಭವಿಷ್ಯ ನುಡಿದಿವೆ. ಹೀಗಾಗಿ ಫಲಿತಾಂಶ ಭಾರೀ ಕುತೂಹಲ ಕೆರಳಿಸಿದೆ. ಮೋದಿ ಮತ್ತು ಅಮಿತ್ ಶಾ ಅಲೆ ಮೀರಿ, ಕೇಜ್ರಿ ಮರಳಿ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಅದು ಬಿಜೆಪಿ ಪಾಲಿಗೆ ಕೊಂಚ ಹಿನ್ನಡೆಯಾಗುವುದು ಖಚಿತ ಎನ್ನಲಾಗಿದೆ.
undefined
2019ರ ಲೋಕಸಭಾ ಚುನಾವಣೆ ಬಳಿಕ ನಡೆದ ಮಹಾರಾಷ್ಟ್ರ, ಹರ್ಯಾಣ ಮತ್ತು ಜಾರ್ಖಂಡ್ ವಿಧಾನಸಭೆಗಳಿಗೆ ಚುನಾವಣೆ ನಡೆದಿತ್ತು. ಈ ಮೂರೂ ರಾಜ್ಯಗಳಲ್ಲೂ ಅಧಿಕಾರರೂಢ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. ಹಾಲಿ ದೆಹಲಿಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲದೇ ಇದ್ದರೂ, 22 ವರ್ಷಗಳ ದೆಹಲಿ ವಿಧಾನಸಭೆ ವಶಕ್ಕೆ ಬಿಜೆಪಿ ಅಮಿತಾ ಶಾ ನೇತೃತ್ವದಲ್ಲಿ ಭರ್ಜರಿ ಪ್ರಚಾರ ನಡೆಸಿತ್ತು. ಪಕ್ಷದ ನಾಯಕರು ಪೌರತ್ವ ತಿದ್ದುಪಡಿ ಕಾಯ್ದೆ, 370ನೇ ವಿಧಿ ರದ್ದು, ರಾಷ್ಟ್ರೀಯತೆ ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಮತ್ತೊಂದೆಡೆ ಆಪ್ ಅಭಿವೃದ್ಧಿ ಅಜೆಂಡಾ ಮುಂದಿಟ್ಟುಕೊಂಡು ಜನರ ಮುಂದೆ ಹೋಗಿತ್ತು.
ಕಳೆದ ಬಾರಿ ದೆಹಲಿ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಯನ್ನೂ ಮೀರಿ ಆಮ್ ಆದ್ಮಿ ಪಕ್ಷ 70ರ ಪೈಕಿ 67 ಸ್ಥಾನ ಗೆದ್ದುಕೊಂಡು ಐತಿಹಾಸಿಕ ಸಾಧನೆ ಮಾಡಿತ್ತು. ಬಿಜೆಪಿ ಕೇವಲ 3 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು.