
ತುಮಕೂರು/ನಾಗಮಂಗಲ (ಮೇ.22): ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರು ಭಾನುವಾರ ತುಮಕೂರು ಜಿಲ್ಲೆ ನೊಣವಿನಕೆರೆ ಕಾಡಸಿದ್ದೇಶ್ವರ ಮಠ ಹಾಗೂ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಅಜ್ಜಯ್ಯನ ಹೆಸರಿನಲ್ಲಿ ಗೌಪ್ಯತಾ ಪ್ರಮಾಣ ವಚನ ಸ್ವೀಕರಿಸಿದ್ದ ಡಿಕೆಶಿ, ಈ ವಾರದಲ್ಲಿ ಎರಡನೇ ಬಾರಿಗೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡುತ್ತಿರುವುದು ವಿಶೇಷ.
ಬೆಳಗ್ಗೆ ಮಠಕ್ಕೆ ಆಗಮಿಸಿದ ಕೂಡಲೇ ಅಜ್ಜಯ್ಯನ ದರ್ಶನ ಪಡೆದರು. ಬಳಿಕ, ಕರಿವೃಷಭ ದೇಶಿಕೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಅಜ್ಜಯ್ಯನಿಗೆ ಪೂಜೆ ಸಲ್ಲಿಸಿದರು. ನಂತರ, ಮಠದ ಆವರಣದಲ್ಲಿ ಆನೆಯ ಆಶೀರ್ವಾದ ಪಡೆದು, ಆನೆಗೆ ಬಾಳೆಹಣ್ಣನ್ನು ತಿನ್ನಿಸಿದರು. ಈ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿ, 2004ರಿಂದಲೂ ಈ ಮಠಕ್ಕೆ ಬರುತ್ತಿದ್ದೇನೆ. ನನ್ನ ಮನಸ್ಸಿನ ಶಾಂತಿಗೆ, ನಂಬಿಕೆಗೆ, ಮಾರ್ಗದರ್ಶನಕ್ಕೆ ಈ ಕ್ಷೇತ್ರ ನಿಂತಿದೆ. ದೇವರ ಸನ್ನಿಧಿ ಗಂಗಾಧರ ಅಜ್ಜ, ಕಾಡಸಿದ್ದೇಶ್ವರ ದರ್ಶನ ಮಾಡಲು ಬಂದಿರುವೆ ಎಂದರು.
ಡಿ.ಕೆ.ಶಿವಕುಮಾರ್ ಡಿಸಿಎಂ: ರಾಮನಗರ ಜಿಲ್ಲೆಯಲ್ಲಿ ಮೂಡಿದ ಅಭಿವೃದ್ಧಿ ನಿರೀಕ್ಷೆಗಳು
ಬಳಿಕ, ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದರು. ನಾಗಮಂಗಲ ಶಾಸಕ ಎನ್.ಚಲುವರಾಯಸ್ವಾಮಿ, ಮದ್ದೂರು ಶಾಸಕ ಕದಲೂರು ಉದಯ ಮತ್ತು ಕುಣಿಗಲ್ ಶಾಸಕ ರಂಗನಾಥ್ ಅವರೊಂದಿಗೆ ಆಗಮಿಸಿದ ಡಿಕೆಶಿಗೆ ಮಠದ ವತಿಯಿಂದ ಮಂಗಳವಾದ್ಯ ಮತ್ತು ಪೂರ್ಣಕುಂಭದ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ಬಳಿಕ, ಕ್ಷೇತ್ರದ ಕಾಲಭೈರವೇಶ್ವರಸ್ವಾಮಿ, ಮಾಳಮ್ಮದೇವಿ, ಆದಿಶಕ್ತಿ ಸ್ಥಂಬಾಬಿಕ ಸೇರಿದಂತೆ ಎಲ್ಲ ದೇವತೆಗಳಿಗೆ ಪೂಜೆ ಸಲ್ಲಿಸಿದರು. ಕ್ಷೇತ್ರದಲ್ಲಿರುವ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳ ಮಹಾಸಮಾಧಿಗೂ ವಿಶೇಷ ಪೂಜೆ ಸಲ್ಲಿಸಿದರು.
Bagalkote: ಮಲಪ್ರಭಾ ನದಿಗೆ ನೀರು ಬಿಡಲು ಸಿಎಂ ಸಿದ್ದರಾಮಯ್ಯ ಸೂಚನೆ
ಮಠದ ಸಂಪ್ರದಾಯದಂತೆ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳು ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಆಶೀರ್ವದಿಸಿದರು. ಬಳಿಕ, ನಿರ್ಮಲಾನಂದನಾಥ ಸ್ವಾಮೀಜಿ ಅವರೊಂದಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಗೌಪ್ಯವಾಗಿ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿ, ನಾನು ಕಾಲಭೈರವೇಶ್ವರಸ್ವಾಮಿಯ ಭಕ್ತ. ಹಾಗಾಗಿ ಭಗವಂತನಿಗೆ ಕೈ ಮುಗಿಯಲು ಕ್ಷೇತ್ರಕ್ಕೆ ಬಂದಿದ್ದೇನೆ. ಪ್ರಕೃತಿ ಯಾರ ಕೈಯಲ್ಲೂ ಇಲ್ಲ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಏನೇನು ಸಮಸ್ಯೆ, ತೊಂದರೆ ಇದೆಯೋ ಅವೆಲ್ಲವನ್ನೂ ಸರಿ ಮಾಡುವ ಕಾಲ ಬಂದಿದೆ. ಎಲ್ಲವನ್ನೂ ನಾವು ಸರಿ ಮಾಡುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.