
ಬೆಂಗಳೂರು (ಜು.9): ರಾಜ್ಯಸಭೆ ಚುನಾವಣೆ ವೇಳೆ ಅಡ್ಡ ಮತದಾನ ಮಾಡಿದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ಕೋಲಾರ ಶಾಸಕ ಶ್ರೀನಿವಾಸಗೌಡ ಅವರನ್ನು ವಿಧಾನಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸುವಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಜೆಡಿಎಸ್ ದೂರು ನೀಡಿದೆ.
ಶುಕ್ರವಾರ ವಿಧಾನಸೌಧದಲ್ಲಿ ಕಾಗೇರಿ ಅವರನ್ನು ಭೇಟಿ ಮಾಡಿದ ಜೆಡಿಎಸ್‌ನ ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ ಅವರು ದೂರು ನೀಡಿದರು. ಅಡ್ಡ ಮತದಾನ ಮಾಡಿದ ಜೆಡಿಎಸ್‌ನ ಇಬ್ಬರನ್ನು ಶಾಸಕತ್ವದಿಂದ ಅನರ್ಹಗೊಳಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ದೂರು ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವೆಂಕಟರಾವ್ ನಾಡಗೌಡ, ನಾವು ಇಬ್ಬರು ಶಾಸಕರ ವಿರುದ್ಧ ದೂರನ್ನು ನೀಡಿದ್ದೇವೆ. ಕಳೆದ ಕೆಲವು ದಿನಗಳಿಂದ ಅವರು ನಮ್ಮ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಶ್ರೀನಿವಾಸಗೌಡ ಅವರು ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದು, ಬಹಿರಂಗ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಶ್ರೀನಿವಾಸ ಅವರು ಸಹ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಾರೆ. ಹೀಗಾಗಿ ಇಬ್ಬರ ವಿರುದ್ಧ ಎಲ್ಲಾ ದಾಖಲೆಗಳ ಸಮೇತ ದೂರನ್ನು ನೀಡಿದ್ದೇವೆ. ಸಭಾಧ್ಯಕ್ಷರು ಸಹ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಹೇಳಿದರು.
ಪಕ್ಷ ವಿರೋಧಿ ಚಟುವಟಿಕೆ: ಜೆಡಿಎಸ್‌ನಿಂದ ನಾಲ್ವರ ಉಚ್ಚಾಟನೆ
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಇಂತಹ ದೂರುಗಳಿಂದ ಏನೂ ಪ್ರಯೋಜನವಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ ಅಷ್ಟೇ. ಹಾಗಂತ ಪಕ್ಷದಿಂದ ಏನೂ ಕ್ರಮ ಕೈಗೊಂಡಿಲ್ಲ ಎನ್ನುವ ಸಂದೇಶ ಇರಬಾರದು. ಹೀಗಾಗಿ ನಮ್ಮ ಕೆಲಸ ನಾವು ಮಾಡಿದ್ದೇವೆ ಎಂದರು.
ನಮ್ಮ ಪಕ್ಷ ಮುಗಿಸಲು ಬಿಜೆಪಿ-ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ: ಹೆಚ್.ಡಿ. ರೇವಣ್ಣ:ಮುಂದೆ ನಡೆಯಲಿರುವ 2023ರ ಧಾನಸಭಾ ಚುನಾವಣೆ ರಣರಂಗಕ್ಕೆ ಜೆಡಿಎಸ್ ಪಕ್ಷ ಸಿದ್ಧವಾಗಿದೆ. ನಮ್ಮ ಪಕ್ಷವನ್ನು ಮುಗಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಇಬ್ಬರಿಂದಲು ಸಾಧ್ಯಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಸನದಲ್ಲಿ ತಿಳಿಸಿದರು.
ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಗೂ ಸಹ ಜೆಡಿಎಸ್ ಪಕ್ಷ ರಣರಂಗಕ್ಕೆ ಸಜ್ಜಾಗಿದ್ದು, ಗೆಲುಗೆ ಎಲ್ಲಾ ಪ್ರಯತ್ನ ಮಾಡುವುದು. ಹಾಸನದಲ್ಲಿ ಕಳೆದ ಎರಡು ಮೂರು ದಿನದಿಂದ ಬಿಜೆಪಿ ನಾನಾ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿತ್ತು. ಜಿಲ್ಲೆಯಲ್ಲೂ ಸಹ ಮೋದಿ ಹವಾ ಮುಂದುವರೆದಿದೆ ಎಂದು ಬಿಜೆಪಿ ನಾಯಕರ ಹೇಳಿಕೆಗೆ ಉತ್ತರಿಸಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕಾಲದಿಂದಲೂ ಜೆಡಿಎಸ್ ಪಕ್ಷ ಸೋಲು ಗೆಲುವನ್ನು ಕಂಡಿದೆ. ಕಳೆದ 1 ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಕೋಟ್ಯಂತರ ರೂ ಬೆಳೆ, ರಸ್ತೆಗಳು ಹಾಳಾಗಿದೆ. ಜನ ಜೀವನ ಅಸ್ತವ್ಯಸ್ತವಾಗಿದ್ದು, ಜಿಲ್ಲಾಡಳಿತ ಮಾತ್ರ ಕೇಂದ್ರ ಸಚಿವರ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ ಎಂದು ದೂರಿದರು.
ಮೋದಿ ದೂರ ಇಟ್ಟ ಗುಜರಾತ್ ಗೆಲ್ಲಲು ಕಾಂಗ್ರೆಸ್ ರಣತಂತ್ರ!
ಇಲ್ಲೆ ವಾಸ್ತವ್ಯ ಮಾಡಿರುವ ಕೇಂದ್ರ ಹಾಗೂ ಜಿಲ್ಲಾ ಸಚಿವರು ಸಭೆ ಕರೆದು ಜಿಲ್ಲೆಯ ಪರಿಸ್ಥಿತಿ ಬಗ್ಗೆ ಮಾತಿ ಪಡೆದು ಪ್ರಧಾನಿಗಳ ಗಮನಕ್ಕೆ ತರಬಹುದಿತ್ತು. ಆದರೆ ಹಾಸನ ಜಿಲ್ಲೆಯ ಮಳೆ ಹಾನಿ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಕಳೆದ 6 ತಿಂಗಳಿಂದ ಕೆಡಿಪಿ ಸಭೆ ನಡೆಸಿಲ್ಲ. ಜಿಲ್ಲೆಯಲ್ಲಿ ಕೆಲವೇ ಅಧಿಕಾರಿಗಳ ಕೈಯಲ್ಲಿ ಆಡಳಿತ ನಡೆಸುತ್ತಿದೆ. ಹಾಸನದ ವಿಮಾನ ನಿಲ್ದಾಣ ಮೋದಿ ಕೊಡುಗೆ ಎಂಬ ಕೇಂದ್ರ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವರು ಹಾಸನದ ಪ್ರವಾಸದಲ್ಲಿದ್ದಾರೆ ದಯವಿಟ್ಟು ಅವರು ದಾಖಲೆಗಳನ್ನು ತೆಗೆದು ನೋಡಬೇಕಿದೆ. ಹಾಸನದ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಿದ್ದು ದೇವೇಗೌಡರು. ಈ ಬಗ್ಗೆ ಮಾಹಿತಿ ತೆಗೆದುಕೊಳ್ಳಲಿ ಎಂದರು.
ದೇವೇಗೌಡರ ಕುಟುಂಬವನ್ನು ಕಾಂಗ್ರೆಸ್ ಹಾಗೂ ಬಿಜೆಪಿಯವರೋ ಮುಗಿಸಲು ಸಾಧ್ಯವಿಲ್ಲ. ಇಂತಹ ಹತ್ತು ಜನ ಮಂತ್ರಿಗಳು ಹಾಸನಕ್ಕೆ ಬರಲಿ, ದೇವರ ಹಾಗೂ ಜನರ ಆಶೀರ್ವಾದ ಇರುವವರೆಗೂ ನಮ್ಮ ಕುಟುಂಬಕ್ಕೆ ಯಾರೂ ಏನನ್ನೂ ಮಾಡಲಾಗಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.