ದೆಹಲಿಯಲ್ಲಿ ದಿನವಿಡೀ ನಡೆಸಿದ ಕಸರತ್ತಿನ ನಂತರ ಮೇ 27ರ (ಶನಿವಾರ) ಬೆಳಗ್ಗೆ 11.45ಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡಲು ಕಾಂಗ್ರೆಸ್ ವರಿಷ್ಠರು ನಿರ್ಧರಿಸಿದ್ದು, ಬಹುತೇಕ 24 ಮಂದಿ ನೂತನ ಸಚಿವರು ಪದಗ್ರಹಣ ಮಾಡುವ ಸಾಧ್ಯತೆಯಿದೆ.
ಬೆಂಗಳೂರು (ಮೇ.26): ದೆಹಲಿಯಲ್ಲಿ ದಿನವಿಡೀ ನಡೆಸಿದ ಕಸರತ್ತಿನ ನಂತರ ಮೇ 27ರ (ಶನಿವಾರ) ಬೆಳಗ್ಗೆ 11.45ಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡಲು ಕಾಂಗ್ರೆಸ್ ವರಿಷ್ಠರು ನಿರ್ಧರಿಸಿದ್ದು, ಬಹುತೇಕ 24 ಮಂದಿ ನೂತನ ಸಚಿವರು ಪದಗ್ರಹಣ ಮಾಡುವ ಸಾಧ್ಯತೆಯಿದೆ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ 10 ಮಂದಿ ಸಂಪುಟದಲ್ಲಿದ್ದು, 34 ಸದಸ್ಯ ಬಲದ ಸಂಪುಟದಲ್ಲಿ ಹಾಲಿ 24 ಸ್ಥಾನಗಳು ಖಾಲಿ ಇವೆ. ಸಚಿವ ಸಂಪುಟ ಸೇರ್ಪಡೆಗೆ ಆಕಾಂಕ್ಷಿಗಳಿಂದ ತೀವ್ರ ಒತ್ತಡವಿರುವ ಕಾರಣ ಈ ಎಲ್ಲ ಸ್ಥಾನಗಳನ್ನು ತುಂಬಿಕೊಳ್ಳಲು ಸರಣಿ ಸಭೆ ನಂತರ ವರಿಷ್ಠರು ತೀರ್ಮಾನಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.
ಖಾತೆ ಜಟಾಪಟಿ: ಸಂಪುಟಕ್ಕೆ ಸೇರಿಸಿಕೊಳ್ಳಬೇಕಾದ 24 ಹೆಸರುಗಳ ಬಗ್ಗೆ ಒಂದು ಹಂತದ ತೀರ್ಮಾನವಾಗಿದ್ದರೂ, ಖಾತೆ ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲ. ಪ್ರಭಾವಿ ಖಾತೆಗಳಿಗಾಗಿ ಸಿದ್ದು ಹಾಗೂ ಡಿಕೆಶಿ ಬಣದ ನಡುವೆ ತೀವ್ರ ಪೈಪೋಟಿ ನಡೆದಿರುವ ಹಿನ್ನೆಲೆಯಲ್ಲಿ ಈ ವಿಚಾರ ಇತ್ಯರ್ಥಗೊಳ್ಳುತ್ತಿಲ್ಲ. ಈ ಬಗ್ಗೆ ಶುಕ್ರವಾರವೂ ಚರ್ಚೆ ನಡೆಯಲಿದೆ. ಈ ವಿಚಾರ ಬಗೆಹರಿದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಶುಕ್ರವಾರ ಭೇಟಿ ಮಾಡಿ ಪಟ್ಟಿಗೆ ಒಪ್ಪಿಗೆಯನ್ನು ಪಡೆಯಲಾಗುತ್ತದೆ ಎನ್ನಲಾಗಿದೆ.
ರಾಜ್ಯದ ಕನಿಷ್ಠ 20 ಲೋಕಸಭೆ ಸೀಟು ಗೆಲ್ಲಲು ಕಾಂಗ್ರೆಸ್ ಗುರಿ: ಶಾಸಕಾಂಗ ಸಭೆಯಲ್ಲಿ ಸಿದ್ದು, ಡಿಕೆಶಿ ಸೂಚನೆ
ಸರಣಿ ಸಭೆ: ಸಂಪುಟ ವಿಸ್ತರಣೆ ಸಲುವಾಗಿ ಬುಧವಾರವೇ ದೆಹಲಿ ತಲುಪಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಗುರುವಾರ ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಸರಣಿ ಸಭೆ ನಡೆಸಿದರು. ಇಬ್ಬರೂ ನಾಯಕರು ತಮ್ಮದೇ ಆದ ಪಟ್ಟಿಹೊಂದಿದ್ದರಿಂದ ಈ ಪಟ್ಟಿಗಳ ನಡುವೆ ಸಮತೋಲನ ರೂಪಿಸಲು ವರಿಷ್ಠರು ಹರಸಾಹಸ ನಡೆಸಿದರು.
ಹಿರಿಯರಿಗೆ ಶಾಕ್: ಇದರ ಪರಿಣಾಮವಾಗಿ ಸಂಪುಟ ಸೇರ್ಪಡೆಯಾಗುತ್ತಾರೆ ಎಂಬ ನಿರೀಕ್ಷೆ ಹುಟ್ಟಿಸಿದ್ದ ಕೆಲವರ ಹೆಸರು ಬಿಟ್ಟು ಹೋಗಿದ್ದರೆ, ಹಠಾತ್ ಆಗಿ ಹೊಸ ಹೆಸರುಗಳು ಪಟ್ಟಿಸೇರಿಕೊಂಡ ಲಕ್ಷಣಗಳಿವೆ. ಹರಸಾಹಸ ನಡೆಸಿದ ಹೊರತಾಗ್ಯೂ ಕೆಲ ಹಿರಿಯರಿಗೆ ಅವಕಾಶ ತಪ್ಪಿರುವ ಸೂಚನೆಗಳು ದೊರಕಿವೆ. ಮುಖ್ಯವಾಗಿ ಹಿರಿಯರಾದ ಆರ್.ವಿ. ದೇಶಪಾಂಡೆ, ಜಯಚಂದ್ರ, ಬಿ.ಕೆ. ಹರಿಪ್ರಸಾದ್ ಹಾಗೂ ಎಚ್.ಕೆ. ಪಾಟೀಲ್ ಅವರಿಗೆ ಸಂಪುಟದಲ್ಲಿ ಅವಕಾಶ ಸಿಗುವುದೇ ಎಂಬ ತೀವ್ರ ಕುತೂಹಲವಿತ್ತು.
ಈ ಪೈಕಿ ಎಚ್.ಕೆ. ಪಾಟೀಲ್ ಹೈಕಮಾಂಡ್‌ನ ಪ್ರಭಾವ ಬಳಸಿ ಪಟ್ಟಿಸೇರುವ ಸಾಧ್ಯತೆಯಿದೆ. ಆದರೆ, ಬಿ.ಕೆ. ಹರಿಪ್ರಸಾದ್ ಅವರು ಪಟ್ಟಿಸೇರುವರೇ ಎಂಬ ಕುತೂಹಲವಿದೆ. ಮೂಲಗಳ ಪ್ರಕಾರ ಈಡಿಗ (ಬಿಲ್ಲವ) ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ಮಧು ಬಂಗಾರಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಹರಿಪ್ರಸಾದ್ ಅವರಿಗೆ ಕಷ್ಟಎನ್ನಲಾಗುತ್ತಿದೆ. ಆದರೆ, ಪಟ್ಟಿಅಂತಿಮಗೊಂಡ ನಂತರವೂ ಹರಿಪ್ರಸಾದ್ ಲಾಬಿ ಮುಂದುವರೆಸಿದ್ದು, ಖರ್ಗೆ ಅವರೊಂದಿಗೆ ಶುಕ್ರವಾರ ನಡೆಯುವ ಅಂತಿಮ ಚರ್ಚೆ ವೇಳೆಗೆ ಪಟ್ಟಿಸೇರುವರೇ ಎಂಬುದನ್ನು ಕಾದು ನೋಡಬೇಕು.
