ಪ್ರಭಾವಿ ಲಿಂಗಾಯತ ಲೀಡರ್ ಬಿಜೆಪಿ ಸೇರ್ಪಡೆ?, ಪಕ್ಷಾಂತರ ಪರ್ವ ಬಗ್ಗೆ ಜಾರಕಿಹೊಳಿ ಹೊಸ ಬಾಂಬ್

By Suvarna News  |  First Published Jul 9, 2022, 7:19 PM IST

* ಪ್ರಭಾವಿ ಲಿಂಗಾಯತ ಲೀಡರ್ ಬಿಜೆಪಿ ಸೇರ್ಪಡೆಯಾಗ್ತಾರಾ?
* ಈ ಬಗ್ಗೆ ಸ್ಪಷ್ಟನೆ ಕೊಟ್ಟ  ಸತೀಶ್ ಜಾರಕಿಹೊಳಿ
* ಪಕ್ಷಾಂತರ ಪರ್ವ ಬಗ್ಗೆ ಜಾರಕಿಹೊಳಿ ಹೊಸ ಬಾಂಬ್


ಬೆಳಗಾವಿ, (ಜುಲೈ.09): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಏಳೆಂಟು ತಿಂಗಳು ಬಾಕಿ ಇದೆ. ಆಗಲೇ ರಾಜ್ಯದಲ್ಲಿ ಚುನಾವಣೆ ಕಾರ್ಯಚಟುವಟಿಕೆಗಳು ಹಾಗೂ ಪಕ್ಷ ಸಂಘಟನೆ ಶುರುವಾಗಿದೆ. ಇದರ ಮಧ್ಯೆ ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡುವ ಚಿಂತನೆ ನಡೆಸಿದ್ದಾರೆ. 

ಇದಕ್ಕೆ ಪುಷ್ಠಿ ನೀಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು  ಪಕ್ಷಾಂತರ ಪರ್ವ ಆರಂಭದ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ಬೆಳಗಾವಿಯಲ್ಲಿ ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ,  ರಾಜ್ಯ ರಾಜಕಾರಣದಲ್ಲಿ ಜನವರಿಯಿಂದ ಪಕ್ಷಾಂತರ ಪರ್ವ ಆರಂಭವಾಗಲಿದೆ. ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಪಕ್ಷಾಂತರ ನಡೆಯಲಿದೆ ಎಂದು ಹೇಳಿದರು.

Tap to resize

Latest Videos

ಪ್ರಭಾವಿ ಲಿಂಗಾಯತ ಲೀಡರ್ (ಎಸ್‌.ಆರ್.ಪಾಟೀಲ್) ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನವರಿಯಲ್ಲಿ ಖಂಡಿತವಾಗಿ ಪಕ್ಷಾಂತರ ಪರ್ವ ಆರಂಭ ಆಗಲಿದೆ. ಒಮ್ಮೊಮ್ಮೆ ಬುಕ್ಕಿಂಗ್ ಮಾಡ್ತಾರೆ. ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಮಾಡ್ತಾರೆ. ರಾಜಕೀಯ ಅಂದ್ರೆ ಹೀಗೆ. ಕೆಲವೊಮ್ಮೆ ಆನ್‍ಲೈನ್ ಬುಕ್ಕಿಂಗ್ ಸಹ ಆಗುತ್ತದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ಗೂ ಸಿದ್ದರಾಮೋತ್ಸವಕ್ಕೂ ಸಂಬಂಧವಿಲ್ಲ: ಸತೀಶ್‌ ಜಾರಕಿಹೊಳಿ

ಪ್ರಭಾಕರ ಕೋರೆ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯ ಬೇರೆ ಬೇರೆ ಗುಂಪಿನಲ್ಲಿ ಚರ್ಚೆ ಆಗುತ್ತಿದೆ. ಕೆಲವರು ನಾವು ಬಿಜೆಪಿಯಲ್ಲಿ ಇರಬೇಕಾ, ಬೇರೆ ಪಕ್ಷಕ್ಕೆ ಹೋಗಬೇಕಾ ಅಂತಾ ಚರ್ಚೆ ನಡೆಸುತ್ತಿದ್ದಾರೆ. ಅದು ಬಿಜೆಪಿ ಪಕ್ಷ ಅಷ್ಟೇ ಅಲ್ಲ ಎಲ್ಲಾ ಪಕ್ಷದಲ್ಲೂ ಪಕ್ಷಾಂತರ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಎಲ್ಲಾ ಪಕ್ಷದಲ್ಲೂ ತಮ್ಮ ತಮ್ಮ ಸ್ಥಾನಮಾನ ಗಟ್ಟಿ ಮಾಡಲು ಚರ್ಚೆ ಮಾಡುತ್ತಲೇ ಇರುತ್ತಾರೆ. ಅಂತಿಮ ನಿರ್ಧಾರ ಅವರಿಗೆ ಬಿಟ್ಟಿರುವುದು ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರು ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದಾರೆ. ಅವರನ್ನು ಸೈಡ್‌ಲೈನ್‌ ಮಾಡಿದ್ದಾರೆ. ಈಗ ಅವರ ಮಕ್ಕಳು ಇಲ್ಲ. ಮುಂದಿನ ಚುನಾವಣೆಯಲ್ಲಿ ಪೂರ್ತಿ ಯಡಿಯೂರಪ್ಪ ಕುಟುಂಬವನ್ನು ಸೈಡ್‌ಲೈನ್‌ ಮಾಡ್ತಾರೆ ಎಂದರು.

ಕಾಂಗ್ರೆಸ್ ಸೇರಲು 6 ಬಿಜೆಪಿ ಕಾರ್ಪೊರೇಟರ್‌ಗಳ ಚಿಂತನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರು ಅಸಮಾಧಾನಗೊಂಡಿದ್ದು ಚರ್ಚೆ ನಡೀತಿದೆ ಎಂಬ ಮಾತು ನನ್ನ ಕಿವಿಗೆ ಬಿದ್ದಿದೆ. ಬಿಜೆಪಿ ಕಾರ್ಪೊರೇಟರ್‌ಗಳು ಪಕ್ಷಕ್ಕೆ ಬಂದ್ರೆ ಸೇರಿಸಿಕೊಳ್ಳುವ ವಿಚಾರ ಚರ್ಚೆ ಆಗಿಲ್ಲ. ಬಂದಾಗ ನೋಡೋಣ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಂಚಮಸಾಲಿ ಮೀಸಲಾತಿ ಸೇರಿಸುವ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಪ್ರಣಾಳಿಕೆ ಜನವರಿ, ಫೆಬ್ರವರಿಯಲ್ಲಿ ಅಂತಿಮ ಆಗುತ್ತದೆ. ಈ ವೇಳೆ ಪಕ್ಷ ಈ ಬಗ್ಗೆ ತೀರ್ಮಾನಿಸುತ್ತದೆ ತಿಳಿಸಿದರು.

click me!