ಇನ್ನೂ ಜಯಚಂದ್ರ ಹಾಗೂ ಆರ್.ವಿ.ದೇಶಪಾಂಡೆ ಅವರು ಸಂಪುಟ ಸೇರುವ ಸಾಧ್ಯತೆಗಳು ಕಷ್ಟಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ದೇಶಪಾಂಡೆ ಸಂಪುಟಕ್ಕೆ ಸೇರಿಸಿಕೊಳ್ಳುವ ಒಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆ. ಆದರೆ, ಕಡೆಯ ಚುನಾವಣೆ ಎದುರಿಸುತ್ತಿರುವವರಿಗೆ ಸಂಪುಟದಲ್ಲಿ ಅವಕಾಶ ಬೇಡ. ಇನ್ನು ಮತ್ತೊಬ್ಬ ಬ್ರಾಹ್ಮಣ ಸಮುದಾಯದ ನಾಯಕ ದಿನೇಶ್ ಗುಂಡೂರಾವ್ ಎಐಸಿಸಿ ಹುದ್ದೆ ಹೊಂದಿದ್ದು, ರಾಜ್ಯಗಳ ಉಸ್ತುವಾರಿ ಹೊಣೆಯೂ ಹೊಂದಿರುವುದರಿಂದ ಅವರು ಪಕ್ಷದ ಸೇವೆಯಲ್ಲೇ ಇರಲಿ ಎಂಬ ನಿಲುವು ಹೈಕಮಾಂಡ್‌ನದ್ದು ಎನ್ನಲಾಗಿದೆ.
ದಿಢೀರ್ ಭಾಗ್ಯ: ಸಣ್ಣ ಜಾತಿಗಳ ನೆಪದಲ್ಲಿ ಹಠಾತ್ ಆಗಿ ಉಪ್ಪಾರ ಸಮುದಾಯದ ಪುಟ್ಟರಂಗ ಶೆಟ್ಟಿಹಾಗೂ ಜೈನ ಸಮುದಾಯದ ಹಿರಿಯೂರು ಡಿ. ಸುಧಾಕರ್ ಅವರು ಸಂಪುಟದಲ್ಲಿ ಅವಕಾಶ ಗಿಟ್ಟಿಸುವ ಸಾಧ್ಯತೆಯಿದೆ. ನಾಯಕ ಸಮುದಾಯದಿಂದ ಕೆ.ಎನ್.ರಾಜಣ್ಣ ಅಥವಾ ನಾಗೇಂದ್ರ ಇಬ್ಬರ ಪೈಕಿ ಒಬ್ಬರು ಸ್ಥಾನ ಗಿಟ್ಟಿಸಬಹುದು.
ಪರಿಷತ್‌ನಿಂದ ಯಾರು: ಒಕ್ಕಲಿಗ ಸಮುದಾಯದಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡಬೇಕು ಎಂಬ ಒತ್ತಡ ಹಿನ್ನೆಲೆಯಲ್ಲಿ ಚಿಂತಾಮಣಿಯ ಡಾ. ಎಂ.ಸಿ.ಸುಧಾಕರ್ ಸಂಪುಟದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ. ಇನ್ನು ಹರಿಪ್ರಸಾದ್ ಅವರಿಗೆ ಕೊಕ್ ದೊರೆತರೆ ವಿಧಾನ ಪರಿಷತ್ತಿಗೆ ಸ್ಥಾನ ನೀಡಬೇಕಿರುವುದರಿಂದ ಸಲೀಂ ಅಹಮದ್ ಹಾಗೂ ಪ್ರಕಾಶ್ ಹುಕ್ಕೇರಿ ಅವರ ಹೆಸರು ಕೇಳಿ ಬರುತ್ತಿದೆ. ಹೈಕಮಾಂಡ್ ವರಿಷ್ಠರು ಸಲೀಂ ಅಹ್ಮದ್ ಪರ ಒಲವು ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ. ಇತ್ತೀಚೆಗಷ್ಟೇ ಪಕ್ಷ ಸೇರಿದವರ ಪೈಕಿ ಲಕ್ಷ್ಮಣ ಸವದಿ ಅವರ ಹೆಸರು ಇನ್ನೂ ಚರ್ಚೆಯಲ್ಲಿದೆ. ಆದರೆ, ಪಟ್ಟಿಯಲ್ಲಿ ಅವರ ಹೆಸರು ಸೇರಿದೆಯೇ ಎಂಬುದು ಖಚಿತವಿಲ್ಲ. ಆದರೆ, ಹಾಸನದ ಶಿವಲಿಂಗೇಗೌಡ ಅವರಿಗೆ ಸಂಪುಟದಲ್ಲಿ ಅವಕಾಶ ದೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಖಾತೆ ಕ್ಯಾತೆ ತೀವ್ರ: ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಣಗಳು ಪ್ರಭಾವಿ ಖಾತೆಗಳಿಗಾಗಿ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಖಾತೆಗಾಗಿ ಕ್ಯಾತೆ ಭರ್ಜರಿಯಾಗಿ ನಡೆದಿದೆ. ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ, ಇಂಧನ, ಲೋಕೋಪಯೋಗಿ, ಕಂದಾಯ, ಗೃಹ, ಬೃಹತ್ ಕೈಗಾರಿಕೆ ಮೊದಲಾದ ಪ್ರಭಾವಿ ಖಾತೆಗಳು ತಮ್ಮ ಬೆಂಬಲಿಗರಿಗೆ ದೊರೆಯಬೇಕು ಎಂದು ಪಟ್ಟು ಹಿಡಿದಿರುವ ಕಾರಣ ಖಾತೆ ಕ್ಯಾತೆಯನ್ನು ಸರಳವಾಗಿ ಬಗೆಹರಿಸಲು ಸಾಧ್ಯವಾಗುತ್ತಿದೆ. ಹೀಗಾಗಿ ತಡರಾತ್ರಿಯವರೆಗೂ ಈ ಬಗ್ಗೆ ಚರ್ಚೆ ನಡೆದಿದ್ದು, ಶುಕ್ರವಾರ ಈ ವಿಚಾರ ಅಂತಿಮಗೊಳ್ಳಲಿದೆ ಎನ್ನಲಾಗುತ್ತಿದೆ.
ಸಂಭವನೀಯ ಸಚಿವರು
ಶಿವಾನಂದ ಪಾಟೀಲ
ಶರಣಪ್ರಕಾಶ್ ಪಾಟೀಲ್
ಬೈರತಿ ಸುರೇಶ್
ಶರಣಬಸಪ್ಪ ದರ್ಶನಾಪುರ
ಬಸವರಾಜ ರಾಯರಡ್ಡಿ
ಪಿರಿಯಾಪಟ್ಟಣ ಕೆ. ವೆಂಕಟೇಶ್
ಎಸ್.ಎಸ್. ಮಲ್ಲಿಕಾರ್ಜುನ್
ಅಜಯ್ ಸಿಂಗ್
ಪುಟ್ಟರಂಗ ಶೆಟ್ಟಿ
ಚಿಂತಾಮಣಿ ಸುಧಾಕರ್
ಹಿರಿಯೂರು ಸುಧಾಕರ್
ಎಚ್.ಕೆ. ಪಾಟೀಲ್
ಮಧು ಬಂಗಾರಪ್ಪ
ಶಿವರಾಜ ತಂಗಡಗಿ
ಎನ್.ಚೆಲುವರಾಯಸ್ವಾಮಿ
ಕೆ.ಎಂ. ಶಿವಲಿಂಗೇಗೌಡ
ರಹೀಂ ಖಾನ್
ಈಶ್ವರ ಖಂಡ್ರೆ
ಲಕ್ಷ್ಮೇ ಹೆಬ್ಬಾಳ್ಕರ್
ಕೆ.ಎನ್. ರಾಜಣ್ಣ /ಬಿ.ನಾಗೇಂದ್ರ
ಕೃಷ್ಣ ಬೈರೇಗೌಡ/ ಎಂ.ಕೃಷ್ಣಪ್ಪ
ನರೇಂದ್ರ ಸ್ವಾಮಿ/ ಡಾ.ಎಚ್.ಸಿ.ಮಹದೇವಪ್ಪ